ಇಂದು ವಿಶ್ವ ಮಿದುಳು ಗಡ್ಡೆ ದಿನ: ಈ ಮಾರಣಾಂತಿಕ ರೋಗದ ಬಗ್ಗೆ ಇಲ್ಲಿದೆ ಮಾಹಿತಿ

0
41

ಪ್ರತಿ ವರ್ಷ ಜೂನ್ 8ನ್ನು ವಿಶ್ವ ಮಿದುಳು ಗಡ್ಡೆ ದಿನ ಎಂದು ಆಚರಿಸಲಾಗುತ್ತದೆ. ಮಿದುಳು ಟ್ಯೂಮರ್ ಬಗ್ಗೆ ಅರಿವನ್ನು ಹರಡುವುದು ಮತ್ತು ಈ ಕಾಯಿಲೆಯನ್ನು ಪರಿಣಾಮಕಾರಿ ರೀತಿಯಲ್ಲಿ ಎದುರಿಸಲು ರೋಗಿಗಳಿಗೆ ನೆರವಾಗುವುದು ಈ ದಿನಾಚರಣೆಯ ಉದ್ದೇಶವಾಗಿದೆ.

ಪ್ರತಿ ವರ್ಷ ಜೂನ್ 8ನ್ನು ವಿಶ್ವ ಮಿದುಳು ಗಡ್ಡೆ ದಿನ ಎಂದು ಆಚರಿಸಲಾಗುತ್ತದೆ. ಮಿದುಳು ಟ್ಯೂಮರ್ ಬಗ್ಗೆ ಅರಿವನ್ನು ಹರಡುವುದು ಮತ್ತು ಈ ಕಾಯಿಲೆಯನ್ನು ಪರಿಣಾಮಕಾರಿ ರೀತಿಯಲ್ಲಿ ಎದುರಿಸಲು ರೋಗಿಗಳಿಗೆ ನೆರವಾಗುವುದು ಈ ದಿನಾಚರಣೆಯ ಉದ್ದೇಶವಾಗಿದೆ.

ಮಿದುಳು ಟ್ಯೂಮರ್ ಸೆಂಟ್ರಲ್ ನರ್ವಸ್ ಸಿಸ್ಟಂ (ಸಿಎನ್‌ಎಸ್) ಅಥವಾ ಕೇಂದ್ರ ನರಮಂಡಲದಲ್ಲಿ ಉಂಟಾಗುವ ಒಂದು ವಿಧದ ಗಡ್ಡೆಯಾಗಿದ್ದು,ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 5 ರಿಂದ 10 ಜನರಲ್ಲಿ ಮಿದುಳು  ಗಡ್ಡೆ ಕಾಣಿಸಿಕೊಳ್ಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಸಿಎನ್‌ಎಸ್ ಟ್ಯೂಮರ್‌ಗಳ ವರ್ಗೀಕರಣದಂತೆ ಸಿಎನ್‌ಎಸ್ ಟ್ಯೂಮರ್‌ಗಳ ಗ್ರೇಡ್ 3 ಮತ್ತು 4 ಅನ್ನು ಮಿದುಳಿನ ಕ್ಯಾನ್ಸರ್ ಎಂದು ಬಣ್ಣಿಸಲಾಗಿದೆ. ಮಿದುಳು  ಗಡ್ಡೆಗಳನ್ನು ಒಟ್ಟು ನಾಲ್ಕು ಗ್ರೇಡ್‌ಗಳಲ್ಲಿ ವರ್ಗೀಕರಿಸಲಾಗಿದೆ.

ಗ್ರೇಡ್ 1: ಈ ವಿಧದಲ್ಲಿ  ಗಡ್ಡೆ ನಿಧಾನವಾಗಿ ಬೆಳೆಯುತ್ತದೆ ಮತ್ತು ಸಾಮಾನ್ಯವಾಗಿ ಮಾರಣಾಂತಿಕ ಸ್ವರೂಪ ಹೊಂದಿರುವುದಿಲ್ಲ. ಅಲ್ಲದೆ ಈ ವಿಧದ ಗಡ್ಡೆ  ಹೊಂದಿರುವ ರೋಗಿಗಳು ಸುದೀರ್ಘ ಕಾಲ ಬದುಕುವ ಸಾಧ್ಯತೆಗಳಿರುತ್ತವೆ.

ಗ್ರೇಡ್ 2: ಇಲ್ಲಿ ಕ್ಯಾನ್ಸರ್ ಕೋಶಗಳು ನಿಧಾನವಾಗಿ ಬೆಳವಣಿಗೆ ಹೊಂದುತ್ತವೆ,ಆದರೆ ಹೆಚ್ಚಿನ ಗ್ರೇಡ್‌ನ ಟ್ಯೂಮರ್‌ಗಳಾಗಿ ಪುನರಾವರ್ತನೆಗೊಳ್ಳುತ್ತವೆ. ಇವು ಮಾರಣಾಂತಿಕ ಆಗಿರಬಹುದು ಅಥವಾ ಮಾರಣಾಂತಿಕ ಅಲ್ಲದಿರಬಹುದು.

ಗ್ರೇಡ್ 3: ಈ ವಿಧದಲ್ಲಿ  ಗಡ್ಡೆ ಆಕ್ರಮಣಕಾರಿಯಾಗಿ ಬೆಳೆಯುತ್ತದೆ ಮತ್ತು ಕಾಲಕ್ರಮೇಣ ಹೆಚ್ಚಿನ ಗ್ರೇಡ್‌ನ ಟ್ಯೂಮರ್ ಆಗಿ ಮರುಕಳಿಸುತ್ತದೆ.

ಗ್ರೇಡ್ 4: ಇಲ್ಲಿ ಕ್ಯಾನ್ಸರ್ ಕೋಶಗಳು ತ್ವರಿತವಾಗಿ ವಿಭಜನೆಗೊಳ್ಳುತ್ತವೆ ಮತ್ತು ಚುರುಕಾಗಿ ಹರಡುತ್ತವೆ. ಇದು ಸ್ವರೂಪದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿದ್ದು,ಸಮೀಪದ ಭಾಗಗಳಿಗೆ ಅಥವಾ ಇತರ ಅಂಗಾಂಗಗಳಿಗೆ ಹರಡುವ ಹೆಚ್ಚಿನ ಅಪಾಯವನ್ನೊಡ್ಡುತ್ತದೆ.

ಮಿದುಳು  ಗಡ್ಡೆಗೆ ನಿಖರ ಕಾರಣವಿನ್ನೂ ಗೊತ್ತಾಗಿಲ್ಲವಾದರೂ,ಕ್ಯಾನ್ಸರ್‌ನ ಅಪಾಯಕ್ಕೆ ತಳ್ಳುವ ಹಲವಾರು ಅಂಶಗಳಿವೆ. ಇವುಗಳೆಂದರೆ,

# ವಯಸ್ಸು (ವಯಸ್ಸು ಹೆಚ್ಚಿದಂತೆ ಅಪಾಯವೂ ಹೆಚ್ಚುತ್ತದೆ)

# ವೈದ್ಯಕೀಯ ಇತಿಹಾಸ (ರೋಗಿಗೆ ಹಿಂದೆ ಮಿದುಳಿನ ಕ್ಯಾನ್ಸರ್ ಅಥವಾ ಇನ್ಯಾವುದೇ ಮಾರಣಾಂತಿಕ ಕ್ಯಾನ್ಸರ್ ಇದ್ದಿದ್ದರೆ)

# ಕುಟುಂಬದ ಇತಿಹಾಸ (ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ/ಇದ್ದಿತ್ತಾದರೆ)

# ವಂಶವಾಹಿ ಪರಿವರ್ತನೆ (ಜನ್ಮದತ್ತವಾಗಿ ಅಥವಾ ಜೀವಿತಾವಧಿಯಲ್ಲಿ ಉಂಟಾಗುವ)

# ವಿಕಿರಣಗಳು ( ಕ್ಷ-ಕಿರಣಗಳು,ವಿಕಿರಣ ಚಿಕಿತ್ಸೆ ಅಥವಾ ಸಿಟಿಸ್ಕಾನ್‌ನಿಂದಾಗಿ)

ಎಲ್ಲ ಮಿದುಳು ಟ್ಯೂಮರ್‌ಗಳೂ ಸ್ವರೂಪದಲ್ಲಿ ಕ್ಯಾನ್ಸರ್‌ಗಳಲ್ಲ. ಅಂದರೆ ಕೆಲವು ಸೌಮ್ಯ ಅಥವಾ ಹಾನಿಕಾರಕವಲ್ಲದ ಕ್ಯಾನ್ಸರ್ ಕೋಶಗಳ ರಾಶಿಯಾಗಿದ್ದು,ಮುಖ್ಯವಾಗಿ ಮಿದುಳಿನ ರಚನಾತ್ಮಕ ಅಂಗಾಂಶಗಳನ್ನು ಗುರಿಯಾಗಿಸಿಕೊಳ್ಳುತ್ತವೆ. ಕೆಲವು ಸ್ವರೂಪದಲ್ಲಿ ಮಾರಣಾಂತಿಕ ಅಥವಾ ಕ್ಯಾನ್ಸರ್ ಆಗಿದ್ದು,ಕ್ಯಾನ್ಸರ್ ಕೋಶಗಳು ಶರೀರದ ಇತರ ಅಂಗಾಂಗಗಳಿಗೂ ಹರಡಬಲ್ಲವು.

ಮಿದುಳು ಕ್ಯಾನ್ಸರ್‌ಗಳನ್ನು ಮುಖ್ಯವಾಗಿ ಎರಡು ವಿಧಗಳಲ್ಲಿ ವರ್ಗೀಕರಿಸಲಾಗಿದೆ.

ಪ್ರೈಮರಿ ಟ್ಯೂಮರ್‌ಗಳು: ಇವು ಮಿದುಳಿನ ಅಂಗಾಂಶಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಮೂಲತಃ ಈ ವಿಧದ ಕ್ಯಾನ್ಸರ್‌ಗಳು ಮಿದುಳಿನಲ್ಲಿ ಆರಂಭಗೊಳ್ಳುತ್ತವೆ ಮತ್ತು ಅಲ್ಲಿಯೇ ಬೆಳೆಯುತ್ತವೆ.

ಸೆಕೆಂಡರಿ ಟ್ಯೂಮರ್‌ಗಳು: ಈ ವಿಧದ ಕ್ಯಾನ್ಸರ್‌ಗಳು ಯಕೃತ್ತು,ಶ್ವಾಸಕೋಶ,ಸ್ತನ,ಮೂತ್ರಪಿಂಡ ಅಥವಾ ಜಠರದಂತಹ ಅಂಗಗಳನ್ನು ಗುರಿಯಾಗಿಸಿಕೊಳ್ಳುತ್ತವೆ ಮತ್ತು ಮಿದುಳಿಗೆ ಹರಡುತ್ತವೆ. ಇದೇ ಕಾರಣದಿಂದ ಸೆಕೆಂಡರಿ ಟ್ಯೂಮರ್‌ಗಳನ್ನು ಸ್ಥಾನಾಂತರಣ ಟ್ಯೂಮರ್‌ಗಳು ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಪ್ರೈಮರಿ ಟ್ಯೂಮರ್‌ಗಳಿಗೆ ಹೋಲಿಸಿದರೆ ಸೆಕೆಂಡರಿ ಟ್ಯೂಮರ್‌ಗಳು ಹೆಚ್ಚು ಸಾಮಾನ್ಯವಾಗಿವೆ.

ಮಿದುಳು ಟ್ಯೂಮರ್‌ಗೆ ಇಂತಹುದೇ ಎನ್ನುವ ಲಕ್ಷಣಗಳಿಲ್ಲ ಮತ್ತು ಇದೇ ಕಾರಣದಿಂದ ತುಂಬ ಸಮಯದವರೆಗೂ ಕ್ಯಾನ್ಸರ್ ಪತ್ತೆಯಾಗುವುದಿಲ್ಲ. ಆದರೆ ಮಿದುಳು ಟ್ಯೂಮರ್‌ನ್ನು ಸೂಚಿಸಬಹುದಾದ ಮತ್ತು ತುರ್ತು ವೈದ್ಯಕೀಯ ನೆರವನ್ನು ಅಗತ್ಯವಾಗಿಸಬಹುದಾದ ಕೆಲವು ಲಕ್ಷಣಗಳಂತೂ ಇವೆ.

ಮಿದುಳು ಗಡ್ಡೆ ಕಂಡುಬರಲು ಸಾಮಾನ್ಯ ಲಕ್ಷಣಗಳು

# ಆಗಾಗ್ಗೆ ಕಾಣಿಸಿಕೊಳ್ಳುವ,ಬೆಳಗಿನ ಸಮಯದಲ್ಲಿ ತೀವ್ರವಾಗಿರುವ ಅಥವಾ ಸಮಯ ಕಳೆದಂತೆ ಹೆಚ್ಚು ತೀವ್ರಗೊಳ್ಳುವ ತಲೆನೋವು

# ವಿಶೇಷವಾಗಿ ಬೆಳಗಿನ ಸಮಯದಲ್ಲಿ ವಾಕರಿಕೆ/ವಾಂತಿ

# ಧ್ವನಿಯನ್ನು ಕೇಳುವುದರಲ್ಲಿ ತೊಂದರೆ ಅಥವಾ ಶ್ರವಣ ಶಕ್ತಿ ನಷ್ಟ

# ದೃಷ್ಟಿಯಲ್ಲಿ ಬದಲಾವಣೆಗಳು(ಎರಡೆರಡು ನೋಟ,ಮಸುಕಾದ ನೋಟ ಅಥವಾ ದೃಷ್ಟಿ ನಷ್ಟ)

# ಮಾತನಾಡಲು ತೊಂದರೆ ಅಥವಾ ಅಸ್ಪಷ್ಟ ಮಾತುಗಳು

# ತೋಳುಗಳು ಮತ್ತು ಕಾಲುಗಳಲ್ಲಿ ನಿಶ್ಶಕ್ತಿ

# ಭಂಗಿಯಲ್ಲಿ ಅಸಮತೋಲನ, ಗೊಂದಲ, ಸೆಳವುಗಳು

ಈ ಪೈಕಿ ಯಾವುದೇ ಲಕ್ಷಣಗಳು ಕಂಡು ಬಂದರೆ ಅವುಗಳನ್ನು ಕಡೆಗಣಿಸದೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಇವುಗಳನ್ನು ಕಡೆಗಣಿಸಿದರೆ ಅಥವಾ ಆರಂಭಿಕ ಹಂತಗಳಲ್ಲಿ ಕ್ಯಾನ್ಸರ್ ರೋಗನಿರ್ಣಯವಾಗದಿದ್ದರೆ ಮುಂದೆ ಅದಕ್ಕೆ ಚಿಕಿತ್ಸೆ ಕಷ್ಟವಾಗುತ್ತದೆ ಮತ್ತು ಸ್ಥಿತಿಯು ಇನ್ನಷ್ಟು ಹದಗೆಡುತ್ತದೆ. ಸೂಕ್ತ ರೋಗನಿರ್ಧಾರಕ್ಕಾಗಿ ನ್ಯೂರೊಲಾಜಿಸ್ಟ್ ಅಥವಾ ನ್ಯೂರೊಸರ್ಜನ್‌ರನ್ನು ಭೇಟಿಯಾಗಬಹುದು ಮತ್ತು ಲಭ್ಯ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳಬಹುದು.