ಇನ್ನು ವರ್ಷಕ್ಕೆರಡು ನೀಟ್, ಜೆಇಇ

0
16

ವೃತ್ತಿಪರ ಕೋರ್ಸ್​ಗಳ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಸುಧಾರಣೆ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಮುಂದಡಿ ಇಟ್ಟಿದೆ. ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವೃತ್ತಿಪರ ಕೋರ್ಸ್​ಗಳ ಪ್ರವೇಶವನ್ನು ಸುಗಮವಾಗಿಸಲು ಇನ್ನು ವರ್ಷಕ್ಕೆ ಎರಡು ಬಾರಿ ಜೆಇಇ-ಮೇನ್ ಹಾಗೂ ನೀಟ್ ನಡೆಸಲು ನಿರ್ಧರಿಸಲಾಗಿದೆ.

ನವದೆಹಲಿ: ವೃತ್ತಿಪರ ಕೋರ್ಸ್​ಗಳ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಸುಧಾರಣೆ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಮುಂದಡಿ ಇಟ್ಟಿದೆ. ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವೃತ್ತಿಪರ ಕೋರ್ಸ್​ಗಳ ಪ್ರವೇಶವನ್ನು ಸುಗಮವಾಗಿಸಲು ಇನ್ನು ವರ್ಷಕ್ಕೆ ಎರಡು ಬಾರಿ ಜೆಇಇ-ಮೇನ್ ಹಾಗೂ ನೀಟ್ ನಡೆಸಲು ನಿರ್ಧರಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್​ಟಿಇ) ಮೂಲಕ ಈ ಪರೀಕ್ಷೆಗಳು(ಆನ್​ಲೈನ್​ಗೆ ಸೀಮಿತವಾಗಿ) ಶೈಕ್ಷಣಿಕ ವರ್ಷದ ಕೊನೆಯಲ್ಲಿ ಎರಡು ಬಾರಿ ನಡೆಯಲಿವೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಕಬ್ಬಿಣದ ಕಡಲೆ ಎನ್ನುವ ಮನೋಭಾವವನ್ನು ದೂರಾಗಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಈ ಹೆಜ್ಜೆ ಇಟ್ಟಿದೆ. ಎರಡು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ್ದನ್ನಷ್ಟೇ ಕೌನ್ಸೆಲಿಂಗ್​ಗೆ ಅನ್ವಯಿಸಲಾಗುತ್ತದೆ. ಇದರಿಂದ ಪ್ರತಿ ವಿದ್ಯಾರ್ಥಿಗೂ ತನ್ನ ಶೈಕ್ಷಣಿಕ ಸಾಮರ್ಥ್ಯ ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ. ಹಾಗೆಯೇ ಸ್ಪರ್ಧೆ ಕೂಡ ಇನ್ನಷ್ಟು ಹೆಚ್ಚಲಿದೆ.

ಪರೀಕ್ಷಾ ವ್ಯವಸ್ಥೆಯಲ್ಲಷ್ಟೇ ಬದಲಾವಣೆಗೆ ನಿರ್ಧರಿಸಿರುವುದರಿಂದ ಶುಲ್ಕ, ಪಠ್ಯಕ್ರಮ ಹಾಗೂ ಪ್ರವೇಶ ಪ್ರಕ್ರಿಯೆ ಕೌನ್ಸೆಲಿಂಗ್​ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಇದರ ಜತೆಗೆ ಸಿ-ಮ್ಯಾಟ್ ಹಾಗೂ ಜಿ-ಪ್ಯಾಟ್ ಕೂಡ ಆನ್​ಲೈನ್ ಪರೀಕ್ಷೆ ಇರಲಿದೆ. ಹೊಸ ವ್ಯವಸ್ಥೆ ಪ್ರಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜನವರಿ ಹಾಗೂ ಏಪ್ರಿಲ್​ನಲ್ಲಿ ಜೆಇಇ-ಮೇನ್ಸ್, ಫೆಬ್ರವರಿ ಹಾಗೂ ಮೇನಲ್ಲಿ ನೀಟ್ ನಡೆಯಲಿದೆ.

ನೀಟ್ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್

ಜೆಇಇ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್

ಇಲ್ಲಿಯವರೆಗೆ ವರ್ಷಕ್ಕೆ ಎರಡು ಬಾರಿ ನ್ಯಾಷನಲ್ ಎಲಿಜಿಬಿಲಿಟಿ ಪರೀಕ್ಷೆ (ನೆಟ್) ನಡೆಯುತ್ತಿತ್ತು. ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಡಿಸೆಂಬರ್​ನಲ್ಲಷ್ಟೇ ನೆಟ್ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆ ಕೂಡ ಆನ್​ಲೈನ್​ನಲ್ಲಿ ನಡೆಯಲಿದ್ದು, ಎನ್​ಇಟಿ ಮೂಲಕ ಕಲ್ಪಿತ ಪರೀಕ್ಷೆ (ಮಾಕ್ ಟೆಸ್ಟ್) ಕೂಡ ನಡೆಯಲಿದೆ.