ಇನ್ಮುಂದೆ ಶೇ.33ರಷ್ಟು ಬೆಳೆ ನಷ್ಟವಾದರೂ ಬರಪೀಡಿತ ಜಿಲ್ಲೆ ಎಂದು ಘೋಷಣೆ

0
834

ಇನ್ನು ಮುಂದೆ ಯಾವುದೇ ತಾಲೂಕಿನ ಶೇ.75 ರಷ್ಟು ಕೃಷಿ ಪ್ರದೇಶದಲ್ಲಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.50ರಷ್ಟು ತೇವಾಂಶವಿಲ್ಲದೆ ಶೇ.33 ರಷ್ಟು ಬೆಳೆ ನಾಶವಾದರೂ ಆ ಜಿಲ್ಲೆಯನ್ನೂ ಬರಪೀಡಿತ ಎಂದು ಘೋಷಿಸಬಹುದು !

ಬೆಂಗಳೂರು: ಇನ್ನು ಮುಂದೆ ಯಾವುದೇ ತಾಲೂಕಿನ ಶೇ.75 ರಷ್ಟು ಕೃಷಿ ಪ್ರದೇಶದಲ್ಲಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.50ರಷ್ಟು ತೇವಾಂಶವಿಲ್ಲದೆ ಶೇ.33 ರಷ್ಟು ಬೆಳೆ ನಾಶವಾದರೂ ಆ ಜಿಲ್ಲೆಯನ್ನೂ ಬರಪೀಡಿತ ಎಂದು ಘೋಷಿಸಬಹುದು ! 
ಬರ ಘೋಷಣೆಗೆ ಸಂಬಂಧಿಸಿದ ಕಠಿಣ ಮಾನದಂಡವನ್ನು ಕೇಂದ್ರ ಸರಕಾರ ಸಡಿಲಗೊಳಿಸಿದೆ.ಇದರಿಂದಾಗಿ ಪ್ರಸಕ್ತ ಮುಂಗಾರಿನಲ್ಲಿ ಮಳೆ ಕೊರತೆ ಎದುರಿಸುತ್ತಿರುವ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ದಾರಿ ಸುಗಮವಾಗಿದೆ. ಬರಪೀಡಿತ ಪ್ರದೇಶ ಗುರುತಿಸುವ ವಿಚಾರದಲ್ಲಿ ಪಾಲಿಸಲು ಸಾಧ್ಯವೇ ಆಗದಂತಹ ಮಾನದಂಡವನ್ನು 2016 ರ ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರ ಹೊರಡಿತ್ತು. ಇದು ವೈಜ್ಞಾನಿಕವಾಗಿಲ್ಲ ಎಂಬ ದೂರುಗಳಿದ್ದವು. ಹಾಗಾಗಿ 2017 ರ ಮುಂಗಾರಿನಲ್ಲಿ 60 ತಾಲೂಕುಗಳು ಬರಪೀಡಿತವಾಗಿದ್ದರೂ ಕೇಂದ್ರದಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ವ್ಯಾಪಕ ಬೆಳೆ ನಷ್ಟವಾಗಿದ್ದರೂ ಮಾನದಂಡದ ಅಸ್ತ್ರ ಮುಂದಿಟ್ಟಿದ್ದ ಕೇಂದ್ರ ಸರಕಾರ ಇನ್‌ಪುಟ್‌ ಸಬ್ಸಿಡಿಗೆ ಹಣ ಒದಗಿಸಲು ನಿರಾಕರಿಸಿತ್ತು. 

ಈ ಬೆಳವಣಿಗೆಯಿಂದ ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳೂ ಕಂಗಾಲಾಗಿ ಹೋಗಿದ್ದವು. ಈ ಮಾನದಂಡ ಸರಳೀಕರಿಸುವಂತೆ ಎಲ್ಲ ರಾಜ್ಯಗಳೂ ಕೇಂದ್ರದ ಮೇಲೆ ಒತ್ತಡ ಹೇರಿದ್ದವು. ವಿಶೇಷವಾಗಿ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್‌ನಂತಹ ರಾಜ್ಯಗಳೂ ಬರ ಸಂಬಂಧಿತ ಈ ಹೊಸ ಮಾರ್ಗಸೂಚಿಯನ್ನು ಬಲವಾಗಿ ವಿರೋಧಿಸಿದ್ದವು. ಈ ಹಿನ್ನೆಲೆಯಲ್ಲಿ ಕಡೆಗೂ ಕೇಂದ್ರ ಸರಕಾರ ಮಾನದಂಡ ಬದಲಿಸಿದೆ. 

ರಾಜ್ಯದಲ್ಲಿ ಈ ಬಾರಿ ಕರಾವಳಿ-ಮಲೆನಾಡಿನಲ್ಲಿ ಅತಿವೃಷ್ಟಿಯಾಗುತ್ತಿದೆ. ಉತ್ತರ ಕರ್ನಾಟಕ ಸೇರಿ 13 ಜಿಲ್ಲೆಗಳಲ್ಲಿ ಅನಾವೃಷ್ಟಿಯ ಸ್ಥಿತಿ. ಈ ಭಾಗದಲ್ಲಿ ಮಳೆ ಬಾರದ್ದರಿಂದ ಬೆಳೆ ನಾಶವಾಗುತ್ತಿದೆ. ಕುಡಿಯುವ ನೀರಿಗೂ ತತ್ವಾರವಿದೆ. ಹಳೆಯ ಮಾನದಂಡವೇ ಜಾರಿಯಲ್ಲಿ ಇದ್ದಿದ್ದರೆ ಬರ ಘೋಷಣೆ ಮಾಡಲು ತಡೆಯಾಗುತ್ತಿತ್ತು. ಇದರಲ್ಲಿ ಬದಲಾವಣೆ ಮಾಡಿದ್ದರಿಂದ ಬರದ ಛಾಯೆಯಿರುವ ತಾಲೂಕುಗಳ ಪಟ್ಟಿಯನ್ನು ಕಂದಾಯ ಇಲಾಖೆ ಇದೀಗ ತಯಾರಿಸುತ್ತಿದೆ. ಅದರಂತೆ ಸೆಪ್ಟೆಂಬರ್‌ ಮೊದಲ ವಾರದ ಹೊತ್ತಿಗೆ ಬರಪೀಡಿತ ತಾಲೂಕುಗಳ ಘೋಷಣೆಯಾಗುವ ನಿರೀಕ್ಷೆಯಿದೆ. 

ತಕ್ಷಣವೇ ಪರಿಹಾರ 

ಈ ಹಿಂದೆಲ್ಲ ಕೇಂದ್ರದಿಂದ ಬರ ಪರಿಹಾರ ಪಡೆಯುವುದೆಂದರೆ ಹರಸಾಹಸದ ಕೆಲಸವಾಗುತ್ತಿತ್ತು. ಬರಪೀಡಿತ ತಾಲೂಕುಗಳನ್ನು ಘೋಷಿಸಿ ನಷ್ಟದ ಅಂದಾಜಿನ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸುವುದು ಮೊದಲ ಹಂತ. ನಂತರ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿತ್ತು. ಅದಾದ ಬಳಿಕ ಕೇಂದ್ರ ಗೃಹ ಸಚಿವಾಲಯದಡಿಯ ಸಮಿತಿ ಸಭೆ ನಡೆಸಿ ಪರಿಹಾರದ ಮೊತ್ತವನ್ನು ನಿಗದಿ ಪಡಿಸುತ್ತಿತ್ತು. ಈ ಮೊತ್ತ ರಾಜ್ಯದ ಖಾತೆಗೆ ಜಮಾ ಆಗಲು ಕನಿಷ್ಠ 6 ತಿಂಗಳ ಹಿಡಿಯುತ್ತಿತ್ತು. ಈಗ ಈ ವಿಧಾನದಲ್ಲೂ ಸುಧಾರಣೆ ತರಲಾಗುತ್ತಿದೆ. ಅದರಂತೆ, ಫೋಟೊ ಹಾಗೂ ವಿಡಿಯೋ ಸಹಿತ ಬರಪೀಡಿತ ತಾಲೂಕುಗಳ ಸ್ಥಿತಿಗತಿಯ ಬಗ್ಗೆ ಕೇಂದ್ರಕ್ಕೆ ವರದಿ ರವಾನಿಸಬೇಕು. ಕೇಂದ್ರ ತಂಡವೂ ರಾಜ್ಯಕ್ಕೆ ಬಂದು ವೀಕ್ಷಣೆ ಮಾಡುತ್ತದೆ. ತಜ್ಞರ ತಂಡ ಇಲ್ಲಿಂದ ದಿಲ್ಲಿಗೆ ವಾಪಸಾಗುತ್ತಿದ್ದಂತೆ ಹಣ ಬಿಡುಗಡೆಗೆ ಶಿಫಾರಸು ಮಾಡಲಾಗುತ್ತದೆ. ಈ ಉದ್ದೇಶಕ್ಕೆ ಸಾಲು ಸಾಲು ಸಭೆ ನಡೆಸಿ ಕಾಲಹರಣ ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 1 ತಿಂಗಳ ಅವಧಿಯಲ್ಲೇ ಈ ಪ್ರಕ್ರಿಯೆ ಮುಗಿದು ಹೋಗುತ್ತದೆ. ಬೆಳೆ ನಷ್ಟದ ಪರಿಹಾರದ ಮೊತ್ತವನ್ನು (ಇನ್‌ಪುಟ್‌ ಸಬ್ಸಿಡಿ) ತಕ್ಷಣವೇ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. 

ಬದಲಾವಣೆಯೇನು? 

2016 ರ ಮಾನದಂಡದಂತೆ ವಾಡಿಕೆ ಮಳೆಯಲ್ಲಿ ಶೇ.75 ರಷ್ಟು ಕೊರತೆಯಿರಬೇಕು. ಸತತ 3 ವಾರ ಒಣ ಹವೆಯಿರಬೇಕು. ಇದರಿಂದ ಅಂಥ ಸಮಸ್ಯೆಯೇನೂ ಇರಲಿಲ್ಲ. ಆದರೆ, ಶೇ.50 ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿರಬೇಕು. ಶೇ.25 ಕ್ಕಿಂತ ಕಡಿಮೆ ತೇವಾಂಶವಿರಬೇಕು. ಶೇ.50 ಕ್ಕಿಂತ ಹೆಚ್ಚು ಬೆಳೆ ನಾಶವಾಗಿರಬೇಕು. ಅಂತರ್ಜಲದ ಮಟ್ಟ ಹಾಗೂ ಜಲಾಶಯಗಳ ನೀರಿನ ಸಂಗ್ರಹವನ್ನೂ ಪರಿಗಣಿಸಬೇಕು ಎಂಬ ಕ್ಲಿಷ್ಟ ಮಾನದಂಡವಿತ್ತು. ಈಗ ಅದನ್ನು ಬದಲಿಸಲಾಗಿದೆ. 

ಬರ ಘೋಷಣೆಗೆ ಹೊಸ ಮಾನದಂಡ 

ಸತತ 3 ವಾರ ಒಣ ಹವೆ, ವಾಡಿಕೆ ಮಳೆಯಲ್ಲಿ ಶೇ.75 ರಷ್ಟು ಕೊರತೆ 

ಶೇ.75 ರಷ್ಟು ಮಾತ್ರ ಬಿತ್ತನೆ 

ಶೇ.50 ರಷ್ಟು ತೇವಾಂಶ 

ಶೇ.33 ರಷ್ಟು ಬೆಳೆ ನಾಶ

ಬರ ಘೋಷಣೆ ಕುರಿತ ಕ್ಲಿಷ್ಟ ಮಾನದಂಡ ಸಡಿಲವಾಗಿದೆ. ಇಲ್ಲದಿದ್ದರೆ ಬರ ಘೋಷಣೆಯೇ ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರಕಾರ ಸ್ಪಂದಿಸಿದ್ದರಿಂದ ರಾಜ್ಯದಲ್ಲಿ ಮಳೆ ಕೊರತೆಯಿರುವ ತಾಲೂಕುಗಳಲ್ಲಿ ಈ ಬಾರಿ ಬರ ಘೋಷಿಸಿ ನೆರವು ಪಡೆಯಬಹುದು. 

– ಡಾ.ಸಿ.ಎನ್‌. ಪ್ರಭು, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ