ಸರಕು ಸೇವಾ ತೆರಿಗೆ(ಜಿಎಸ್ಟಿ) ವ್ಯವಸ್ಥೆ ಜಾರಿಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಜು.1ರಂದು ಜಿಎಸ್ಟಿ ದಿನ ಎಂದು ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನವದೆಹಲಿ: ಸರಕು ಸೇವಾ ತೆರಿಗೆ(ಜಿಎಸ್ಟಿ) ವ್ಯವಸ್ಥೆ ಜಾರಿಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಜು.1ರಂದು ಜಿಎಸ್ಟಿ ದಿನ ಎಂದು ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ರ ಅಧ್ಯಕ್ಷತೆಯಲ್ಲಿ ದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ರಾಜ್ಯಗಳ ಜಿಎಸ್ಟಿ ಪ್ರತಿನಿಧಿಗಳು, ಆರ್ಥಿಕ ತಜ್ಞರು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.
ವಿಶೇಷವೆಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಜೂನ್ 30ರ ಮಧ್ಯರಾತ್ರಿ 12 ಗಂಟೆಗೆ ಜಿಎಸ್ಟಿ ಅನುಷ್ಠಾನವನ್ನು ಇದೇ ಸೆಂಟ್ರಲ್ ಹಾಲ್ನಲ್ಲಿ ಘೋಷಿಸಲಾಗಿತ್ತು. ಅಂದು ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೂಡ ಈ ಗಣ್ಯರ ಜತೆ ವೇದಿಕೆ ಹಂಚಿಕೊಂಡಿದ್ದರು.
200 ಕಂಪನಿಗಳಿಗೆ ನೋಟಿಸ್
ಜಿಎಸ್ಟಿ ವ್ಯವಸ್ಥೆಯ ಕಣ್ತಪ್ಪಿಸಿ ವ್ಯವಹಾರ ಮಾಡುತ್ತಿರುವ ಸುಮಾರು 200 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿದ್ದರೂ ತೆರಿಗೆ ವ್ಯಾಪ್ತಿಗೆ ಬರದಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಆದರೆ ತೆರಿಗೆ ಸೋರಿಕೆ ಹಾಗೂ ಕಳ್ಳತನ ತಡೆಯುವ ವ್ಯವಸ್ಥೆಯಿನ್ನೂ ಪರಿಪೂರ್ಣಗೊಂಡಿಲ್ಲ. ರಿಟರ್ನ್ಸ್ ಜಿಎಸ್ಟಿಆರ್-1, 2 ಹಾಗೂ 3 ಅರ್ಜಿಯ ವ್ಯವಸ್ಥೆ ಪರಿಪೂರ್ಣಗೊಂಡ ಬಳಿಕ ನೇರವಾಗಿ ಅಧಿಕಾರಿಗಳು ತೆರಿಗೆ ಕಳ್ಳರನ್ನು ಹಿಡಿಯಬಹುದಾಗಿದೆ. ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನ ವರ್ಷಾಂತ್ಯದೊಳಗೆ ಅಭಿವೃದ್ಧಿಯಾಗಲಿದೆ. ಅಷ್ಟರೊಳಗೆ ರಿಟರ್ನ್ಸ್ ಕುರಿತ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ.
ಮರು ತೆರಿಗೆ ವ್ಯವಸ್ಥೆ ಮುಂದೂಡಿಕೆ
ನೋಂದಣಿಯಾಗದ ಡೀಲರ್ಗಳಿಗೆ ವಿಧಿಸುವ ಮರು ತೆರಿಗೆ ವ್ಯವಸ್ಥೆ ಅನುಷ್ಠಾನದಲ್ಲಿ ಮತ್ತೆ ವಿಳಂಬವಾಗಿದೆ. ತೆರಿಗೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರವು ಜು.1ರಿಂದ ಮರು ತೆರಿಗೆ ವ್ಯವಸ್ಥೆ ಜಾರಿ ಮಾಡುವುದಾಗಿ ಘೋಷಿಸಿತ್ತು. ಆದರೆ ಉದ್ಯಮ ವಲಯದ ಮನವಿ ಹಿನ್ನೆಲೆಯಲ್ಲಿ ಸದ್ಯಕ್ಕೆ ಸೆಪ್ಟೆಂಬರ್ ಅಂತ್ಯದವರೆಗೆ ಮುಂದೂಡಲಾಗಿದೆ. ನೋಂದಣಿ ಮಾಡದ ಡೀಲರ್ಗಳಿಂದ ತೆರಿಗೆ ಸಂಗ್ರಹವು ಉದ್ಯಮ ವಲಯದ ಮೇಲೆ ಹೊರೆಯಾಗಲಿದೆ. ಹೀಗಾಗಿ ಜಿಎಸ್ಟಿಎನ್ ತಂತ್ರಾಂಶದಲ್ಲಿನ ಗೊಂದಲ ನಿವಾರಣೆ ಆಗುವವರೆಗೂ ಇದಕ್ಕೆ ತಡೆಯೊಡ್ಡಲಾಗಿದೆ.
ಜಿಎಸ್ಟಿಎನ್ ಪರಿಶೀಲನೆ
ಇನ್ಪೋಸಿಸ್ ಅಭಿವೃದ್ಧಿಪಡಿಸಿರುವ ಜಿಎಸ್ಟಿಎನ್ ತಂತ್ರಾಂಶವನ್ನು ಮೂರನೇ ಸಂಸ್ಥೆಯಿಂದ ಪರಿಶೋಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಾಯ್ದೆಯಲ್ಲಿನ ಷರತ್ತು ಹಾಗೂ ಜಿಎಸ್ಟಿ ಮಂಡಳಿ ನೀಡಿದ್ದ ಅಂಶಗಳನ್ನು ಇನ್ಪೋಸಿಸ್ ಹೇಗೆ ಅನುಷ್ಠಾನ ಮಾಡಿದೆ, ತೆರಿಗೆದಾರರ ಗೊಂದಲ ನಿವಾರಣೆಗೆ ಸಹಾಯವಾಗಿದೆಯೇ ಎನ್ನುವುದನ್ನು ಈ ಪರಿಶೋಧನೆಯಲ್ಲಿ ತಿಳಿಯಲಾಗುತ್ತದೆ ಎಂದು ಜಿಎಸ್ಟಿ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.