ಇನ್ನು ಅಲಹಾಬಾದ್ ​ಹೆಸರು “ಪ್ರಯಾಗರಾಜ್” ಎಂದು ಶೀಘ್ರದಲ್ಲಿಯೇ ಮರುನಾಮಕರಣ

0
554

ಉತ್ತರ ಪ್ರದೇಶದ ಐತಿಹಾಸಿಕ ನಗರ ಮತ್ತು ಪವಿತ್ರ ಕ್ಷೇತ್ರ ಅಲಹಾಬಾದ್ ಶೀಘ್ರದಲ್ಲೆ ‘ಪ್ರಯಾಗರಾಜ್’ ಎಂದು ಮರುನಾಮಕರಣಗೊಳ್ಳಲಿದೆ.

ಲಖನೌ: ಉತ್ತರ ಪ್ರದೇಶದ ಐತಿಹಾಸಿಕ ನಗರ ಮತ್ತು ಪವಿತ್ರ ಕ್ಷೇತ್ರ ಅಲಹಾಬಾದ್ ಶೀಘ್ರದಲ್ಲೆ ‘ಪ್ರಯಾಗರಾಜ್’ ಎಂದು ಮರುನಾಮಕರಣಗೊಳ್ಳಲಿದೆ.

ಮುಂದಿನ ವರ್ಷ ಜನವರಿಯಲ್ಲಿ ಅರ್ಧ ಕುಂಭಮೇಳ ನಡೆಯಲಿದ್ದು, ಅದಕ್ಕೂ ಮುನ್ನ ಮರುನಾಮಕರಣ ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಅರ್ಧಕುಂಭ ಮೇಳದ ಹೊತ್ತಿಗೆ ಅಲಹಾ ಬಾದನ್ನು ‘ಪ್ರಯಾಗರಾಜ್’ ಎಂದು ಘೋಷಿಸುವಂತೆ ಸಾಧು- ಸಂತರ ಅಖಾಡಾ ಪರಿಷತ್​ನ ಮಾರ್ಗದರ್ಶಕ ಮಂಡಳಿ ಮನವಿ ಮಾಡಿದೆ. ಈ ಮನವಿಗೆ ರಾಜ್ಯಪಾಲರು ಸಮ್ಮತಿಸಿದ್ದಾರೆ. ಹೀಗಾಗಿ ಹೆಸರನ್ನು ಶೀಘ್ರದಲ್ಲೆ ಬದಲಿಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ. ಇತ್ತೀಚೆಗೆ ಮುಘಲ್​ಸರಾಯ್ ರೈಲು ನಿಲ್ದಾಣವನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಉತ್ತರ ಪ್ರದೇಶ ಸರ್ಕಾರ ಮರುನಾಮಕರಣ ಮಾಡಿದೆ. ಮುಘಲ್​ಸರಾಯ್ ಪಟ್ಟಣಕ್ಕೂ ಪಂ. ದೀನದಯಾಳ್ ಉಪಾಧ್ಯಾಯ ನಗರ ಎಂದು ನಾಮಕರಣ ಮಾಡಲಾಗಿದೆ.

ಅಲಹಾಬಾದ್ ಹೆಸರು ಬಂದಿದ್ದು ಹೇಗೆ?

ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮ ಸ್ಥಳ ಅಲಹಾಬಾದ್. ಶತಮಾನಗಳ ಹಿಂದೆ ಇದನ್ನು ‘ಪ್ರಯಾಗ’ ಎಂದು ಕರೆಯಲಾಗುತ್ತಿತ್ತು. ಮೊಘಲ್ ದೊರೆ ಅಕ್ಬರ್, ಸಂಗಮ ಸ್ಥಳದಲ್ಲಿದ್ದ ಕೋಟೆ ಮತ್ತು ಸುತ್ತಮುತ್ತಲ ಪ್ರದೇಶವನ್ನು ‘ಇಲಹಾಬಾದ್’ ಎಂದು ಘೋಷಿಸಿದ. ಅಕ್ಬರ್​ನ ಮೊಮ್ಮಗ ಷಹಜಹಾನ್ ಇಡೀ ನಗರವನ್ನು ಅಲಹಾಬಾದ್ ಎಂದು ಮರುನಾಮಕರಣ ಮಾಡಿದ. ಆದರೆ, ನದಿಗಳ ಸಂಗಮ ಸ್ಥಳವನ್ನು ಈಗಲೂ ಪ್ರಯಾಗ ಎಂದೇ ಕರೆಯಲಾಗುತ್ತದೆ. -ಏಜೆನ್ಸೀಸ್