ಎಚ್‌–4 ವೀಸಾ ರದ್ದು ವಿವಾದ: ಮರುಪರಿಶೀಲನೆಗೆ ಸಂಸದರ ಒತ್ತಾಯ

0
16

ಎಚ್‌–1ಬಿ ವೀಸಾ ಹೊಂದಿರುವ ಅವಲಂಬಿತರಿಗೆ ಉದ್ಯೋಗದಲ್ಲಿ ತೊಡಗಲು ಇರುವ ಅವಕಾಶವನ್ನು ರದ್ದುಪಡಿಸುವ ಬಗ್ಗೆ ಪುನರ್‌ಪರಿಶೀಲನೆ ನಡೆಸುವಂತೆ ಕ್ಯಾಲಿಫೋರ್ನಿಯಾದ 15 ಸದಸ್ಯರನ್ನೊಳಗೊಂಡ ಸಂಸದರ ತಂಡ ಒತ್ತಾಯಿಸಿದೆ.

ವಾಷಿಂಗ್ಟನ್ : ಎಚ್‌–1ಬಿ ವೀಸಾ ಹೊಂದಿರುವ ಅವಲಂಬಿತರಿಗೆ ಉದ್ಯೋಗದಲ್ಲಿ ತೊಡಗಲು ಇರುವ ಅವಕಾಶವನ್ನು ರದ್ದುಪಡಿಸುವ ಬಗ್ಗೆ ಪುನರ್‌ಪರಿಶೀಲನೆ ನಡೆಸುವಂತೆ ಕ್ಯಾಲಿಫೋರ್ನಿಯಾದ 15 ಸದಸ್ಯರನ್ನೊಳಗೊಂಡ ಸಂಸದರ ತಂಡ ಒತ್ತಾಯಿಸಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವಧಿಯಲ್ಲಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಈಗ ರದ್ದುಪಡಿಸಲು ಮುಂದಾಗಿರುವುದು ಸರಿಯಲ್ಲ. ಈಗಿರುವ ನಿಯಮಾವಳಿಗಳನ್ನು ಯಥಾವತ್ತಾಗಿ ಮುಂದುವರಿಸಿ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಆಗ್ರಹಿಸಿದೆ.

‘ಎಚ್‌–4 ವೀಸಾ ನೀಡುವುದರಿಂದ, ಎಚ್‌–1ಬಿ ವೀಸಾ ಪಡೆದವರ ಮತ್ತು ಅವರ ಕುಟುಂಬದವರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಅವರನ್ನು ವಲಸೆಗಾರರ ಬದಲು ಶಾಶ್ವತ ನಿವಾಸಿಗಳು ಎಂದು ಪರಿಗಣಿಸಬೇಕು. ಇದರಿಂದ ಅವರ ಆದಾಯ ದ್ವಿಗುಣವಾಗಲು ಅನುವಾಗಲಿದೆ. ಅಲ್ಲದೆ ಇಲ್ಲಿಯೇ ಉದ್ಯಮ ಪ್ರಾರಂಭಿಸಿ ಅಮೆರಿಕದವರಿಗೆ ಉದ್ಯೋಗ ಒದಗಿಸಲು ಸಾಧ್ಯವಾಗುತ್ತದೆ’ ಎಂದು ಆಂತರಿಕ ಭದ್ರತಾ ಕಾರ್ಯದರ್ಶಿ ಕಿರ್ಸ್ಜೆನ್ ಎಂ. ನೀಲ್ಸೆನ್ ಅವರಿಗೆ ಬರೆದಿರುವ ಪತ್ರದಲ್ಲಿ ಸಂಸದರು ತಿಳಿಸಿದ್ದಾರೆ.

‘ಈ ಸೌಲಭ್ಯವನ್ನು ತೆಗೆದುಹಾಕಿದರೆ ವಲಸಿಗರಿಗೆ ಹೂಡಿಕೆ ಮಾಡಲು ಅವಕಾಶ ಇಲ್ಲದಂತಾಗುತ್ತದೆ. ಅಲ್ಲದೆ ದೇಶದ ಆರ್ಥಿಕತೆ ವೃದ್ಧಿಗೆ ಪ್ರೋತ್ಸಾಹ ಇರುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಚ್‌1–ಬಿ ವೀಸಾ ಹೊಂದಿದವರ ಅವಲಂಬಿತರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಒಬಾಮ ಸರ್ಕಾರದ ಅವಧಿಯಲ್ಲಿ ಅವಕಾಶ ನೀಡಲಾಗಿತ್ತು. ಈ ಆದೇಶವನ್ನು ರದ್ದು ಮಾಡುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲು ಟ್ರಂಪ್‌ ಸರ್ಕಾರ ಮುಂದಾಗಿದೆ. ಆದರೆ, ಈ ಕುರಿತ ಆದೇಶ ಇನ್ನೂ ಹೊರ ಬಿದ್ದಿಲ್ಲ.

ಎಚ್‌1–ಬಿ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಆರ್ಥಿಕ ತೊಂದರೆಯಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ದೇಶ ಬಿಟ್ಟು ಹೊರಹೋಗಿದ್ದಾರೆ. ಅವರ ಅವಲಂಬಿತರಿಗೆ ಕೆಲಸ ಮಾಡಲು ಅನುಮತಿ ನೀಡದೇ ಇರುವುದೇ ಇದಕ್ಕೆಲ್ಲ ಕಾರಣ ಎಂದು ಸಂಸದರು ತಿಳಿಸಿದ್ದಾರೆ.

‘ವಲಸೆಗಾರರು ಹಾಗೂ ಅವರ ಕುಟುಂಬಸ್ಥರು ‘ಗ್ರೀನ್‌ ಕಾರ್ಡ್‌’ ಪಡೆಯಲು ದಶಕಗಟ್ಟಲೇ ಕಾಯಬೇಕಿದೆ. ಅವರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಆಂತರಿಕ ಭದ್ರತಾ ಇಲಾಖೆಯು ಗುರುತಿಸಿ. ಎಚ್‌1–ಬಿ ವೀಸಾದಾರರ ಸಂಗಾತಿಗಳಿಗೆ ಕೆಲಸದ ಅನುಮತಿ ಪತ್ರದ ಅವಧಿಯನ್ನು ವಿಸ್ತರಿಸಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಸಿಲಿಕಾನ್‌ ವ್ಯಾಲಿಯಂತಹ ಪ್ರದೇಶದಲ್ಲಿ ವಾಸಿಸಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಎಚ್‌1–ಬಿ ವೀಸಾ ಪಡೆದ ವೃತ್ತಿಪರರಿಗೆ ಒಂದೇ ಆದಾಯ ಮೂಲವಿದ್ದರೆ ಕುಟುಂಬ ನಿರ್ವಹಣೆಗೆ  ಕಷ್ಟವಾಗಲಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಎಚ್‌–4 ನೀತಿ ಜಾರಿಯಾಗಿ ಮೂರು ವರ್ಷವಾಗಿದ್ದು, 1 ಲಕ್ಷಕ್ಕೂ ಅಧಿಕ ವೃತ್ತಿಪರರು ಇದರ ಅನುಕೂಲ ಪಡೆದುಕೊಂಡಿದ್ದಾರೆ. ಅವರು ಕುಟುಂಬ ನಿರ್ವಹಣೆ ಜೊತೆಗೆ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ’ ಎಂದು ತಿಳಿಸಲಾಗಿದೆ.