ಉಗ್ರ ಹಫೀಜ್​ ಸಯೀದ್​ನ ಜೆಯುಡಿ ಮತ್ತು ಎಫ್​ಐಎಫ್​ ಮೇಲಿನ ನಿಷೇಧ ತೆರವು

0
315

2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಉಗ್ರ ಹಫೀಜ್​​ ಸಯೀದ್​ ಸ್ಥಾಪಿಸಿರುವ ಜಮಾತ್​ ಉದ್​ ದವಾ(ಜೆಯುಡಿ) ಮತ್ತು ಫಲಾಹ್​ ಐ ಇನ್ಸಾನಿಯತ್​ ಫೌಂಡೇಷನ್​ (ಎಫ್​ಐಎಫ್​) ಸಂಘಟನೆಗಳ ಮೇಲಿನ ನಿಷೇಧ ತೆರವುಗೊಂಡಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

ಇಸ್ಲಾಮಾಬಾದ್​: 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಉಗ್ರ ಹಫೀಜ್​​ ಸಯೀದ್​ ಸ್ಥಾಪಿಸಿರುವ ಜಮಾತ್​ ಉದ್​ ದವಾ(ಜೆಯುಡಿ) ಮತ್ತು ಫಲಾಹ್​ ಐ ಇನ್ಸಾನಿಯತ್​ ಫೌಂಡೇಷನ್​ (ಎಫ್​ಐಎಫ್​) ಸಂಘಟನೆಗಳ ಮೇಲಿನ ನಿಷೇಧ ತೆರವುಗೊಂಡಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜೆಯುಡಿ ಮತ್ತು ಎಫ್​ಐಎಫ್​ ಸಂಘಟನೆಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಿತ್ತು. ಇದರ ಆಧಾರದ ಮೇಲೆ ಈ ಎರಡು ಸಂಘಟನೆಗಳನ್ನು ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಲು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮಮ್ನೂನ್ ಹುಸೇನ್ ಈ ವರ್ಷದ ಫೆಬ್ರವರಿಯಲ್ಲಿ ಭಯೋತ್ಪಾದನಾ ವಿರೋಧಿ ಕಾಯ್ದೆ, 1997ಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದ್ದರು.

ಆದರೆ ಇದರ ವಿರುದ್ಧ ಹಫೀಜ್​ ಸಯೀದ್​ ಇಸ್ಲಾಮಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಅಕ್ಟೋಬರ್ 25 ಗುರುವಾರ ನಡೆದ ವಿಚಾರಣೆಯ ವೇಳೆ ಸಯೀದ್​ ಪರ ವಕೀಲರು ಈ ಸುಗ್ರೀವಾಜ್ಞೆಯ ಅವಧಿ ಮುಕ್ತಾಯಗೊಂಡಿದ್ದು, ನಿಷೇಧವನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದಾರೆ. ಜತೆಗೆ ನಾನು 2002ರಲ್ಲಿ ಜಮಾತ್​ ಉದ್​ ದವಾ ಸ್ಥಾಪಿಸಿದ್ದೆ, ನಂತರ ನಿಷೇಧಿತ ಲಷ್ಕರ್​ ಎ ತೋಯೆಬಾ ಉಗ್ರ ಸಂಘಟನೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದೆ. ಆದರೂ ಭಾರತ ಜೆಯುಡಿಯನ್ನು ಉಗ್ರ ಸಂಘಟನೆ ಎಂದು ಬಿಂಬಿಸುತ್ತಿದೆ. ಭಾರತದ ಒತ್ತಡದ ಫಲವಾಗಿ ನಾನು 2009ರಿಂದ 2017ರವರೆಗೆ ಬಂಧನದಲ್ಲಿದ್ದೆ ಎಂದು ಸಯೀದ್​ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾನೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಸುಗ್ರೀವಾಜ್ಞೆಯ ಅವಧಿ ಮುಕ್ತಾಯವಾಗಿರುವುದರಿಂದ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಸರ್ಕಾರ ಸುಗ್ರೀವಾಜ್ಞೆಯನ್ನು ಮತ್ತೊಮ್ಮೆ ಜಾರಿ ಮಾಡಿದರೆ, ಅರ್ಜಿದಾರರು ಮತ್ತೆ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಪಾಕಿಸ್ತಾನದಲ್ಲಿ ನಿಷೇಧಕ್ಕೊಳಗಾಗಿರುವ 66 ಸಂಘಟನೆಗಳ ಪರಿಷ್ಕೃತ ಪಟ್ಟಿಯನ್ನು ಸೆಪ್ಟೆಂಬರ್​ 5 ರಂದು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಜಮಾತ್​ ಉದ್​ ದವಾ(ಜೆಯುಡಿ) ಮತ್ತು ಫಲಾಹ್​ ಐ ಇನ್ಸಾನಿಯತ್​ ಫೌಂಡೇಷನ್​ (ಎಫ್​ಐಎಫ್​) ಸಂಘಟನೆಗಳ ಹೆಸರಲ್ಲಿ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್​)