ಇಳಿಯಲಿದೆ ವಿದ್ಯಾರ್ಥಿಗಳ “ಶಾಲಾ ಬ್ಯಾಗ್‌” ತೂಕ

0
47

ಇದೇ 2019 – 2020 ನೇ ಶೈಕ್ಷಣಿಕ ವರ್ಷದಿಂದ ಮಕ್ಕಳ ಶಾಲಾ ಬ್ಯಾಗ್‌ ತೂಕ ತಗ್ಗಲಿದ್ದು, ಇದು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ.

ಬೆಂಗಳೂರು: ಇದೇ 2019 – 2020 ನೇ ಶೈಕ್ಷಣಿಕ ವರ್ಷದಿಂದ ಮಕ್ಕಳ ಶಾಲಾ ಬ್ಯಾಗ್‌ ತೂಕ ತಗ್ಗಲಿದ್ದು, ಇದು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಎರಡು ವರ್ಷಗಳ ಬಳಿಕ ಮೇ 3 ರ ಶುಕ್ರವಾರ ಈ ಆದೇಶವನ್ನು ಹೊರಡಿಸಿದ್ದು, ಬ್ಯಾಗ್‌ನ ತೂಕ ಮಕ್ಕಳ ದೇಹ ತೂಕದ ಶೇ 10ಕ್ಕಿಂತ ಅಧಿಕ ಇರಬಾರದು ಎಂದು ತಿಳಿಸಲಾಗಿದೆ.

ಯಾರ ನೇತೃತ್ವದ ಸಮಿತಿ ಶಿಫಾರಸ್ಸು: ಡಾ.ವಿ.ಪಿ.ನಿರಂಜನಾರಾಧ್ಯ ನೇತೃತ್ವದ ಪರಿಣತರ ಸಮಿತಿ 2016–17ನೇ ಸಾಲಿನಲ್ಲೇ ಈ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಆದೇಶ ಹೊರಡಿಸುವುದಕ್ಕೆ ಹಿಂದೇಟು ಹಾಕಿತ್ತು.
 
ವಿದ್ಯಾರ್ಥಿಗಳ ಬ್ಯಾಗ್ ತೂಕ ಎಷ್ಟಿರಬೇಕು : ವಿದ್ಯಾರ್ಥಿಗಳ ತರಗತಿಗೆ ಅನುಗುಣವಾಗಿ ಬ್ಯಾಗ್‌ ತೂಕ ಎಷ್ಟಿರಬೇಕು ಎಂಬ ಮಿತಿಯನ್ನೂ ನೀಡಲಾಗಿದೆ. 1ರಿಂದ 2ನೇ ತರಗತಿ ಮಕ್ಕಳ ಬ್ಯಾಗ್‌ ತೂಕ 1.5ರಿಂದ 2 ಕೆ.ಜಿ.ಯಷ್ಟು ಮಾತ್ರ ಇರಬೇಕು. 3ರಿಂದ 5ನೇ ತರಗತಿ ಮಕ್ಕಳ ಬ್ಯಾಗ್‌ 2ರಿಂದ 3 ಕೆ.ಜಿ.ಯೊಳಗೆ ಇರಬೇಕು.  6–8ನೇ ತರಗತಿ ಮಕ್ಕಳ ಬ್ಯಾಗ್‌ 3–4 ಕೆ.ಜಿ.ಮೀರಬಾರದು. 9–10ನೇ ತರಗತಿ ಮಕ್ಕಳ ಬ್ಯಾಗ್‌ 4ರಿಂದ 5 ಕೆ.ಜಿ.ಯೊಳಗೆಯೇ ಇರಬೇಕು ಎಂದು ಸೂಚಿಸಲಾಗಿದೆ.
 
ಮನೆ ಕೆಲಸ ಇಲ್ಲ: 1 ಮತ್ತು 2ನೇ ತರಗತಿಯ ಮಕ್ಕಳಿಗೆ ಮನೆ ಕೆಲಸ (ಹೋಂ ವರ್ಕ್‌) ಕೊಡಬಾರದು ಎಂದು ಸರ್ಕಾರ ಸೂಚಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
ಪ್ರತಿ ತಿಂಗಳ ಮೂರನೇ ಶನಿವಾರ ಶಾಲೆಗಳಲ್ಲಿ ‘ಬ್ಯಾಗ್‌ ರಹಿತ ದಿನ’ ಆಚರಿಸಬೇಕು. ಈ ದಿನಗಳಲ್ಲಿ ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ತಿಳಿಸಲಾಗಿದೆ.

ಸದ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು 1.8ರಿಂದ 8.3 ಕೆ.ಜಿ.ಯಷ್ಟು ತೂಕದ ಬ್ಯಾಗ್‌ ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದಾರೆ ಎಂಬುದನ್ನು ಪರಿಣತರ ಸಮಿತಿ ಕಂಡುಕೊಂಡಿತ್ತು.

ಸರ್ಕಾರದ ಆದೇಶದಿಂದ ಸಂತಸವಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು 
       – ಡಾ.ವಿ.ಪಿ.ನಿರಂಜನಾರಾಧ್ಯಪರಿಣತರ ಸಮಿತಿಯ ಮುಖ್ಯಸ್ಥ