ಇತಿಹಾಸ ಬರೆದ ಬ್ರಹ್ಮೋಸ್: ಸುಖೋಯ್ ಯುದ್ಧ ವಿಮಾನದಿಂದ ಯಶಸ್ವಿ ಉಡಾವಣೆ!

0
21

ವಿಶ್ವದ ಅತ್ಯಂತ ವೇಗದ ಮತ್ತು ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಪಡೆದಿರುವ ಬ್ರಹ್ಮೋಸ್ ಕ್ಷಿಪಣಿ ಮತ್ತೊಂದು ದಾಖಲೆ ಬರೆದಿದ್ದು, ಸುಖೋಯ್-30ಎಂಕೆಐ ಯುದ್ಧ ವಿಮಾನದ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಸುಮಾರು 2.5 ಟನ್ ತೂಕದ ಬ್ರಹ್ಮೋಸ್ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ಭಾರತೀಯ ವಾಯು ಪಡೆಯ ದೊಡ್ಡ ಯುದ್ಧ ವಿಮಾನ ಸುಖೋಯ್-30 ಎಂ.ಕೆ.ಐ ಗೆ ಅಳವಡಿಸಿ ಆಗಸದಿಂದ ಇಂದು ಬೆಳಗ್ಗೆ ಉಡಾಯಿಸಲಾಗಿತ್ತು.  ಯಶಸ್ವಿಯಾಗಿ ಉಡಾಯಿಸಲ್ಪಟ್ಟ ಬ್ರಹ್ಮೋಸ್ ಕ್ಷಿಪಣಿ ಮೊದಲೇ ನಿಗದಿ ಪಡಿಸಿದ್ದ ಗುರಿಗೆ ನಿಖರ ಅವಧಿಯಲ್ಲಿ ಕರಾರುವಕ್ಕಾಗಿ ಅಪ್ಪಳಿಸುವ ಮೂಲಕ ಯೋಜನೆ ಯಶಸ್ವಿಯಾಗಿದೆ.
 
ಆ ಮೂಲಕ ಬ್ರಹ್ನೋಸ್ ಭೂಮಿ, ಜಲ ಮತ್ತು  ಗಾಳಿಯಿಂದಲೂ ಉಡಾಯಿಸಬಲ್ಲ ಕ್ಷಿಪಣಿಯಾಗಿ ಭಾರತೀಯ ಸೇನೆಯ ಬತ್ತಳಿಕೆ ಸೇರಿದೆ.
 
ಪರೀಕ್ಷಾರ್ಥ ಉಡಾವಣೆಗಾಗಿಯೇ ಬಂಗಾಳಕೊಲ್ಲಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಗುರಿಯನ್ನು ನಿಗದಿ ಪಡಿಸಲಾಗಿದ್ದ ಸಮಯದಲ್ಲಿ ತಲುಪುವ ಮೂಲಕ ಬ್ರಹ್ಮೋಸ್ ಕ್ಷಿಪಣಿ ಯೋಜನೆ ಯಶಸ್ವಿಯಾಗಿದೆ. ಈ ಹಿಂದೆ ಬ್ರಹ್ಮೋಸ್  ಕ್ಷಿಪಣಿಯನ್ನು ಭೂಮಿಯ ಮೇಲೆ ಮೊಬೈಲ್ ಲಾಂಚರ್ ಮೂಲಕ ಒಡಿಶಾದಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಬಳಿಕ ಜಲಾಂತರ್ಗಾಮಿ ನೌಕೆ ಮತ್ತು ಸಮರ ನೌಕೆಗಳಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಇದೀಗ  ಸುಖೋಯ್ ಯುದ್ಧ ವಿಮಾನಕ್ಕೆ ಅಳವಡಿಸಿ ಉಡಾಯಿಸಲಾಗಿದ್ದು, ಕ್ಷಿಪಣಿ ನಿಖರವಾಗಿ ಗುರಿ ತಲುಪಿದೆ.
 
ವಾಯುಮಾರ್ಗದಲ್ಲಿ ಬ್ರಹ್ಮೋಸ್ ಗೆ ಇದು ಮೊದಲ ಉಡಾವಣೆಯಾಗಿದ್ದು, ಮೊದಲ ಪಯಣದಲ್ಲೇ ಯಶಸ್ವಿಯಾಗುವ ಮೂಲಕ ತಾನು ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಎಂಬುದನ್ನು ಸಾಬೀತು ಮಾಡಿದೆ.