ಎಚ್​ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ಸನ್ನದ್ಧ

0
642

ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್​ಎಎಲ್) ದೇಶೀಯವಾಗಿ ನಿರ್ವಿುಸಿರುವ ಲಘು ಯುದ್ಧ ಹೆಲಿಕಾಪ್ಟರ್​ನಿಂದ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ.

ನವದೆಹಲಿ: ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್​ಎಎಲ್) ದೇಶೀಯವಾಗಿ ನಿರ್ವಿುಸಿರುವ ಲಘು ಯುದ್ಧ ಹೆಲಿಕಾಪ್ಟರ್​ನಿಂದ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ.

ಎಚ್​ಎಎಲ್​ನ ಇಂಜಿನಿಯರ್ ಹಾಗೂ ಪೈಲಟ್​ಗಳು ಇತ್ತೀಚೆಗೆ ಒಡಿಶಾದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದಾರೆ. ಕ್ಷಿಪಣಿ, ರಾಕೆಟ್ ಹಾಗೂ ಗನ್​ಗಳನ್ನು ಲಘು ಯುದ್ಧ ಹೆಲಿಕಾಪ್ಟರ್(ಎಲ್​ಸಿಎಚ್)ನಿಂದ ಪ್ರಯೋಗಿಸಲಾಗಿದೆ. ಎಲ್ಲ ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಹೆಲಿಕಾಪ್ಟರ್, ಈಗ ಭಾರತೀಯ ಸೇನೆ ಸೇರ್ಪಡೆಗೆ ಸಿದ್ಧವಾಗಿದೆ. ಸೇನೆಯ ಅಗತ್ಯಕ್ಕೆ ತಕ್ಕ ಎಲ್ಲ ಅಂಶಗಳನ್ನು ಕಾಪ್ಟರ್​ನಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಯುದ್ಧ ಸನ್ನದ್ಧ ಹೆಲಿಕಾಪ್ಟರ್​ಗಳನ್ನು ನಿರ್ವಿುಸುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾದಂತಾಗಿದೆ. ಭಾರತ ಇಲ್ಲಿಯವರೆಗೆ ಅಮೆರಿಕ, ಬ್ರಿಟನ್ ಹಾಗೂ ಇತರ ದೇಶಗಳಿಂದ ಯುದ್ಧ ಸನ್ನದ್ಧ ಹೆಲಿಕಾಪ್ಟರ್​ಗಳನ್ನು ಖರೀದಿಸುತ್ತಿತ್ತು.

ಕೇಂದ್ರ ಸರ್ಕಾರ ಈಗಾಗಲೇ 15 ಎಲ್​ಸಿಎಚ್ ಖರೀದಿಸಲು ಮುಂದಾಗಿದೆ. ಇದರಲ್ಲಿ 10 ಹೆಲಿಕಾಪ್ಟರ್​ಗಳನ್ನು ವಾಯುಪಡೆ ಹಾಗೂ ಉಳಿದ 5 ಹೆಲಿಕಾಪ್ಟರ್​ಗಳನ್ನು ಭೂಸೇನೆಗೆ ನೀಡಲಾಗುತ್ತದೆ. ನಕ್ಸಲ್ ಹಾಗೂ ಜಮ್ಮು-ಕಾಶ್ಮೀರದಂತ ಉಗ್ರ ಪೀಡಿತ ಪ್ರದೇಶಗಳಲ್ಲಿನ ಕಾರ್ಯಾಚರಣೆಗೆ ಈ ಹೆಲಿಕಾಪ್ಟರ್ ನೆರವಾಗಲಿದೆ.

ವಿಶೇಷತೆ

# ಆಕಾಶದಿಂದ ಭೂಮಿಗೆ ಹಾಗೂ ಆಕಾಶದಲ್ಲಿನ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ

#ಸಿಯಾಚಿನ್ ಪರ್ವತದಲ್ಲಿಯೂ ಕಾರ್ಯಾಚರಣೆ ಮಾಡುವಂತಹ ತಂತ್ರಜ್ಞಾನ

# ಪೈಲಟ್​ಗಳಿಗೆ ಇನ್ಪ್ರಾರೆಡ್ ವೀಕ್ಷಣಾ ಸೌಲಭ್ಯ

# ಹೆಲಿಕಾಪ್ಟರ್​ನ ದಿಕ್ಕು ಬದಲಿಸದೇ ಶತ್ರುಗಳ ಮೇಲೆ ದಾಳಿ

# ಸಣ್ಣ ಯುದ್ಧ ವಿಮಾನಗಳನ್ನು ಕೂಡ ಎದುರಿಸುವ ಹಾಗೂ ದಾಳಿ ನಡೆಸುವ ಸಾಮರ್ಥ್ಯ

# ತೀರಾ ಕೆಳ ಹಂತದಲ್ಲಿಯೂ ಹಾರಾಟ ನಡೆಸಲು ಅವಕಾಶ