ಉಗ್ರ ದಾಳಿ: 42 ಯೋಧರು ಬಲಿ

0
941

ಕಾಶ್ಮೀರದಲ್ಲಿ ಉಗ್ರರು ಬಹುದಿನಗಳ ಬಳಿಕ ಅತ್ಯಂತ ಘೋರ ಕೃತ್ಯ ಎಸಗಿದ್ದಾರೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ 42 ಯೋಧರು ಹುತಾತ್ಮರಾಗಿದ್ದಾರೆ. ಬಸ್‌ನಲ್ಲಿ ಇದ್ದ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರು ಬಹುದಿನಗಳ ಬಳಿಕ ಅತ್ಯಂತ ಘೋರ ಕೃತ್ಯ ಎಸಗಿದ್ದಾರೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ 42 ಯೋಧರು ಹುತಾತ್ಮರಾಗಿದ್ದಾರೆ. ಬಸ್‌
ನಲ್ಲಿ ಇದ್ದ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಸ್ಫೋಟಗೊಂಡ ಬಸ್‌ನಲ್ಲಿ 44 ಸಿಬ್ಬಂದಿ ಇದ್ದರು ಎನ್ನಲಾಗಿದೆ. ಆದರೆ ಎಷ್ಟು ಜನರಿದ್ದರು ಎಂಬುದನ್ನು ಅಧಿಕಾರಿ
ಗಳು ಖಚಿತಪಡಿಸಿಲ್ಲ. ಸ್ಫೋಟದ ಸಂದರ್ಭದಲ್ಲಿ ಹೆದ್ದಾರಿಯ ವಿವಿಧೆಡೆ ಬೇರೆ ಬೇರೆ ಬಸ್‌ಗಳಲ್ಲಿ ಸಿಆರ್‌ಪಿಎಫ್‌ನ 2,547 ಸಿಬ್ಬಂದಿ ಸಂಚರಿಸುತ್ತಿದ್ದರು. ಇವರಲ್ಲಿ ಹಲವು ಮಂದಿ ರಜೆ ಕಳೆದು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶ್ರೀನಗರ–ಜಮ್ಮು ಹೆದ್ದಾರಿಯ ಅವಂತಿಪೋರಾ ಎಂಬಲ್ಲಿ ಫೆಬ್ರುವರಿ 14 ರ ಗುರುವಾರ ಅಪರಾಹ್ನ 3.15ರ ಹೊತ್ತಿಗೆ ಈ ದಾಳಿ ನಡೆದಿದೆ. 

ಸ್ಫೋಟಕಗಳಿದ್ದ ಎಸ್‌ಯುವಿ ಬಸ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಭಾರಿ ಸ್ಫೋಟ ಉಂಟಾಗಿದೆ. ಜೈಷ್‌–ಎ–
ಮೊಹಮ್ಮದ್‌ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಜೈಷ್‌ನ ವಕ್ತಾರ ಸ್ಥಳೀಯ ಸುದ್ದಿ ಸಂಸ್ಥೆ ಜಿಎನ್‌ಎಸ್‌ಗೆ ಹೇಳಿಕೆಯೊಂದನ್ನು ನೀಡಿದ್ದಾನೆ. ಸ್ಫೋಟದಲ್ಲಿ ಸಿಆರ್‌ಪಿಎಫ್‌ನ ಹತ್ತಾರು ವಾಹನಗಳು ಭಸ್ಮವಾಗಿವೆ ಎಂದು ಹೇಳಿಕೊಂಡಿದ್ದಾನೆ. 

ಗಾಯಗೊಂಡವರನ್ನು ಶ್ರೀನಗರದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಗೊಂಡ ಬಸ್‌ ಸಂಪೂರ್ಣ ಛಿದ್ರವಾಗಿದ್ದು ಕಬ್ಬಿಣದ ಗುಡ್ಡೆಯಂತೆ ಕಾಣಿಸುತ್ತಿದೆ. ಘಟನೆ ನಡೆದ ಸ್ಥಳದ ಸುತ್ತಲೂ ಮನುಷ್ಯ ದೇಹದ ಭಾಗಗಳು ಚೆದುರಿ ಹೋಗಿವೆ.  

ಕಾರು ಡಿಕ್ಕಿ ಹೊಡೆಸಿದ ಉಗ್ರನನ್ನು ಪುಲ್ವಾಮಾ ಸಮೀಪದ ಕಾಕಾಪೋರಾದ ಅದಿಲ್ ಅಹ್ಮದ್‌ ಎಂದು ಗುರುತಿಸಲಾಗಿದೆ. ಈತ 2018ರಲ್ಲಿ ಜೈಷ್‌ ಸಂಘಟನೆ ಸೇರಿದ್ದ. ಸ್ಫೋಟದ ಬಳಿಕ ಆ ಪ್ರದೇಶದ
ಲ್ಲೆಲ್ಲ ದಟ್ಟ ಹೊಗೆ ಆವರಿಸಿತ್ತು. ಜನರು ಆ ಸ್ಥಳದಿಂದ ದೂರ ಓಡುತ್ತಿದ್ದ ದೃಶ್ಯಗಳು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಭದ್ರತಾ ಪಡೆಗಳು ಶೋಧ ನಡೆಸುತ್ತಿವೆ. 

2–3 ದಿನಗಳಿಂದ ಪ್ರತಿಕೂಲ ಹವಾಮಾನದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯ ಯೋಧರು ಗುರುವಾರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರು. ಸ್ಫೋಟಕ್ಕೆ ತುತ್ತಾದ ಬಸ್‌ ಸಿಆರ್‌ಪಿಎಫ್‌ನ 76ನೇ ಬೆಟಾಲಿಯನ್‌ಗೆ ಸೇರಿದ್ದಾಗಿದೆ. ಹೆದ್ದಾರಿಯಲ್ಲಿ ಈ ಸಂದರ್ಭದಲ್ಲಿ ಸಿಆರ್‌ಪಿಎಫ್‌ನ ಒಟ್ಟು 78 ವಾಹನಗಳು ಸಂಚರಿಸುತ್ತಿದ್ದವು. 

 

2016ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ನಾಲ್ವರು ಉಗ್ರರು ನುಸುಳಿ ದಾಳಿ ನಡೆಸಿದ್ದರು. ಇದರಲ್ಲಿ 18 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ, ಗಡಿ ದಾಟಿ ಹೋಗಿದ್ದ ಭಾರತದ ಯೋಧರು ನಿರ್ದಿಷ್ಟ ದಾಳಿ ನಡೆಸಿ ಉಗ್ರರ ಹಲವು ಶಿಬಿರಗಳನ್ನು ನಾಶ ಮಾಡಿದ್ದಾರೆ. ಗುರುವಾರದ ದಾಳಿಯು ಈ ಎಲ್ಲದಕ್ಕಿಂತ ಭೀಕರವಾಗಿದೆ. 

ಭದ್ರತಾ ಲೋಪ?

ಶ್ರೀನಗರ–ಜಮ್ಮು ಹೆದ್ದಾರಿಗೆ ಅತಿ ಹೆಚ್ಚು ಭದ್ರತೆ ಇದೆ. ಭಯೋತ್ಪಾದನಾ ಚಟುವಟಿಕೆ ತಡೆ ಕಾರ್ಯಾಚರಣೆಯನ್ನು ಇಲ್ಲಿ ನಿಯಮಿತವಾಗಿ ನಡೆಸಲಾಗುತ್ತಿದೆ. ಹಾಗಿದ್ದರೂ, 2,500ರಷ್ಟು ಸಿಆರ್‌ಪಿಎಫ್‌ ಸಿಬ್ಬಂದಿ ಪ್ರಯಾಣಿಸುತ್ತಿರುವಾಗ ಇಂತಹ ದಾಳಿ ನಡೆದಿರುವುದು ಹೇಗೆ ಎಂಬ ಪ್ರಶ್ನೆ ಕೇಳಿ ಬಂದಿದೆ. ಭದ್ರತಾ ಲೋಪ ಉಂಟಾಗಿದೆಯೇ ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇದು ಹೇಡಿತನದ ತುಚ್ಛ ಕೃತ್ಯ. ನಮ್ಮ ದಿಟ್ಟ ಭದ್ರತಾ ಸಿಬ್ಬಂದಿಯ ತ್ಯಾಗ ವ್ಯರ್ಥವಾಗಿ ಹೋಗಲು ಬಿಡುವುದಿಲ್ಲ 
 – ನರೇಂದ್ರ ಮೋದಿ, ಪ್ರಧಾನಿ