ಉಡಾನ್ ಯೋಜನೆ: ಇನ್ನು ವಿದೇಶಗಳಿಗೂ ಅಗ್ಗದ ವಿಮಾನ ಯಾನ

0
725

ಉಡಾನ್‌ ಯೋಜನೆಯಡಿ ಎಂಟು ಅಂತಾರಾಷ್ಟ್ರೀಯ ಮಾರ್ಗಗಳಲ್ಲೂ ವಿಮಾನ ಸಂಚಾರ ಆರಂಭಿಸಲು ಸರಕಾರ ನಿರ್ಧರಿಸಿದೆ. ನೆರೆಯ ದೇಶಗಳಿಗೆ ಜನಸಾಮಾನ್ಯರೂ ಕಡಿಮೆ ದರದಲ್ಲಿ ಹಾರಾಟ ನಡೆಸಲು ಸಾಧ್ಯವಾಗುವಂತೆ ಸರಕಾರ ಈ 8 ಮಾರ್ಗಗಳನ್ನು ಗುರುತಿಸಿದೆ.

ಹೊಸದಿಲ್ಲಿ:  ಉಡಾನ್‌ ಯೋಜನೆಯಡಿ ಎಂಟು ಅಂತಾರಾಷ್ಟ್ರೀಯ ಮಾರ್ಗಗಳಲ್ಲೂ ವಿಮಾನ ಸಂಚಾರ ಆರಂಭಿಸಲು ಸರಕಾರ ನಿರ್ಧರಿಸಿದೆ. ನೆರೆಯ ದೇಶಗಳಿಗೆ ಜನಸಾಮಾನ್ಯರೂ ಕಡಿಮೆ ದರದಲ್ಲಿ ಹಾರಾಟ ನಡೆಸಲು ಸಾಧ್ಯವಾಗುವಂತೆ ಸರಕಾರ ಈ 8 ಮಾರ್ಗಗಳನ್ನು ಗುರುತಿಸಿದೆ. 

ಗುವಾಹಟಿಯಿಂದ ಢಾಕಾ, ಕಠ್ಮಂಡು, ಯಾಂಗೂನ್, ಕೌಲಾಲಂಪುರ, ಸಿಂಗಾಪುರ ಮತ್ತು ಬ್ಯಾಂಕಾಕ್‌ ಮಾರ್ಗಗಳಲ್ಲಿ ಉಡಾನ್‌ (ಉಡೇ ದೇಶ್‌ ಕಾ ಆಮ್‌ ನಾಗರಿಕ್) ಯೋಜನೆ ಜಾರಿಯಾಗಲಿದೆ. 
ಅಲ್ಲದೆ ವಿಜಯವಾಡದಿಂದ ಸಿಂಗಾಪುರ ಮತ್ತು ದುಬೈಗಳಿಗೂ ಉಡಾನ್‌ ವಿಮಾನಗಳು ಹಾರಲಿವೆ. 

ಈ ಯೋಜನೆಯನ್ನು ಅಂತಾರಾಷ್ಟ್ರೀಯ ಮಾರ್ಗಗಳಿಗೆ ಪರಿಚಯಿಸುವ ರೂಪುರೇಷೆಗಳು ಶೀಘ್ರವೇ ಅಂತಿಮಗೊಳ್ಳಲಿವೆ. ವರ್ಷಾಂತ್ಯಕ್ಕೆ ಉಡಾನ್ ವಿಮಾನಗಳು ಈ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಾರಲಿವೆ. 

ಭಾರತದ ವಿವಿಧ ರಾಜ್ಯಗಳು ಮತ್ತು ಆಯ್ದ ಅಂತಾರಾಷ್ಟ್ರೀಯ ತಾಣಗಳ ನಡುವೆ ಅಂತಾರಾಷ್ಟ್ರೀಯ ವೈಮಾನಿಕ ಸಂಪರ್ಕವನ್ನು ಹೆಚ್ಚಿಸುವುದು ವಿಮಾನ ಉಡಾನ್‌ ಯೋಜನೆಯ ಉದ್ದೇಶ. ದೇಶೀಯ ಮಟ್ಟದಲ್ಲಿ ಉಡಾನ್ ಯೋಜನೆಯ ಸಕಾರಾತ್ಮಕ ಫಲಿತಾಂಶದ ಹಿನ್ನೆಲೆಯಲ್ಲಿ ಇದನ್ನು ಅಂತಾರಾಷ್ಟ್ರೀಯ ಯಾನಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ನಾಗರಿಕ ವಿಮಾನ ಯಾನ ಸಚಿವ ಸುರೇಶ್‌ ಪ್ರಭು ಟ್ವೀಟ್ ಮಾಡಿದ್ದಾರೆ. 

ರಾಜ್ಯ ಸರಕಾರಗಳು ಯಾವ ನಗರಗಳ ಮಧ್ಯೆ ಅಂತಾರಾಷ್ಟ್ರೀಯ ಯಾನಗಳ ಅಗತ್ಯವಿದೆ ಎಂಬ ಪಟ್ಟಿ ನೀಡಿದರೆ ಕೇಂದ್ರ ಸರಕಾರ ಅದನ್ನು ಪರಿಶೀಲಿಸಿ ಉಡಾನ್‌ ಯೋಜನೆಯಡಿ ಅನುಮತಿ ನೀಡಲಿದೆ. ಪ್ರಸ್ತುತ ಅಸ್ಸಾಂ ಮತ್ತು ಆಂಧ್ರ ಪ್ರದೇಶ ಈ ಕುರಿತು ಉತ್ಸುಕತೆ ತೋರಿದ್ದು 8 ಮಾರ್ಗಗಳ ಪಟ್ಟಿ ನೀಡಿವೆ ಎಂದು ಸುರೇಶ್‌ ಪ್ರಭು ತಿಳಿಸಿದರು.