ಉಗ್ರ ಸಂಘಟನೆಗಳ ಶಾಶ್ವತ ನಿಷೇಧಕ್ಕೆ ಮುಂದಾದ ಪಾಕ್

0
17

ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್ ನೇತೃತ್ವದ ಜಮಾತ್–ಉದ್–ದವಾ ಸಂಘಟನೆ ಹಾಗೂ ಇತರ ಉಗ್ರ ಸಂಘಟನೆಗಳನ್ನು ಶಾಶ್ವತವಾಗಿ ನಿಷೇಧಿಸುವ ಮಸೂದೆಯನ್ನು ಪಾಕಿಸ್ತಾನ ಸಿದ್ಧಪಡಿಸಿದೆ.

ಇಸ್ಲಾಮಾಬಾದ್: ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್ ನೇತೃತ್ವದ ಜಮಾತ್–ಉದ್–ದವಾ ಸಂಘಟನೆ ಹಾಗೂ ಇತರ ಉಗ್ರ ಸಂಘಟನೆಗಳನ್ನು ಶಾಶ್ವತವಾಗಿ ನಿಷೇಧಿಸುವ ಮಸೂದೆಯನ್ನು ಪಾಕಿಸ್ತಾನ ಸಿದ್ಧಪಡಿಸಿದೆ.

ಉಗ್ರ ಸಂಘಟನೆಗಳಲ್ಲದೆ, ಈಗಾಗಲೇ ಗುರುತಿಸಲಾದ ಉಗ್ರರಿಗೂ ಆಜೀವ ನಿಷೇಧ ಹೇರುವ ಮಸೂದೆಯನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದೆ. ಇದನ್ನು ಸೇನೆ ಪ್ರಬಲವಾಗಿ ಬೆಂಬಲಿಸಿದೆ.

‘ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅಧ್ಯಕ್ಷ ಮಮ್ನೂನ್ ಹುಸೇನ್ ಈಗಾಗಲೇ ಕೆಲವು ಸಂಘಟನೆ ಹಾಗೂ ವ್ಯಕ್ತಿಗಳ ಮೇಲೆ ನಿಷೇಧ ಹೇರಿದ್ದಾರೆ. ಆದರೆ ಇದು 120 ದಿನಗಳಲ್ಲಿ ಕೊನೆಗೊಳ್ಳಲಿದೆ. ಹೊಸ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ ಸುಗ್ರೀವಾಜ್ಞೆಗೆ ಪರ್ಯಾಯವಾಗಲಿದೆ’ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

‘ಭಯೋತ್ಪಾದನೆ ನಿಗ್ರಹ ಕಾಯ್ದೆ 1997ಕ್ಕೆ ತಿದ್ದುಪಡಿ ಮಾಡಲಾಗಿರುವ ಮಸೂದೆಯನ್ನು ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ’ ಎಂದು ಮೂಲಗಳು ಹೇಳಿವೆ.

ಹಣ ಅಕ್ರಮ ವರ್ಗಾವಣೆ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡುವ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿ, ಕಣ್ಗಾವಲು ಇಡಬೇಕು ಎಂಬ

ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ಜಂಟಿ ಪ್ರಸ್ತಾವಕ್ಕೆ ಹಣಕಾಸು ಕ್ರಿಯಾಪಡೆ ಫೆಬ್ರುವರಿಯಲ್ಲಿ ಒಪ್ಪಿಗೆ ನೀಡಿತ್ತು. ಇದಾದ ನಂತರ ಪಾಕಿಸ್ತಾನ ಕಾಯ್ದೆಯೊಂದನ್ನು ರೂಪಿಸಲು ಮುಂದಾಗಿದೆ.

ಭಯೋತ್ಪಾದನೆ ಪ್ರಕರಣದಲ್ಲಿ ಹಣಕಾಸಿನ ವಿವಿಧ ಆಯಾಮಗಳ ತನಿಖೆ ನಡೆಸಲು ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡುವ ಬಗ್ಗೆ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

‘ಮಸೂದೆ ಹೊಸದೇನನ್ನೂ ಹೇಳುತ್ತಿಲ್ಲ. ವಿಶ್ವಸಂಸ್ಥೆ ನಿರ್ಣಯದ ಜಾರಿಯ ಖಾತ್ರಿ ನೀಡುತ್ತದೆ’ ಎಂದು ಪ್ರಧಾನಿಯವರ ವಿಶೇಷ ಸಹಾಯಕ, ಝಫರುಲ್ಲಾ ಖಾನ್ ಹೇಳಿದ್ದಾರೆ.

**

ಸುಗ್ರೀವಾಜ್ಞೆ ಪ್ರಶ್ನಿಸಿದ ಹಫೀಸ್

ಅಧ್ಯಕ್ಷರು ಹೊರಡಿಸಿದ ಸುಗ್ರೀವಾಜ್ಞೆಯನ್ನು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಹಫೀಸ್ ಸಯೀದ್ ಪ್ರಶ್ನಿಸಿದ್ದಾನೆ. ‘ಬಾಹ್ಯ ಒತ್ತಡಕ್ಕೆ ಮಣಿದು ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇದು ಸಾರ್ವಭೌಮತ್ವದ ವಿರುದ್ಧ ಪೂರ್ವಗ್ರಹದ ದಾಳಿಯಷ್ಟೇ ಅಲ್ಲ, ಸಂವಿಧಾನಕ್ಕೆ ವಿರುದ್ಧವಾದ ನಿಲುವು’ ಎಂದು ಹಫೀಸ್ ಹೇಳಿದ್ದಾನೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 2008ರ ನಿರ್ಣಯದ ಪ್ರಕಾರ ಹಫೀಸ್ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಲಷ್ಕರ್ ಎ ತಯಬಾ (ಎಲ್ಇಟಿ) ಉಗ್ರ ಸಂಘಟನೆಯ ಅಂಗ ಸಂಸ್ಥೆ ಎಂದು ಜಮಾತ್ ಉದ್ ದವಾ ಸಂಘಟನೆಯನ್ನು ಗುರ್ತಿಸಲಾಗಿದೆ. ಎಲ್ಇಟಿಯನ್ನು ಅಂತರರಾಷ್ಟ್ರೀಯ ಉಗ್ರ ಸಂಘಟನೆ ಎಂದು 2014ರಲ್ಲಿ ಗುರ್ತಿಸಲಾಗಿದೆ.

**

ಉಪ ವಿಭಾಗ

ಅಧ್ಯಕ್ಷ ಮ್ಯಾಮ್ನೂನ್ ಹುಸೇನ್ ಅವರು ಸುಗ್ರೀವಾಜ್ಞೆ ಹೊರಡಿಸಿ ಭಯೋತ್ಪಾದನೆ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ತಿದ್ದುಪಡಿ ಮಸೂದೆಯಲ್ಲಿ ಈಗ ಉಪ ವಿಭಾಗಗಳನ್ನು ಸೇರಿಸಲಾಗಿದೆ.

‘ಯಾವುದೇ ಸಂಘಟನೆ, ಅಧೀನ ಸಂಸ್ಥೆಗಳು, ವ್ಯಕ್ತಿಗಳು ಉಗ್ರವಾದದಲ್ಲಿ ತೊಡಗಿರುವ ಸಂಘಟನೆ ಅಥವಾ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿರುವ ಶಂಕೆ ಬಂದರೆ ನಿಷೇಧ ಹೇರಬಹುದು’ ಎಂದು ಮಸೂದೆ ಪ್ರಸ್ತಾಪಿಸುತ್ತದೆ.

ದೇಶದಲ್ಲಿನ ಉಗ್ರ ಸಂಘಟನೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಹಣಕಾಸು ಸಂಸ್ಥೆ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಈ ದತ್ತಾಶಂವು ಲಭ್ಯವಾಗಲಿದೆ. ಆ ಮೂಲಕ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ತಪ್ಪಿಸುವ ಉದ್ದೇಶವನ್ನು ಹೊಂದಲಾಗಿದೆ.