ಈಜು ಕ್ರೀಡಾ ಪೋಷಕ “ನೀಲಕಂಠರಾವ್ ಜಗದಾಳೆ” ಇನ್ನಿಲ್ಲ

0
19

ರಾಜ್ಯ ಈಜು ಸಂಸ್ಥೆಯ ಅಧ್ಯಕ್ಷ ಮತ್ತು ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಉಪಾಧ್ಯಕರಾಗಿದ್ದ ನೀಲಕಂಠರಾವ್ ಜಗದಾಳೆ (67)
ಮೇ 8 ರ ಬುಧವಾರ ರಾತ್ರಿ ನಿಧನರಾದರು.

ಬೆಂಗಳೂರು: ರಾಜ್ಯ ಈಜು ಸಂಸ್ಥೆಯ ಅಧ್ಯಕ್ಷ ಮತ್ತು ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಉಪಾಧ್ಯಕರಾಗಿದ್ದ ನೀಲಕಂಠರಾವ್ ಜಗದಾಳೆ (67) ಮೇ 8 ರ  ಬುಧವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ಬಸವನಗುಡಿಯ ಶಂಕರ ಮಠ ಬಳಿಯ ನಿವಾಸಿಯಾಗಿದ್ದ ಅವರ ಅಂತ್ಯಕ್ರಿಯೆ ವಿಲ್ಸನ್ ಗಾರ್ಡನ್‌ ವಿದ್ಯುತ್ ಚಿತಾಗಾರದಲ್ಲಿ ಮೇ 9 ರ ಗುರುವಾರ ಸಂಜೆ ನಡೆಯಿತು.

ರಾಜ್ಯದಲ್ಲಿ ಈಜು ಕ್ರೀಡೆಗೆ ಹೊಸ ಆಯಾಮ ನೀಡಿದವರಲ್ಲಿ ಒಬ್ಬರಾಗಿರುವ ಜಗದಾಳೆ, ದೇಶದ ಪ್ರಸಿದ್ಧ ಕೇಂದ್ರಗಳಲ್ಲಿ ಒಂದಾದ ಬಸವನಗುಡಿ ಈಜು ಕೇಂದ್ರದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಕೊಡಿಸುವುದಕ್ಕೆ ಆದ್ಯತೆ ನೀಡಿದ ಅವರು ಇದಕ್ಕಾಗಿ ಅನೇಕ ವಿದೇಶಿ ಕೋಚ್‌ಗಳನ್ನು ಉದ್ಯಾನ ನಗರಿಗೆ ಕರೆದುಕೊಂಡು ಬಂದಿದ್ದರು. ರಾಷ್ಟ್ರಮಟ್ಟದ ಅನೇಕ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಿ ಯುವ ಈಜುಪಟುಗಳು ಬೆಳಕಿಗೆ ಬರಲು ಕಾರಣರಾಗಿದ್ದರು.

ಪುತ್ರನ ಕಂಡು ‘ಬೆಳೆದ’ ಈಜುಪಟು: ಉದ್ಯಮಿಯಾಗಿದ್ದ ನೀಲಕಂಠರಾವ್ ಅವರು ಈಜು ಕ್ಷೇತ್ರಕ್ಕೆ ಕಾಲಿಟ್ಟದ್ದು ತಡವಾಗಿ. ಪುತ್ರ ರಕ್ಷಿತ್ ಎನ್‌.ಜಗದಾಳೆ ಅಂತರರಾಷ್ಟ್ರೀಯ ಈಜುಪಟು ಆಗಿದ್ದರು. ಅವರನ್ನು ಕಂಡು ಈಜು ಸಂಸ್ಥೆಗೆ ಪದಾರ್ಪಣೆ ಮಾಡಿದ ಅವರು 1986ರಿಂದ ಮೂರು ದಶಕ ಸಂಸ್ಥೆಯ ಅಧ್ಯಕ್ಷರಾಗಿದ್ದರು ಎಂದು ಗೌರವ ಕಾರ್ಯದರ್ಶಿ ಸತೀಶ್‌ ಕುಮಾರ್ ತಿಳಿಸಿದರು.

‘ಅವರಿಗೆ ಈಜು ಎಂದರೆ ಪ್ರಾಣವಾಗಿತ್ತು. ಮಾಸ್ಟರ್ಸ್‌ ಈಜುಪಟು ಕೂಡ ಆಗಿದ್ದರು. ಭಾರತದಿಂದ ಒಬ್ಬರಾದರೂ ಒಲಿಂಪಿಕ್ಸ್‌ನ ಈಜಿನಲ್ಲಿ ಪದಕ ಗೆಲ್ಲಬೇಕು, ಕನಿಷ್ಠ ಫೈನಲ್‌ಗಾದರೂ ತಲುಪಬೇಕು ಎಂಬುದು ಅವರ ಮಹದಾಸೆ ಆಗಿತ್ತು’ ಎಂದು ಸತೀಶ್ ಕುಮಾರ್ ಹೇಳಿದರು.

ಜಗದಾಳೆ ಅವರು ನಿಧನರಾಗಿರುವುದು ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಭಾರಿ ನಷ್ಟವಾಗಿದೆ ಎಂದು ರಾಜ್ಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜ್‌ ಹೇಳಿದ್ದಾರೆ.

ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಜೊತೆ ಉತ್ತಮ ಸಂಬಂಧ ಹೊಂದಿದ್ದ ಅವರು ದೀರ್ಘ ಕಾಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಗಟ್ಟಿ ಧ್ವನಿಯ, ತಾಳ್ಮೆಯ ವ್ಯಕ್ತಿಯಾಗಿದ್ದ ಅವರು ಸಂಸ್ಥೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದರು.

ಕರ್ನಾಟಕ ಒಲಿಂಪಿಕ್ ಭವನ ನಿರ್ಮಾಣದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. 1989ರಿಂದ ಅವರು ರಾಜ್ಯ ಈಜು ಸಂಸ್ಥೆಯ ಅಧ್ಯಕ್ಷರಾಗಿದ್ದರು. ಈಜಿನಲ್ಲಿ ರಾಜ್ಯವನ್ನು ರಾಷ್ಟ್ರದಲ್ಲೇ ಅಗ್ರ ಸ್ಥಾನಕ್ಕೇರಿಸಿದ್ದು ಅವರ ಹಿರಿಮೆ. ಈ ಕ್ರೀಡೆಯ ಸಂಘಟನೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವುದು ಇದಕ್ಕೆ ಕಾರಣ. ಕೊನೆಯುಸಿರೆಳೆಯುವ ವರೆಗೂ ಅವರು ರಾಜ್ಯ ಈಜು ಸಂಸ್ಥೆಯ ಗೌರವ ಅಧ್ಯಕ್ಷರಾಗಿದ್ದರು ಎಂಬುದು ಗಮನಾರ್ಹ ವಿಷಯ.

ಅವರ ಜೊತೆ ಕೆಲಸ ಮಾಡಲು ಸಾಧ್ಯವಾಗಿದ್ದು ಅದೃಷ್ಟ. ಅವರ ಸ್ಥಾನವನ್ನು ತುಂಬಲು ಯಾರಿದ್ದಾರೆ ಎಂಬ ಗೊಂದಲ ಈಗ ಕಾಡತೊಡಗಿದೆ

           – ಸತೀಶ್‌ ಕುಮಾರ್‌  ಈಜು ಸಂಸ್ಥೆಯ ಗೌರವ ಕಾರ್ಯದರ್ಶಿ