ಉದ್ಯೋಗ ನೀಡದ ಕೋರ್ಸ್‌ಗಳು ರದ್ದು : ಎಐಸಿಟಿಇ

0
30

ಉದ್ಯೋಗಾವಕಾಶ ಕಡಿಮೆ ಇರುವ ಎಂಜಿನಿಯರಿಂಗ್‌ನ ಸಾಂಪ್ರದಾಯಿಕ ಕೋರ್ಸ್‌ಗಳನ್ನು ರದ್ದುಪಡಿಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ನಿರ್ಧರಿಸಿದೆ.

ನವದೆಹಲಿ: ಉದ್ಯೋಗಾವಕಾಶ ಕಡಿಮೆ ಇರುವ ಎಂಜಿನಿಯರಿಂಗ್‌ನ ಸಾಂಪ್ರದಾಯಿಕ ಕೋರ್ಸ್‌ಗಳನ್ನು ರದ್ದುಪಡಿಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ನಿರ್ಧರಿಸಿದೆ.

2020–21ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ. ಬದಲಿಗೆ ಉದ್ಯೋಗಾವಕಾಶ ಹೆಚ್ಚು ಇರುವ ವಿಷಯಗಳಿಗೆ ಒತ್ತು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ವೃತ್ತಿ ಕೌಶಲ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಎಂಜಿನಿಯರಿಂಗ್‌ ಪದವೀಧರರ ಕೌಶಲ ಮತ್ತು ಔದ್ಯೋಗಿಕ ಕ್ಷೇತ್ರವು ಬೇಡುವ ಕೌಶಲದ ನಡುವೆ ಭಾರಿ ಅಂತರವಿದೆ. ಈ ಕ್ರಮದಿಂದ ಇಂತಹ ಅಂತರ ಕಡಿಮೆಯಾಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಲೋಕಸಭೆಗೆ ಮಾಹಿತಿ ನೀಡಿದರು.
 
‘ಉದ್ಯೋಗಾವಕಾಶ ಹೆಚ್ಚು ಇರುವ ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ರೊಬೊಟಿಕ್ಸ್, ಡಾಟಾ ಸೈನ್ಸ್‌, ಸೈಬರ್ ಭದ್ರತೆ, 3ಡಿ ವಿನ್ಯಾಸ ಮತ್ತು ಮುದ್ರಣ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ’ ಎಂದು ವಿವರಿಸಿದರು.