ಇಸ್ರೋ: ಕಿರಣ್​ಗೆ ಯಶಸ್ಸಿನ ಬೀಳ್ಕೊಡುಗೆ

0
23

ಕಾಟೋಸ್ಯಾಟ್-2 ಸಹಿತ ದೇಶೀಯ ಮೂರು ಉಪಗ್ರಹ ಮತ್ತು ವಿದೇಶದ 28 ಉಪಗ್ರಹಳನ್ನು ಹೊತ್ತ ಪಿಎಸ್​ಎಲ್​ವಿ- ಸಿ 40 ರಾಕೆಟ್ ಉಡಾವಣೆ ಶುಕ್ರವಾರ ಯಶಸ್ವಿಯಾಗಿದ್ದು, ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಧನೆಗೆ ಮತ್ತೊಂದು ಗರಿ ಸೇರಿಕೊಂಡಿತು. ಇಸ್ರೋ ಉಡಾವಣೆ ಮಾಡಿರುವ 100ನೇ ಉಪಗ್ರಹ ಇದಾಗಿದ್ದು, ಪಿಎಸ್​ಎಲ್​ವಿ- ಸಿ 40 ಮೂಲಕ ಏಕಕಾಲಕ್ಕೆ 31 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ. ಇಸ್ರೋ ಹಾಲಿ ಅಧ್ಯಕ್ಷ ಕಿರಣ್​ಕುಮಾರ್ ಸದ್ಯದಲ್ಲೇ ನಿವೃತ್ತಿಯಾಗಲಿದ್ದಾರೆ.

ಒಟ್ಟು 1323 ಕೆ.ಜಿ. ತೂಕ ಹೊಂದಿದ್ದ 44.4 ಮೀಟರ್ ಎತ್ತರದ ರಾಕೆಟನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ಉಡಾಯಿಸಲಾಗಿದೆ.

ಕಾಟೋಸ್ಯಾಟ್ ಸರಣಿಯಲ್ಲಿ ಇದು ಮೂರನೇ ಉಪಗ್ರಹವಾಗಿದ್ದು, ಭೂ ಪರಿವೀಕ್ಷಣೆಗೆ ಬಳಸಲಾಗುತ್ತದೆ.

ರಸ್ತೆ ಸಂಪರ್ಕ, ನ್ಯಾವಿಗೇಷನ್, ಮ್ಯಾಪಿಂಗ್, ನಗರ ಯೋಜನೆ ಸಹಿತ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಮತ್ತು ಇತರ ಉದ್ದೇಶಗಳಿಗೆ ಕಾಟೋಸ್ಯಾಟ್-2 ಬಳಕೆಯಾಗಲಿದ್ದು, ಅಧಿಕ ರೆಸೊಲ್ಯೂಷನ್ ಹೊಂದಿರುವ ಚಿತ್ರಗಳನ್ನು ಕಳುಹಿಸಲಿದೆ. ಕಳೆದ ವರ್ಷ ಆ. 31ರಂದು ನಡೆಸಿದ್ದ ಉಪಗ್ರಹ ಉಡಾವಣೆ ವಿಫಲಗೊಂಡ ಬಳಿಕ ಹಲವು ಹಂತದ ಪರಾಮರ್ಶೆ ನಡೆಸಿ, ಪರೀಕ್ಷೆಗಳನ್ನು ಕೈಗೊಂಡು ಪ್ರಸಕ್ತ ಯೋಜನೆ ರೂಪಿಸಿತ್ತು.

ಚಂದ್ರಯಾನ-2 ಯೋಜನೆ ಶೀಘ್ರ

ಯೋಜನೆಯಂತೆ ನಿರ್ಧರಿತ ಸಮಯದಲ್ಲೇ ಚಂದ್ರ ಯಾನ-2 ಕೈಗೊಳ್ಳಲಾಗುತ್ತದೆ ಎಂದು ಇಸ್ರೋ ಹೇಳಿದೆ. ಯೋಜನೆಗೆ ಸಂಬಂಧಿತ ವಿವಿಧ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಮಾರ್ಚ್​ನಲ್ಲಿ ಚಂದ್ರಯಾನ-2 ಕೈಗೊಳ್ಳುವ ಸಾಧ್ಯತೆಯಿದೆ ಎಂದು ಇಸ್ರೋ ಅಧ್ಯಕ್ಷ ಎ. ಎಸ್. ಕಿರಣ್ ಕುಮಾರ್ ಹೇಳಿದ್ದಾರೆ. ಇಸ್ರೋದ ನೂತನ ಅಧ್ಯಕ್ಷರಾಗಿ ಕೆ. ಶಿವನ್ ಅವರ ಹೆಸರು ಕೇಳಿ ಬಂದಿದೆ.