ಇಕ್ಕಟ್ಟಿನಲ್ಲಿ ಸಚಿನ್,ಗಂಗೂಲಿ, ಲಕ್ಷ್ಮಣ್: ಒಂದೇ ಹುದ್ದೆ ವಹಿಸಲು ಬಿಸಿಸಿಐ ಸೂಚನೆ

0
22

ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಲೋಧಾ ಸಮಿತಿಯ ಶಿಫಾರಸು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬಿಸಿಸಿಐ ನೀತಿಸಂಹಿತೆ ಅಧಿಕಾರಿ ಹಾಗೂ ಒಂಬುಡ್ಸ್ ಮನ್ ಡಿಕೆ ಜೈನ್ ಮುಂದಾಗಿದ್ದಾರೆ. ಇದರಿಂದಾಗಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯತ್ವ, ಐಪಿಎಲ್ ಫ್ರಾಂಚೈಸಿ ಹುದ್ದೆ ಮತ್ತು ವೀಕ್ಷಕವಿವರಣೆಗಳ ನಡುವೆ ಒಂದನ್ನು ಆಯ್ದುಕೊಳ್ಳುವ ಇಕ್ಕಟ್ಟಿಗೆ ಸಿಲುಕಿದ್ದಾರೆ.

ನವದೆಹಲಿ: ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಲೋಧಾ ಸಮಿತಿಯ ಶಿಫಾರಸು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬಿಸಿಸಿಐ ನೀತಿಸಂಹಿತೆ ಅಧಿಕಾರಿ ಹಾಗೂ ಒಂಬುಡ್ಸ್ ಮನ್ ಡಿಕೆ ಜೈನ್ ಮುಂದಾಗಿದ್ದಾರೆ. ಇದರಿಂದಾಗಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯತ್ವ, ಐಪಿಎಲ್ ಫ್ರಾಂಚೈಸಿ ಹುದ್ದೆ ಮತ್ತು ವೀಕ್ಷಕವಿವರಣೆಗಳ ನಡುವೆ ಒಂದನ್ನು ಆಯ್ದುಕೊಳ್ಳುವ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ವಿರುದ್ಧ ಈಗಾಗಲೆ ಸ್ವಹಿತಾಸಕ್ತಿ ಸಂಘರ್ಷದ ದೂರು ದಾಖಲಾಗಿ ಅದರ ವಿಚಾರಣೆಯೂ ನಡೆದಿತ್ತು. ಇದರ ಬೆನ್ನಲ್ಲೇ ಸಚಿನ್ ಸಿಎಸಿ ಸದಸ್ಯತ್ವ ತ್ಯಜಿಸಿ, ಮುಂಬೈ ಇಂಡಿಯನ್ಸ್ ಮೆಂಟರ್ ಆಗಿ ಮುಂದು ವರಿಯಲು ನಿರ್ಧರಿಸಿದ್ದರು. ಈ ನಡುವೆ ಹಾಲಿ ವಿಶ್ವಕಪ್​ನಲ್ಲಿ ಸಚಿನ್ ವೀಕ್ಷಕವಿವರಣೆಕಾರರೂ ಆಗಿದ್ದಾರೆ. ಗಂಗೂಲಿ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್, ಸಿಎಸಿ ಸದಸ್ಯತ್ವ, ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮತ್ತು ವಿಶ್ವಕಪ್​ನಲ್ಲಿ ವೀಕ್ಷಕವಿವರಣೆ ಹೊಣೆ ಹೊತ್ತುಕೊಂಡಿದ್ದಾರೆ. ಲಕ್ಷ್ಮಣ್ ಸದ್ಯ ಸನ್​ರೈಸರ್ಸ್ ತಂಡದ ಮೆಂಟರ್, ಸಿಎಸಿ ಸದಸ್ಯತ್ವ ಮತ್ತು ವಿಶ್ವಕಪ್​ನಲ್ಲಿ ವೀಕ್ಷಕವಿವರಣೆಕಾರರಾಗಿದ್ದಾರೆ.

ಹೀಗಾಗಿ ಇವರೆಲ್ಲರೂ ಒಂದು ಹೊಣೆಯನ್ನು ಮಾತ್ರ ವಹಿಸಿಕೊಂಡು ಇತರ ಹುದ್ದೆಗಳನ್ನು ತ್ಯಜಿಸಬೇಕಾಗಿದೆ. ಹಾಲಿ ಏಕದಿನ ವಿಶ್ವಕಪ್​ನಲ್ಲಿ ರಾಬಿನ್ ಉತ್ತಪ್ಪ, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಸಹಿತ ಹಲವು ಹಾಲಿ ಕ್ರಿಕೆಟಿಗರು ವೀಕ್ಷಕವಿವರಣೆ ನೀಡುತ್ತಿದ್ದಾರೆ. ಇದು ಕೂಡ ಲೋಧಾ ಶಿಫಾರಸಿನ ಉಲ್ಲಂಘನೆಯಾಗುತ್ತದೆ ಎಂದು ಡಿಕೆ ಜೈನ್ ಪರಿಗಣಿಸಿದ್ದಾರೆ. -ಪಿಟಿಐ

ಬಿಸಿಸಿಐ ಸಂವಿಧಾನದಲ್ಲೇನಿದೆ?

ಲೋಧಾ ಶಿಫಾರಸಿನ ಅನ್ವಯ ಹೊಸದಾಗಿ ರೂಪಿಸಲ್ಪಟ್ಟಿರುವ ಬಿಸಿಸಿಐ ಸಂವಿಧಾನದ ‘ಸ್ವಹಿತಾಸಕ್ತಿ ಸಂಘರ್ಷ’ ನಿಯಮದ ಪ್ರಕಾರ, ಯಾವುದೇ ವ್ಯಕ್ತಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆ ಅಲಂಕರಿಸುವಂತಿಲ್ಲ. ಹಾಲಿ ಕ್ರಿಕೆಟಿಗರು, ಆಯ್ಕೆಗಾರರು, ತಂಡದ ಅಧಿಕಾರಿಗಳು, ವೀಕ್ಷಕವಿವರಣೆಕಾರರು, ಪಂದ್ಯ ಅಧಿಕಾರಿಗಳು, ಆಡಳಿತಾಧಿಕಾರಿಗಳು ಮತ್ತು ಕ್ರಿಕೆಟ್ ಅಕಾಡೆಮಿಗಳ ಮಾಲೀಕರಿಗೆ ಇದು ಅನ್ವಯಿಸುತ್ತದೆ.