ಇ– ಸೈಕಲ್‌ ಯೋಜನೆಗೆ ಸಲ್ಮಾನ್‌ ರಾಯಭಾರಿ

0
28

ದೆಹಲಿ–ಮೀರಠ್‌ ಹೆದ್ದಾರಿಯಲ್ಲಿ ಹೊಸದಾಗಿ ಸೈಕಲ್‌ ಟ್ರ್ಯಾಕ್‌ ನಿರ್ಮಾಣವಾಗುತ್ತಿದ್ದು, ಈ ಟ್ರ್ಯಾಕ್‌ನಲ್ಲಿ ನಟ ಸಲ್ಮಾನ್‌ ಖಾನ್‌ ಸೈಕಲ್‌ ಓಡಿಸಲಿದ್ದಾರೆ. ಆರೋಗ್ಯಕರ ಜೀವನಕ್ಕಾಗಿ ಸೈಕಲ್‌ ಬಳಕೆ ಮಾಡುವುದು ಉತ್ತಮ ಎಂಬ ಸಂದೇಶ ಸಾರಲು ಸರ್ಕಾರ ರೂಪಿಸಿರುವ ಯೋಜನೆಗೆ ಸಲ್ಮಾನ್‌ ಖಾನ್‌ ರಾಯಭಾರಿಯಾಗಿದ್ದಾರೆ.

ಚಿಕ್ಕದಾದ ಎಲೆಕ್ಟ್ರಿಕ್‌ ಮೋಟಾರ್‌ ಹೊಂದಿರುವ ಇ–ಸೈಕಲ್‌, ಸಾಮಾನ್ಯ ಸೈಕಲ್‌ಗಳಿಗಿಂತ ಹೆಚ್ಚಿನ ದೂರವನ್ನು ಕ್ರಮಿಸುವ ಶಕ್ತಿ ಹೊಂದಿದೆ.

‘ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸೈಕಲ್‌ ಉತ್ತಮ ವಾಹನವಾಗಿದ್ದು, ಇದನ್ನು ನಮ್ಮ ಸರ್ಕಾರ ಉತ್ತೇಜಿಸಲಿದೆ’ ಎಂದು ಕೇಂದ್ರ ಸಾರಿಗೆ ಸಚಿವ ನಿತೀಶ್‌ ಗಡ್ಕರಿ ಹೇಳಿದರು.

ಸಲ್ಮಾನ್‌ ಖಾನ್‌ ಅವರು ಇ–ಸೈಕಲ್‌ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ. ಇದನ್ನು ಉತ್ತೇಜಿಸುವ ಸಂಬಂಧ ನಮ್ಮ ಜೊತೆ ಮಾತುಕತೆ ನಡೆಸಿದ್ದಾರೆ. ಅವರ ‘ಬೀಯಿಂಗ್‌ ಹ್ಯೂಮನ್‌ ಫೌಂಡೇಷನ್‌’ ವತಿಯಿಂದ ಈಗಾಗಲೇ ಇ–ಸೈಕಲ್‌ ತಯಾರಕರ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ತಿಳಿಸಿದರು.

‘ದೆಹಲಿ–ಮೀರಠ್‌ ಹೆದ್ದಾರಿ ದೇಶದ ಮೊದಲ 14 ಪಥಗಳುಳ್ಳ ರಸ್ತೆಯಾಗಿದೆ. ಇದರಲ್ಲಿ 2.5 ಮೀಟರ್‌ ಅಗಲದಷ್ಟು ರಸ್ತೆಯನ್ನು ಸೈಕಲ್‌ ಟ್ರ್ಯಾಕ್‌ಗಾಗಿ ಮೀಸಲು ಇಡಲಾಗಿದೆ. ಇದರ ಕಾಮಗಾರಿ ನಡೆಯುತ್ತಿದೆ. 30 ತಿಂಗಳಿನ ಕಾಮಗಾರಿ ಇದಾಗಿತ್ತು, ಆದರೆ 14ತಿಂಗಳಿನಲ್ಲಿ ಇದು ಸಂಪೂರ್ಣಗೊಳ್ಳಲಿದೆ’ ಎಂದು ಗಡ್ಕರಿ ಹೇಳಿದರು.