ಇ-ಸಿಗರೇಟ್ ತಂಬಾಕು ಉತ್ಪನ್ನದಷ್ಟೆ ಹಾನಿಕರ : ಕೇಂದ್ರ ಸರ್ಕಾರದ ಅಧ್ಯಯನ ಸಮಿತಿ ಎಚ್ಚರಿಕೆ

0
495

ಯಾವುದೇ ವಿಧದ ತಂಬಾಕು ಉತ್ಪನ್ನ ಸೇವನೆಯಷ್ಟೇ ಇ-ಸಿಗರೇಟ್ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರದ ಅಧ್ಯಯನ ಸಮಿತಿ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಇ-ಸಿಗರೇಟ್, ವೇಪ್, ಇ-ಶೀಷಾ, ಇ-ಹುಕ್ಕಾ ಇನ್ನಿತರ ಉತ್ಪನ್ನಗಳನ್ನು ನಿಷೇಧಿಸುವಂತೆ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸಲಹೆ ನೀಡಿದೆ.

ನವದೆಹಲಿ: ಯಾವುದೇ ವಿಧದ ತಂಬಾಕು ಉತ್ಪನ್ನ ಸೇವನೆಯಷ್ಟೇ ಇ-ಸಿಗರೇಟ್ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರದ ಅಧ್ಯಯನ ಸಮಿತಿ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಇ-ಸಿಗರೇಟ್, ವೇಪ್, ಇ-ಶೀಷಾ, ಇ-ಹುಕ್ಕಾ ಇನ್ನಿತರ ಉತ್ಪನ್ನಗಳನ್ನು ನಿಷೇಧಿಸುವಂತೆ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸಲಹೆ ನೀಡಿದೆ. ಇ-ಸಿಗರೇಟ್​ನಲ್ಲಿ ಬಳಸುವ ಪದಾರ್ಥಗಳು ಆರೋಗ್ಯಕ್ಕೆ ಮಾರಕ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಇದರ ವ್ಯಸನದಿಂದ ಚಿಕ್ಕ ವಯಸ್ಸಿನಲ್ಲಿ ಸಾವು, ಅಸ್ವಸ್ಥತೆ ಉಂಟಾಗುತ್ತದೆ ಎಂದು ಅಧ್ಯಯನ ಸಮಿತಿ 251 ರೀತಿಯ ಅಧ್ಯಯನ ನಡೆಸಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ (ಎಂಡ್ಸ್)ನಲ್ಲಿ ಬಳಸುವ ಉತ್ಪನ್ನಗಳು ವಿಷಕಾರಿ ಅಂಶದಿಂದ ಕೂಡಿದ್ದು, ಇದು ಕೂಡ ಮಾರಣಾಂತಿಕವಾಗಬಲ್ಲವು. ಇಂಥ ವಸ್ತುಗಳನ್ನು ಜಾಹೀರಾತು ಮಾಡುವಾಗ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶವನ್ನು ಮರೆಮಾಚಿ, ಚಿತ್ತಾಕರ್ಷಕ ಉತ್ಪನ್ನ ಎನ್ನುವಂತೆ ಬಿಂಬಿಸುವುದರಿಂದ ಯುವ ಸಮುದಾಯ ಇದರ ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತಿದೆ. ಎಂಡ್ಸ್ ಉತ್ಪನ್ನಗಳು ತಂಬಾಕಿಗೆ ಪರ್ಯಾಯ ಅಲ್ಲ ಎಂದು ಸಮಿತಿ ಹೇಳಿದೆ. ಏಮ್ಸ್​ನ ತಜ್ಞ ವೈದ್ಯರು, ಕಾಯಿಲೆಯ ಮಾಹಿತಿ ಮತ್ತು ಸಂಶೋಧನಾ ಕೇಂದ್ರ ಸೇರಿದಂತೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಅಧ್ಯಯನ ಸಮಿತಿಯನ್ನು ಆರೋಗ್ಯ ಸಚಿವಾಲಯ ರಚಿಸಿತ್ತು. -ಏಜೆನ್ಸೀಸ್