ಇ–ವೇ ಬಿಲ್: ಅಧಿಸೂಚನೆ ಪ್ರಕಟ

0
32

ರಾಜ್ಯಗಳ ಮಧ್ಯೆ ಸರಕು ಸಾಗಣೆಗೆ ಏಪ್ರಿಲ್‌1ರಿಂದ ಇ–ವೇ ಬಿಲ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಒಳಗೆ ಏಪ್ರಿಲ್‌ 15 ರಿಂದ ಹಂತ ಹಂತವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

ನವದೆಹಲಿ: ರಾಜ್ಯಗಳ ಮಧ್ಯೆ ಸರಕು ಸಾಗಣೆಗೆ ಏಪ್ರಿಲ್‌1ರಿಂದ ಇ–ವೇ ಬಿಲ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಒಳಗೆ ಏಪ್ರಿಲ್‌ 15 ರಿಂದ ಹಂತ ಹಂತವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ. 

ಜಿಎಸ್‌ಟಿ ವ್ಯವಸ್ಥೆಯಲ್ಲಿ, ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ–ವೇ ಬಿಲ್ ವ್ಯವಸ್ಥೆ ರೂಪಿಸಲಾಗಿದೆ. 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವ ಮುಂಚೆಯೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಸರಕು ಸಾಗಿಸುವ ದೂರ ಆಧರಿಸಿ 1ರಿಂದ 20 ದಿನಗಳವರೆಗೆ ಬಿಲ್‌ನ ಸಿಂಧುತ್ವ ಇರುತ್ತದೆ. ಜಿಎಸ್‌ಟಿಎನ್‌ ಈ ಬಿಲ್‌ ವಿತರಿಸಲಿದೆ.

ಸರಕುಗಳನ್ನು ಸಾಗಿಸುವವರು ತಮ್ಮ ಜತೆ ಸರಕುಪಟ್ಟಿ, ಪೂರೈಕೆ ಬಿಲ್‌ ಅಥವಾ ಇ–ವೇ ಬಿಲ್‌ ಹೊಂದಿರಬೇಕು. ತೆರಿಗೆ ಅಧಿಕಾರಿಗಳು ಮಾರ್ಗಮಧ್ಯೆ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.

ಅಂತರ್‌ ರಾಜ್ಯ ಸರಕುಗಳ ಸಾಗಾಣಿಕೆ ಮೇಲೆ ನಿಗಾ ಇಡಲು ಇದು ನೆರವಾಗಲಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿಗೂ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ.

ಸೀಮಾ ಸುಂಕದಿಂದ ಅನುಮತಿ ಪಡೆಯಬೇಕಾದ ಸಂದರ್ಭದಲ್ಲಿ, ಬಂದರು, ವಿಮಾನ ನಿಲ್ದಾಣ, ವಿಮಾನ ಸರಕು ಸಾಗಣೆ ಕಾಂಪ್ಲೆಕ್ಸ್‌ನಿಂದ ಸಾಗಿಸುವ ಸರಕುಗಳಿಗೆ ಇ–ವೇ ಬಿಲ್‌ ಅನ್ವಯವಾಗುವುದಿಲ್ಲ.