ಇಸ್ರೋ ಬೇಹು ಪ್ರಕರಣ: ವಿಜ್ಞಾನಿ “ನಂಬಿ ನಾರಾಯಣನ್‌”ಗೆ 50 ಲಕ್ಷ ರೂ. ಪರಿಹಾರಕ್ಕೆ ಸುಪ್ರೀಂ ಆದೇಶ

0
689

ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಕೇರಳ ಪೊಲೀಸರು ಸುಖಾಸುಮ್ಮನೆ ಬಂಧಿಸಿ, ತೊಂದರೆ ಕೊಟ್ಟಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಕಿಡಿಕಾರಿದ್ದು, 50 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಹೊಸದಿಲ್ಲಿ: ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಕೇರಳ ಪೊಲೀಸರು ಸುಖಾಸುಮ್ಮನೆ ಬಂಧಿಸಿ, ತೊಂದರೆ ಕೊಟ್ಟಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಕಿಡಿಕಾರಿದ್ದು, 50 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. 

24 ವರ್ಷಗಳ ಹಿಂದೆ 1994, ನವೆಂಬರ್‌ 30ರಂದು ನಾರಾಯಣನ್‌ ಅವರನ್ನು ಬೇಹುಗಾರಿಕೆ ಪ್ರಕರಣದಡಿ ಕೇರಳ ಪೊಲೀಸರು ಬಂಧಿಸಿದ್ದರು. 1998ರಲ್ಲಿ ಸುಪ್ರೀಂ ಕೋರ್ಟ್‌ ನಾರಾಯಣನ್‌ ಅವರು ನಿರಪರಾಧಿ ಎಂದು ತೀರ್ಪು ನೀಡಿತ್ತು. 

ಕೇರಳ ಹೈಕೋರ್ಟ್‌ ತೀರ್ಪಿನ ವಿರುದ್ಧ 2015ರ ಜೂನ್‌ನಲ್ಲಿ ನಾರಾಯಣನ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ತನಿಖಾ ತಂಡದಲ್ಲಿದ್ದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್‌ ಮತ್ತು ಮಾಜಿ ಎಸ್‌ಪಿಗಳಾದ ಕೆಕೆ ಜೋಶು ಮತ್ತು ಎಸ್‌ ವಿಜಯನ್‌ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾರಾಯಣನ್‌ ವಾದಿಸಿದ್ದರು. ತಮ್ಮ ವಿರುದ್ಧ ಬೇಹುಗಾರಿಕಾ ಪ್ರಕರಣ ದಾಖಲಿಸಿದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಮೊರೆ ಹೋಗಿದ್ದರು. 

2001ರಲ್ಲಿ ನಾರಾಯಣನ್‌ ಅವರಿಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಕೇರಳ ರಾಜ್ಯ ಸರಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆದೇಶಿಸಿತ್ತು.