ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ‘ಹಬ್ಬ’

0
599

ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಗೆ ಅಕ್ಟೋಬರ್ 7 ರ ಭಾನುವಾರ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಟ್ನಾ ಪೈರೇಟ್ಸ್‌ ಮತ್ತು ಆತಿಥೇಯ ತಮಿಳ್‌ ತಲೈವಾಸ್‌ ಪೈಪೋಟಿ ನಡೆಸಲಿವೆ.

ಚೆನ್ನೈ (ಪಿಟಿಐ): ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಗೆ ಅಕ್ಟೋಬರ್ 7 ರ ಭಾನುವಾರ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಟ್ನಾ ಪೈರೇಟ್ಸ್‌ ಮತ್ತು ಆತಿಥೇಯ ತಮಿಳ್‌ ತಲೈವಾಸ್‌  ಪೈಪೋಟಿ ನಡೆಸಲಿವೆ.

ಪ್ರದೀಪ್‌ ನರ್ವಾಲ್‌ ಸಾರಥ್ಯದ ಪಟ್ನಾ ಪೈರೇಟ್ಸ್‌ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಈ ತಂಡ ಹಿಂದಿನ ಮೂರು ಆವೃತ್ತಿಗಳಲ್ಲೂ ಚಾಂಪಿಯನ್‌ ಆಗಿತ್ತು.

ನಾಯಕ ಪ್ರದೀಪ್‌ ತಂಡದ ಬೆನ್ನೆಲುಬಾಗಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ಅತಿ ಹೆಚ್ಚು ಪಾಯಿಂಟ್ಸ್‌ ಗಳಿಸಿದ್ದ ಪ್ರದೀಪ್‌, ತಲೈವಾಸ್‌ ರಕ್ಷಣಾ ವಿಭಾಗಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ದೀಪಕ್‌ ನರ್ವಾಲ್‌, ಜವಾಹರ ದಾಗರ್‌ ಮತ್ತು ಸುರೇಂದರ್‌ ಸಿಂಗ್‌ ಅವರೂ ರೈಡಿಂಗ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಮನೀಷ್‌, ಜೈದೀಪ್‌ ಮತ್ತು ವಿಜಯ್‌ ಕುಮಾರ್‌ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ.

ಅಜಯ್‌ ಠಾಕೂರ್‌ ನೇತೃತ್ವದ ತಲೈವಾಸ್‌ ಕೂಡಾ  ಗೆಲುವಿನ ಮುನ್ನುಡಿ ಬರೆಯಲು ಕಾತರವಾಗಿದೆ.

ಅಜಯ್‌, ಮಂಜೀತ್‌ ಚಿಲ್ಲಾರ್‌, ಜಸ್ವೀರ್‌ ಸಿಂಗ್‌ ಅವರಂತಹ ಅನುಭವಿಗಳು ತಂಡದ ಬಲ ಹೆಚ್ಚಿಸಿದ್ದಾರೆ. ಕರ್ನಾಟಕದ ಸುಖೇಶ್‌ ಹೆಗ್ಡೆ ಮತ್ತು ಜೆ.ದರ್ಶನ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಐದನೇ ಆವೃತ್ತಿಯಲ್ಲಿ 22 ಪಂದ್ಯಗಳನ್ನು ಆಡಿದ್ದ ಅಜಯ್‌ ಒಟ್ಟು 213 ರೈಡಿಂಗ್‌ ಪಾಯಿಂಟ್ಸ್‌ ಗಳಿಸಿದ್ದರು.

ಹಿಂದಿನ ಆವೃತ್ತಿಯಲ್ಲಿ ಮಿಂಚಿದ್ದ ಅಮಿತ್‌ ಹೂಡಾ, ಸಿ.ಅರುಣ್‌ ಮತ್ತು ಆಲ್‌ರೌಂಡರ್‌ ಡಿ.
ಪ್ರತಾಪ್‌ ಅವರೂ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ಪಟ್ನಾ ಮತ್ತು ತಲೈವಾಸ್‌ ಇದುವರೆಗೆ ಮೂರು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪಟ್ನಾ ತಂಡ ಎರಡು ಬಾರಿ ಗೆದ್ದಿದೆ. ಇದು ಪ್ರದೀಪ್‌ ಪಡೆಯ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಪುಣೇರಿ–‍ಮುಂಬಾ ಪೈಪೋಟಿ: ದಿನದ ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್‌ ಮತ್ತು ಯು ಮುಂಬಾ ತಂಡಗಳು ಸೆಣಸಲಿವೆ.

ಮಹಾರಾಷ್ಟ್ರದ ಎರಡು ಬಲಿಷ್ಠ ತಂಡಗಳ ನಡುವಣ ಈ ‘ಡರ್ಬಿ’ ಹೋರಾಟದಲ್ಲಿ ಗೆಲ್ಲುವ ‘ಕುದುರೆ’ ಯಾರು ಎಂಬ ಕುತೂಹಲ ಗರಿಗೆದರಿದೆ.

ಉಭಯ ತಂಡಗಳು ಇದುವರೆಗೂ 11 ಬಾರಿ ಎದುರಾಗಿವೆ. ಈ ಪೈಕಿ ಮುಂಬಾ ಏಳರಲ್ಲಿ ಗೆದ್ದಿದೆ.

ಗಿರೀಶ್‌ ಮಾರುತಿ ಎರ್ನಾಕ್‌ ನೇತೃತ್ವದ ಪುಣೇರಿ ತಂಡದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಸಂದೀಪ್‌ ನರ್ವಾಲ್‌, ರಾಜೇಶ್‌ ಮಂಡಲ್‌, ಮೋನು, ರಿಂಕು ನರ್ವಾಲ್‌ ಮತ್ತು ನಿತಿನ್‌ ತೋಮರ್‌ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಫಜಲ್‌ ಅತ್ರಾಚಲಿ ಸಾರಥ್ಯದ ಮುಂಬಾ ತಂಡ ಕೂಡಾ ಬಲಿಷ್ಠವಾಗಿದೆ. ಅತ್ರಾಚಲಿ, ಧರ್ಮರಾಜ ಚೇರಲಾಥನ್‌, ರಾಜ್‌ಗುರು ಸುಬ್ರಮಣಿಯನ್‌, ಸುರಿಂದರ್‌ ಸಿಂಗ್‌ ಮತ್ತು ರೋಹಿತ್‌ ರಾಣಾ ಅವರು ರಕ್ಷಣಾ ವಿಭಾಗದ ಶಕ್ತಿಯಾಗಿದ್ದಾರೆ. ಅಬೋಲ್‌ಫಾಜಿ, ದರ್ಶನ್‌ ಕಡಿಯಾನ್‌  ಮತ್ತು ರೋಹಿತ್‌ ಬಲಿಯಾನ್‌ ಚುರುಕಿನ ರೈಡಿಂಗ್‌ ಮೂಲಕ ಪಾಯಿಂಟ್ಸ್‌ ಕಲೆಹಾಕಬಲ್ಲರು.