ಎಚ್​​ 1 ಬಿ ವೀಸಾ ಅರ್ಜಿ ಶುಲ್ಕ ಪರಿಷ್ಕರಿಸಿದ ಅಮೆರಿಕ: 10 ಡಾಲರ್ ಹೆಚ್ಚಳ

0
6

ಅಮೆರಿಕ ತನ್ನ ವಲಸೆ ನೀತಿಯ ಪರಿಷ್ಕೃತ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಎಚ್ -1 ಬಿ ವೀಸಾ ಅರ್ಜಿ ಶುಲ್ಕ 10 ಡಾಲರ್ ಹೆಚ್ಚಿಸುವುದಾಗಿ ನವೆಂಬರ್ 7 ರ ಗುರುವಾರ ಘೋಷಿಸಿದೆ.

ವಾಷಿಂಗ್ಟನ್: ಅಮೆರಿಕ ತನ್ನ ವಲಸೆ ನೀತಿಯ ಪರಿಷ್ಕೃತ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಎಚ್ –1 ಬಿ ವೀಸಾ ಅರ್ಜಿ ಶುಲ್ಕ 10 ಡಾಲರ್ ಹೆಚ್ಚಿಸುವುದಾಗಿ ನವೆಂಬರ್ 7 ರ  ಗುರುವಾರ ಘೋಷಿಸಿದೆ.

ಹೆಚ್ಚಿಸಲಾಗುವ 10 ಡಾಲರ್ ಹಿಂತಿರುಗಿಸಲಾರದ ಮೊತ್ತವಾಗಿದ್ದು, ಹೊಸ ವಿದ್ಯುನ್ಮಾನ ದಾಖಲಾತಿ ವ್ಯವಸ್ಥೆಯನ್ನು ಬಲಪಡಿಸಲು ಬಳಕೆಯಾಗಲಿದೆ ಎಂದು ಹೇಳಿದೆ. ಹೊಸ ವ್ಯವಸ್ಥೆಯಿಂದ ಎಚ್​​-1ಬಿ ವೀಸಾ ಗಳನ್ನು ಪರಿಣಾಮಕಾರಿಯಾಗಿ ಆಯ್ಕೆ ಮಾಡಲು ಅರ್ಜಿದಾರರು ಮತ್ತು ಫೆಡರಲ್ ಏಜೆನ್ಸಿಗಳು ಇಬ್ಬರಿಗೂ ಸಹಕಾರಿಯಾಗಲಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ(ಯುಎಸ್​​ಸಿಐಎಸ್​) ಇಲಾಖೆ ತಿಳಿಸಿದೆ.

ವಿದ್ಯುನ್ಮಾನ ದಾಖಲಾತಿ ವ್ಯವಸ್ಥೆಯು ವಲಸೆ ವ್ಯವಸ್ಥೆಯ ಆಧುನೀಕರಣದ ಭಾಗವಾಗಿದೆ. ಇದರಿಂದ ಎಚ್​​ 1 ಬಿ ವೀಸಾ ಪಡೆಯುವಾಗ ನಡೆಯುವ ಮೋಸಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಅಲ್ಲದೇ ಅರ್ಜಿ ಪರಿಷ್ಕರಣೆ ತೀವ್ರಗೊಳಿಸುವುದು ಮತ್ತು ಯೋಜನೆಯ ಸಮಗ್ರತೆಯನ್ನು ಕಾಯ್ದುಕೊಳ್ಳಲು ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಯುಎಸ್​​ಸಿಐಎಸ್​ ಕಾರ್ಯನಿರ್ದೇಶಕ ಕೆನ್ ಕೆನ್ ಕುಕಿನೆಲ್ಲಿ ತಿಳಿಸಿದ್ದಾರೆ.

ಅಮೆರಿಕದಲ್ಲಿರುವ ಕಂಪನಿಗಳು ವಿದೇಶಗಳಿಂದ ಪ್ರತಿಭಾವಂತ ನೌಕರರನ್ನು ನೇಮಿಸಿಕೊಳ್ಳಲು ಎಚ್​​ 1 ಬಿ ವೀಸಾ ಯೋಜನೆ ಅವಕಾಶ ಕಲ್ಪಿಸುತ್ತದೆ. ಹೊಸ ಇಲೆಕ್ಟ್ರಾನಿಕ್ ದಾಖಲಾತಿ ವ್ಯವಸ್ಥೆ ಪರೀಕ್ಷಾ ಹಂತದಲ್ಲಿದ್ದು 2021 ರಿಂದ ಜಾರಿಗೆ ಬರಲಿದೆ. ಅಂದಿನಿಂದಲೇ ಎಚ್​​ 1 ಬಿ ವೀಸಾ ಅರ್ಜಿ ಶುಲ್ಕ ಹೆಚ್ಚಳವಾಗಲಿದೆ. (ಏಜೆನ್ಸೀಸ್​)