ಇರಾನ್ ಮೇಲೆ ಅಮೆರಿಕ ನಿರ್ಬಂಧ ಜಾರಿ: ಭಾರತದ ಮೇಲೆ ಪರಿಣಾಮವೇನು?

0
684

ಇರಾನ್‌ ವಿರುದ್ಧ ಅಮೆರಿಕ ನವೆಂಬರ್ 5 ರ ಸೋಮವಾರ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಆದರೆ ಇದನ್ನು ಧಿಕ್ಕರಿಸುವುದಾಗಿ ಇರಾನ್‌ ತಿರುಗೇಟು ಕೊಟ್ಟಿದೆ. ”ಇದು ಅತ್ಯುಗ್ರವಾದ ನಿರ್ಬಂಧ” ಎಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪೆಯೊ ಹೇಳಿದ್ದಾರೆ. ತೈಲ

ವಾಷಿಂಗ್ಟನ್‌: ಇರಾನ್‌ ವಿರುದ್ಧ ಅಮೆರಿಕ ಸೋಮವಾರ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಆದರೆ ಇದನ್ನು ಧಿಕ್ಕರಿಸುವುದಾಗಿ ಇರಾನ್‌ ತಿರುಗೇಟು ಕೊಟ್ಟಿದೆ. 

”ಇದು ಅತ್ಯುಗ್ರವಾದ ನಿರ್ಬಂಧ” ಎಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪೆಯೊ ಹೇಳಿದ್ದಾರೆ. 

ಇರಾನಿನ ಬ್ಯಾಂಕಿಂಗ್‌ ಹಾಗೂ ಇಂಧನ ವಲಯದ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದೆ. ಭಾರತಕ್ಕೆ 180 ದಿನಗಳ ಕಾಲ ಇರಾನ್‌ ತೈಲವನ್ನು ಆಮದು ಮಾಡಿಕೊಳ್ಳಲು ಅಮೆರಿಕ ವಿನಾಯಿತಿ ನೀಡಿದೆ. ಇದರೊಂದಿಗೆ 2015ರಲ್ಲಿ ಇರಾನ್‌ ಪರಮಾಣು ಕಾರ್ಯಕ್ರಮಗಳಿಗೆ ಸಂಬಂದಿಸಿದ ಬಹು ರಾಷ್ಟ್ರೀಯ ಒಪ್ಪಂದದಿಂದ ಅಮೆರಿಕ ಹೊರ ನಡೆದಿದೆ. ಇರಾನ್‌ ಸೈಬರ್‌ ದಾಳಿ, ಖಂಡಾಂತರ ಕ್ಷಿಪಣಿ ಪರೀಕ್ಷೆ, ಮಧ್ಯಪ್ರಾಚ್ಯದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಇತ್ಯಾದಿ ವಿದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದೆ. ಹೀಗಾಗಿ ಕಠಿಣ ನಿರ್ಬಂಧ ಅಗತ್ಯ ಎಂದು ಟ್ರಂಪ್‌ ತಮ್ಮ ಕ್ರಮವನ್ನು ಸಮರ್ಥಿಸಿದ್ದಾರೆ. 

ಭಾರತ, ಚೀನಾ, ಇರಾಕ್‌, ಇಟಲಿ, ಜಪಾನ್‌, ದಕ್ಷಿಣ ಕೊರಿಯಾಗೆ ಕ್ರಮೇಣ ಇರಾನ್‌ ತೈಲಆಮದನ್ನು ಕಡಿತಗೊಳಿಸಬೇಕು ಎಂದು ಅಮೆರಿಕ ತಿಳಿಸಿದೆ. ಒಟ್ಟಿನಲ್ಲಿ ಇರಾನ್‌ ತೈಲ ರಫ್ತು ವಹಿವಾಟನ್ನು ಸಂಪೂರ್ಣ ಸ್ಥಗಿತಗೊಳಿಸಿ, ಅದನ್ನು ಮಾತುಕತೆಗೆ ಬರುವಂತೆ ಮಣಿಸುವುದು ಟ್ರಂಪ್‌ ಸರಕಾರದ ಉದ್ದೇಶ. 

ಭಾರತದಿಂದ ಇರಾನ್‌ ತೈಲ ಆಮದು ಕಡಿತ: 

ಚೀನಾ ನಂತರ ಅತಿ ಹೆಚ್ಚು ಇರಾನ್‌ ತೈಲವನ್ನು  ಭಾರತ  ಆಮದು ಮಾಡುತ್ತಿದ್ದು, ಮಾಸಿಕ ಖರೀದಿಯನ್ನು 12.5 ಲಕ್ಷ ಟನ್‌ಗೆ, ಅಂದರೆ ವಾರ್ಷಿಕ 1.5 ಕೋಟಿ ಟನ್‌ಗೆ ಇಳಿಕೆ ಮಾಡಲು ನಿರ್ಧರಿಸಿದೆ. (ದಿನಕ್ಕೆ 3 ಲಕ್ಷ ಬ್ಯಾರೆಲ್‌) 2017-18ರಲ್ಲಿ 2.26 ಕೋಟಿ ಟನ್‌ (ದಿನಕ್ಕೆ 4.52 ಲಕ್ಷ ಬ್ಯಾರೆಲ್‌) ತೈಲವನ್ನು ಭಾರತ ಖರೀದಿಸಿತ್ತು. 

ಏನಿದು 2015ರ ಒಪ್ಪಂದ? 

ಅಮೆರಿಕ, ರಷ್ಯಾ, ಚೀನಾ, ಬ್ರಿಟನ್‌, ಫ್ರಾನ್ಸ್‌ ಮತ್ತು ಜರ್ಮನಿಯು 2015ರಲ್ಲಿ ಇರಾನ್‌ ವಿರುದ್ಧದ ಅಂತಾರಾಷ್ಟ್ರೀಯ ನಿರ್ಬಂಧವನ್ನು ತೆರೆವುಗೊಳಿಸಿತ್ತು. ಇದರಿಂದ ಸೀಮಿತ ಪ್ರಮಾಣದಲ್ಲಿ ಪರಮಾಣು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇರಾನ್‌ಗೆ ಅವಕಾಶ ಲಭಿಸಿತ್ತು. ಇದರಿಂದ ವಿದೇಶಿ ವೈದ್ಯಕೀಯ, ಆಟೊಮೊಬೈಲ್‌, ಹಣಕಾಸು, ನಾಗರಿಕ ವಿಮಾನಯಾನ ಕಂಪನಿಗಳಿಗೆ ಇರಾನ್‌ನಲ್ಲಿ ಬಿಸಿನೆಸ್‌ ಮಾಡಲು ಹಾದಿ ಸುಗಮವಾಗಿತ್ತು. 

ಇರಾನ್‌ನ ಪ್ರಮುಖ ತೈಲ ಗ್ರಾಹಕರಾರು? 

ಚೀನಾ, ಭಾರತ, ಕೊರಿಯಾ, ಟರ್ಕಿ, ಇಟಲಿ, ಜಪಾನ್‌, ಯುಎಇ, ಸ್ಪೇನ್‌, ಫ್ರಾನ್ಸ್‌, ಗ್ರೀಸ್‌, ಸಿರಿಯಾ, ತೈವಾನ್‌. 

ಭಾರತದ ಮೇಲೆ ಪರಿಣಾಮವೇನು? 

ತೈಲ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿರುವ ಪ್ರಕಾರ, ಇನ್ನೂ 6 ತಿಂಗಳುಗಳ ಕಾಲ ಇರಾನ್‌ನಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಅಮೆರಿಕದ ಅಡ್ಡಿ ಇರುವುದಿಲ್ಲ. ಆದರೆ ಕ್ರಮೇಣ ಆಮದು ಕಡಿತಗೊಳಿಸುತ್ತಾ ಸ್ಥಗಿತಗೊಳಿಸಬೇಕು ಎಂದು ಅಮೆರಿಕ ಪ್ರತಿಪಾದಿಸಿದೆ. 

6 ತಿಂಗಳಿನ ಬಳಿಕ ವಿನಾಯಿತಿಯನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವ , ಮೈಕ್‌ ಪೊಂಪೆಯೊ ತಿಳಿಸಿದ್ದಾರೆ. ಜತೆಗೆ ಮುಂದೇನು ಎಂಬ ಅನಿಶ್ಚಿತತೆ ಇದೆ. 

ಅಮೆರಿಕದ ನಿರ್ಬಂಧ ಜಾಗತಿಕ ಆರ್ಥಿಕತೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಇದಕ್ಕೆ ಅವರು ನೀಡುವ ಕಾರಣವೇನೆಂದರೆ, ಇರಾನ್‌ ಇಡೀ ವಿಶ್ವದಲ್ಲಿಯೇ 6ನೇ ಅತಿ ದೊಡ್ಡ ತೈಲೋತ್ಪಾದಕ. ಎರಡನೆಯದಾಗಿ ಭಾರತ ಮೂರನೇ ಅತಿ ದೊಡ್ಡ ಇರಾನ್‌ ತೈಲ ಆಮದುದಾರ. 

ಮಧ್ಯಪ್ರಾಚ್ಯದಲ್ಲಿ ಇರಾನ್‌ ಪ್ರಾಬಲ್ಯವನ್ನು ಶತಾಯಗತಾಯ ತಗ್ಗಿಸಬೇಕು ಎನ್ನುವ ಉದ್ದೇಶ ಅಮೆರಿಕದ್ದು. ಹೀಗಾಗಿ ಸದ್ಯಕ್ಕೆ ಬಿಕ್ಕಟ್ಟು ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. 

ಭಾರತ ಶೇ.17ರಷ್ಟು ತೈಲವನ್ನು ಇರಾನ್‌ನಿಂದ ಆಮದು ಮಾಡುತ್ತಿದ್ದು, ಇದಕ್ಕೆ ಕೊರತೆಯಾದರೆ ಸೌದಿ ಅರೇಬಿಯಾ, ಕುವೈತ್‌ ಮುಂತಾದ ಇತರ ಕೊಲ್ಲಿ ರಾಷ್ಟ್ರಗಳಿಂದ ಹೆಚ್ಚುವರಿ ತೈಲ ಖರೀದಿ ಅನಿವಾರ್ಯವಾಗಲಿದೆ. ಅದು ಇರಾನ್‌ ತೈಲಕ್ಕೆ ಹೋಲಿಸಿದರೆ ದುಬಾರಿ. 

ಭಾರತದ ಸಾರ್ವಜನಿಕ ವಲಯದ ಒಎನ್‌ಜಿಸಿ ವಿದೇಶ್‌, ಲ್ಯಾಟಿನ್‌ ಅಮೆರಿಕ, ಆಫ್ರಿಕಾ, ಸೈಬೀರಿಯಾ ಮುಂತಾದ ಕಡೆಗಳಲ್ಲಿ ಕಚ್ಚಾ ತೈಲ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರೂ, ತಕ್ಷಣದ ಬೇಡಿಕೆ ಪೂರೈಸುವಷ್ಟು ಸಿಗಲಾರದು.