‘ಎಂಎಸ್‌ಎಂಇ’ಗೆ ದೀಪಾವಳಿ ಕೊಡುಗೆ

0
289

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ರಿಯಾಯ್ತಿಗಳನ್ನು ಘೋಷಿಸಿದ್ದಾರೆ.

ನವದೆಹಲಿ (ಪಿಟಿಐ): ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ರಿಯಾಯ್ತಿಗಳನ್ನು ಘೋಷಿಸಿದ್ದಾರೆ.

1 ಕೋಟಿವರೆಗಿನ ಸಾಲವನ್ನು 59 ನಿಮಿಷಗಳಲ್ಲಿ ಮಂಜೂರು ಮಾಡಲು ನೆರವಾಗುವ ಪ್ರತ್ಯೇಕ ಅಂತರ್ಜಾಲ ತಾಣಕ್ಕೆ ಪ್ರಧಾನಿ ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ಶೇ 2ರಷ್ಟು ಬಡ್ಡಿ ರಿಯಾಯ್ತಿ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.

ಉದ್ಯೋಗ ಅವಕಾಶಗಳನ್ನು ನೀಡುವ ದೇಶದ ಎರಡನೆ ಅತಿ ದೊಡ್ಡ ವಲಯವಾಗಿರುವ ‘ಎಂಎಸ್‌ಎಂಇ’ಗಳ ಪ್ರಗತಿಗೆ ಈ ಕೊಡುಗೆಗಳು ಭಾರಿ ಉತ್ತೇಜನ ನೀಡಲಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಾಯಿತ ‘ಎಂಎಸ್‌ಎಂಇ’ಗಳಿಗೆ ಒಂದು ಗಂಟೆಯ ಒಳಗೆ  1 ಕೋಟಿವರೆಗಿನ ಸಾಲ ಮಂಜೂರು ಮಾಡುವ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಜಿಎಸ್‌ಟಿ ನೋಂದಾಯಿತ ‘ಎಂಎಸ್‌ಎಂಇ’ಗಳಿಗೆ ಈ ಮೊತ್ತದ ಸಾಲದ ಬಡ್ಡಿಯಲ್ಲಿ ಶೇ 2ರಷ್ಟು ರಿಯಾಯ್ತಿ ಸೌಲಭ್ಯವೂ ಇದೆ.

ರಫ್ತು ವಹಿವಾಟಿನಲ್ಲಿ ತೊಡಗಿರುವ ಉದ್ದಿಮೆ ಸಂಸ್ಥೆಗಳು ಸರಕನ್ನು ರಫ್ತು ಮಾಡುವ ಮುಂಚಿನ ಮತ್ತು ನಂತರದ ವಹಿವಾಟಿನ ಸಾಲದ ಬಡ್ಡಿ ರಿಯಾಯ್ತಿಯನ್ನು ಸದ್ಯದ ಶೇ 3 ರಿಂದ ಶೇ 5ಕ್ಕೆ ಹೆಚ್ಚಿಸಲಾಗಿದೆ.

‘ಕಾರ್ಮಿಕ ಕಾಯ್ದೆಯಲ್ಲಿ ಸಡಿಲಿಕೆ, ಕಂಪನಿಗಳ ತಪಾಸಣೆಯಲ್ಲಿ ಹೆಚ್ಚಿನ ಪಾರದರ್ಶಕತೆ, ಕಂಪನಿ ಕಾಯ್ದೆಯಲ್ಲಿ ಬದಲಾವಣೆ ಒಳಗೊಂಡಂತೆ,  ಎಂಎಸ್‌ಎಂಇ’ಗಳ ಪುನಶ್ಚೇತ
ನಕ್ಕೆ 12 ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವುದು ಐತಿಹಾಸಿಕ ಕ್ರಮವಾಗಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

ಶ್ರೇಯಾಂಕದಲ್ಲಿ ಬಡ್ತಿ: ‘ಉದ್ಯಮ ಸ್ನೇಹಿ ಶ್ರೇಯಾಂಕದಲ್ಲಿ ಭಾರತ ಬಡ್ತಿ ಪಡೆದಿರುವುದಕ್ಕೆ ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರವು ನಾಲ್ಕು ವರ್ಷಗಳಲ್ಲಿ ಕೈಗೊಂಡ ರಚನಾತ್ಮಕ ನಿರ್ಧಾರಗಳೇ ಕಾರಣ. 2014ರಲ್ಲಿ 142ನೆ ಸ್ಥಾನದಲ್ಲಿದ್ದ ಭಾರತ ಈಗ 77ನೆ ಸ್ಥಾನಕ್ಕೆ  ಬಡ್ತಿ ಪಡೆದಿದೆ. ವಿಶ್ವದಲ್ಲಿನ ಯಾವುದೇ ದೇಶ ಇದುವರೆಗೆ ಇಂತಹ ಸಾಧನೆ ಮಾಡಿಲ್ಲ. ಮುಂಚೂಣಿ 50 ದೇಶಗಳ ಸಾಲಿಗೆ ಸೇರ್ಪಡೆಗೊಳ್ಳಲು ಹೆಚ್ಚು ದಿನ ಕಾಯಬೇಕಾಗಿಲ್ಲ’ ಎಂದರು.