ಇಂದಿನಿಂದ ಕಾಮನ್ವೆಲ್ತ್ ಕ್ರೀಡಾಹಬ್ಬ

0
55

ಜಗತ್ತಿನ ಶ್ರೇಷ್ಠ ನೈಸರ್ಗಿಕ ವಿಸ್ಮಯಗಳಲ್ಲಿ ಒಂದಾದ ಗ್ರೇಟ್ ಬ್ಯಾರಿಯರ್ ರೀಫ್ ಇರುವ ಆಸ್ಟ್ರೇಲಿಯಾದ ರಾಜ್ಯ ಕ್ವೀನ್ಸ್​ಲ್ಯಾಂಡ್. ಕಾಮನ್ವೆಲ್ತ್ ಆಫ್ ಆಸ್ಟ್ರೇಲಿಯಾದ 2ನೇ ಅತಿದೊಡ್ಡ ರಾಜ್ಯವಾಗಿರುವ ಕ್ವೀನ್ಸ್​ಲ್ಯಾಂಡ್​ನ 2ನೇ ಅತಿದೊಡ್ಡ ನಗರ ಗೋಲ್ಡ್​ಕೋಸ್ಟ್. ರಾಜಧಾನಿ ಬ್ರಿಸ್ಬೇನ್​ನಿಂದ 66 ಕಿಲೋಮೀಟರ್ ದೂರದಲ್ಲಿರುವ ಗೋಲ್ಡ್​ಕೋಸ್ಟ್ ಪ್ರವಾಸಿಗರ ಸ್ವರ್ಗ.

ಸರ್ಫಿಂಗ್ ಹೊರತಾಗಿ ಗೋಲ್ಡ್​ಕೋಸ್ಟ್​ಅನ್ನು ನೆನೆಸಿಕೊಳ್ಳಲು ಸಾಧ್ಯವಿಲ್ಲ. ಸನ್, ಸ್ಯಾಂಡ್, ಸರ್ಫ್ ಹಾಗೂ ಸೆಕ್ಸ್ ಗೋಲ್ಡ್​ಕೋಸ್ಟ್​ನ ಆತ್ಮ. 2010ರ ನವೆಂಬರ್​ನಲ್ಲಿ ಶ್ರೀಲಂಕಾದ ಹಂಬಂತೋಟವನ್ನು ಮಣಿಸಿ 2018ರ ಗೇಮ್ಸ್​  ಆತಿಥ್ಯ ಪಡೆದಿದ್ದ ಗೋಲ್ಡ್​ಕೋಸ್ಟ್ ನಗರದಲ್ಲಿ ಇನ್ನು 12 ದಿನಗಳ ಕಾಲ ಕ್ರೀಡಾಜಾತ್ರೆ.

ಆಸೀಸ್ ಸಂಸ್ಕೃತಿ ಅನಾವರಣ

ಕಾಮನ್ವೆಲ್ತ್ ಗೇಮ್್ಸ ಫೆಡರೇಷನ್, ಗೋಲ್ಡ್​ಕೋಸ್ಟ್ನಲ್ಲಿ ‘ಅತ್ಯುತ್ತಮ ಗೇಮ್್ಸ’ ನಡೆಯಲಿರುವ ಭರವಸೆಯನ್ನು ವ್ಯಕ್ತಪಡಿಸಿದೆ. ಒಟ್ಟಾರೆ ಕ್ವೀನ್ಸ್​ಲ್ಯಾಂಡ್ ಹಾಗೂ ಆಸ್ಟ್ರೇಲಿಯಾದ ಸಂಸ್ಕೃತಿ ಆರಂಭೋತ್ಸವದಲ್ಲಿ ಅನಾವರಣವಾಗಲಿದೆ.

ಬೀಚ್​ನಂತಾಗಲಿದೆ ಸ್ಟೇಡಿಯಂ: ಸಮಾರಂಭದ ವೇಳೆ ಕ್ಯಾರಾರಾ ಸ್ಟೇಡಿಯಂ ಇನ್​ಲ್ಯಾಂಡ್ ಬೀಚ್​ನಂತೆ ಮೈದಳೆಯಲಿದೆ. ನಾಲ್ಕು ನೂರಕ್ಕೂ ಅಧಿಕ ಸರ್ಫ್ ಜೀವರಕ್ಷಕರು (ಲೈಫ್​ಸೇವರ್ಸ್) ಇಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಈಗಾಗಲೇ ಟನ್​ಗಟ್ಟಲೆ ಮರಳನ್ನು ಸ್ಟೇಡಿಯಂ ಒಳಗೆ ಹಾಕಲಾಗಿದೆ. ಗಾಯಕಿಯರಾದ ಡೆಲ್ಟಾ ಗುಡ್​ರೆಮ್ ಹಾಗೂ ಡಾಮಿ ಇಮ್ ಸಮಾರಂಭಕ್ಕೆ ಸ್ಟಾರ್ ಕಳೆ ನೀಡಲಿದ್ದಾರೆ. ಸಾವಿರಕ್ಕೂ ಅಧಿಕ ಕಲಾವಿದರು ಲೈಟ್ ಎಫೆಕ್ಟ್​ನಲ್ಲಿ ಮರಳ ಮೇಲೆ ನರ್ತಿಸಲಿದ್ದಾರೆ. ಇದರೊಂದಿಗೆ ಸ್ಪರ್ಧಿಸಲಿರುವ 71 ದೇಶಗಳ ಧ್ವಜಗಳೂ ಬಿತ್ತರವಾಗಲಿವೆ. ಲೈಫ್ ಸೇವರ್​ಗಳು ಅಥ್ಲೀಟ್​ಗಳು ಹಾಗೂ ಟೀಮ್ ಅಧಿಕಾರಿಗಳನ್ನು ಸಮಾರಂಭಕ್ಕೆ ಕರೆತರಲಿದ್ದು, ಇಡೀ ಕಾರ್ಯಕ್ರಮವನ್ನು ಕುಳಿತು ವೀಕ್ಷಿಸಲು ಅವರಿಗೆ ಚೇರ್​ಗಳ ವ್ಯವಸ್ಥೆಯನ್ನು ಇವರು ಮಾಡಲಿದ್ದಾರೆ. ಇನ್ನು ಗೋಲ್ಡ್ ಕೋಸ್ಟ್​ನ ಪ್ರಸಿದ್ಧ ಲೈಫ್​ಗಾರ್ಡ್ ಟವರ್​ಅನ್ನು ಸ್ಟೇಡಿಯಂ ಒಳಗೆ ನಿರ್ವಿುಸಲಾಗಿದೆ. ಅಂದಾಜು 4 ಸಾವಿರಕ್ಕೂ ಅಧಿಕ ಕಲಾವಿದರು ಸಮಾರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.

ಗೇಮ್ಸ್​ನಸ್ವಯಂ ಸೇವಕರು ಹಾಗೂ ನಗರದ 500ಕ್ಕೂ ಅಧಿಕ ಶಾಲಾ ಮಕ್ಕಳು ಕಳೆದ ಕೆಲ ದಿನಗಳಿಂದ ಪೂರ್ವಾಭ್ಯಾಸದಲ್ಲಿ ನಿರತರಾಗಿದ್ದಾರೆ. ಕಲಾವಿದರ ಕಾರ್ಯಕ್ರಮಕ್ಕಾಗಿ 3300 ಚದರಅಡಿ ಸ್ಥಳವನ್ನು ಮೀಸಲಿಡಲಾಗಿದ್ದರೆ, ಭಾಗವಹಿಸುವ ರಾಷ್ಟ್ರಗಳ ನಿಯೋಗದ ಪಥಸಂಚಲನಕ್ಕಾಗಿ 3200 ಚದರಅಡಿ ಜಾಗವನ್ನು ಬಿಡಲಾಗಿದೆ. ಅದರೊಂದಿಗೆ ಸ್ಟೇಡಿಯಂನಲ್ಲಿರುವ ಟ್ರಾ್ಯಕ್ ಹಾಗೂ ಫೀಲ್ಡ್​ಗೆ ಯಾವುದೇ ಹಾನಿಯಾಗಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಮಳೆ ಭೀತಿ

ಉತ್ತರ ಕ್ವೀನ್ಸ್​ಲ್ಯಾಂಡ್​ನಲ್ಲಿ ಸೈಕ್ಲೋನ್ ಐರಿಸ್ ಭೀತಿ ಹೆಚ್ಚಾಗಿದೆ. ಗೋಲ್ಡ್​ಕೋಸ್ಟ್ ನಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ.

ಸಿದ್ಧವಾದ ಸ್ಟೇಡಿಯಂ

ಆಸ್ಟ್ರೇಲಿಯನ್ ಫುಟ್​ಬಾಲ್ ಲೀಗ್​ನ ತಂಡ ಗೋಲ್ಡ್​ಕೋಸ್ಟ್ ಸನ್ಸ್​ನ ತವರು ಮೈದಾನ ಕ್ಯಾರಾರಾ ಸ್ಟೇಡಿಯಂನಲ್ಲಿ ಗೇಮ್ಸ್​ನ ಆರಂಭೋತ್ಸವ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. 25 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂಅನ್ನು ಕಾಮನ್ವೆಲ್ತ್ ಗೇಮ್ಸ್​ನ ಎರಡು ಬಹುದೊಡ್ಡ ಕಾರ್ಯಕ್ರಮಗಳಿಗಾಗಿ ವಿಸ್ತರಣೆ ಮಾಡಲಾಗಿದೆ. ತಾತ್ಕಾಲಿಕ ಆಸನ ವ್ಯವಸ್ಥೆಗಳಿಂದ ಸ್ಟೇಡಿಯಂನ ಸಾಮರ್ಥ್ಯವನ್ನು 35 ಸಾವಿರಕ್ಕೆ ಏರಿಸಲಾಗಿದೆ.

ಭಾಗವಹಿಸಲಿದೆ ಗಣ್ಯರ ದಂಡು

ಆರಂಭೋತ್ಸವ ಸಮಾರಂಭದಲ್ಲಿ ಪ್ರಿನ್ಸ್ ಚಾರ್ಲ್ಸ್ ಹಾಗೂ ಅವರ ಪತ್ನಿ ಕ್ಯಾಮಿಲಾ. ಅವರೊಂದಿಗೆ ಕಾಮನ್ವೆಲ್ತ್ ಗೇಮ್್ಸ ಫೆಡರೇಷನ್​ನ ಉಪ ಮಹಾಪೋಷಕರಾದ ಪ್ರಿನ್ಸ್ ಎಡ್ವರ್ಡ್ ಇರಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಂ ಟರ್ನ್​ಬುಲ್ ಗೇಮ್ಸ್​ಗೆ ಚಾಲನೆ ನೀಡಲಿದ್ದಾರೆ. ನಟಿ ಮಾಗೋಟ್ ರಾಬಿ, ನಟ ಕ್ರಿಸ್ ಹೆಮ್್ಸ ವರ್ತ್, ಮಹಿಳೆಯರ ಒಳಉಡುಪುಗಳ ಜಗತ್ಪ್ರಸಿದ್ಧ ಬ್ರಾ್ಯಂಡ್ ವಿಕ್ಟೋರಿಯಾ ಸೀಕ್ರೆಟ್​ಗೆ ರೂಪದರ್ಶಿಯಾದ ಆಸ್ಟ್ರೇಲಿಯಾದ ಮೊದಲ ಮಾಡೆಲ್ ಎನ್ನುವ ಹೆಮ್ಮೆಯ ಮಿರಾಂಡ ಕೆರ್, ವೈಟ್ ಲೈಟ್ನಿಂಗ್ ಖ್ಯಾತಿಯ ಆಸೀಸ್​ನ ಖ್ಯಾತ ಸರ್ಫರ್ ಮಿಕ್ ಫ್ಯಾನಿಂಗ್ ಹಾಗೂ ವೃತ್ತಿಪರ ಗಾಲ್ಪರ್ ಗ್ರೇಗ್ ನಾರ್ಮನ್​ಗೆ ಕ್ವೀನ್ಸ್​ಲ್ಯಾಂಡ್ ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ.

ಕ್ಯಾಟಿ ನೂನನ್ ಸಂಗೀತ ನಿರ್ದೇಶಕಿ

ಕಳೆದ ವರ್ಷ ಸಾಂಗ್ಸ್ ಆಫ್ ದ ಲ್ಯಾಟಿನ್ ಸ್ಕೈಸ್ ಆಲ್ಬಂಗಾಗಿ ಆಸ್ಟ್ರೇಲಿಯನ್ ರೆಕಾರ್ಡಿಂಗ್ ಇಂಡಸ್ಟ್ರೀ ಅಸೋಸಿಯೇಷನ್ (ಎಆರ್​ಐಎ) ಪ್ರಶಸ್ತಿ ಜಯಿಸಿರುವ ಕ್ವೀನ್ಸ್​ಲ್ಯಾಂಡ್​ನ ಖ್ಯಾತ ಗಾಯಕಿ ಹಾಗೂ ಸಾಹಿತಿ ಕ್ಯಾಟಿ ನೂನನ್ ಗೇಮ್ಸ್​ನ ಆರಂಭೋತ್ಸವ ಹಾಗೂ ಸಮಾರೋಪ ಸಮಾರಂಭದ ಸಂಗೀತ ನಿರ್ದೇಶಕಿಯಾಗಿದ್ದಾರೆ. ಬ್ರಿಸ್ಬೇನ್​ನ ಖ್ಯಾತ ಮ್ಯೂಸಿಕ್ ಬ್ಯಾಂಡ್ ಜಾರ್ಜ್ ಹಾಗೂ ಎಲಿಕ್ಸರ್​ನ ಮಾಜಿ ಗಾಯಕಿ ಕೂಡ ಇವರಾಗಿದ್ದಾರೆ.

ಭಾರತಕ್ಕೆ ಸಿಂಧು ಧ್ವಜಧಾರಿ

ಆತಿಥೇಯ ಆಸ್ಟ್ರೇಲಿಯಾ ತಂಡದ ನಿಯೋಗವನ್ನು ಚಾಂಪಿಯನ್ ಹಾಕಿ ಆಟಗಾರ ಮಾರ್ಕ್ ನೋವೆಲ್ಸ್ ಮುನ್ನಡೆಸಲಿದ್ದಾರೆ. ಭಾರತದ ನಿಯೋಗವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮುನ್ನಡೆಸಲಿದ್ದಾರೆ. ಇಷ್ಟು ವರ್ಷಗಳ ಕಾಲ ಗೇಮ್ಸ್​ನಲ್ಲಿ ಸೀರೆ ಹಾಗೂ ಬ್ಲೇಜರ್ ಧರಿಸುತ್ತಿದ್ದ ಭಾರತದ ಮಹಿಳಾ ಅಥ್ಲೀಟ್​ಗಳು ಇದೇ ಮೊದಲ ಬಾರಿ ಸೂಟು-ಬೂಟು ಧರಿಸಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿಂಧು, ಶ್ರೀಕಾಂತ್ ಅಗ್ರ ಶ್ರೇಯಾಂಕ

ಗೋಲ್ಡ್​ಕೋಸ್ಟ್: ಭಾರತದ ಪಿವಿ ಸಿಂಧು ಹಾಗೂ ವಿಶ್ವ ನಂ.2 ಕಿಡಂಬಿ ಶ್ರೀಕಾಂತ್ ಕಾಮನ್ವೆಲ್ತ್ ಗೇಮ್್ಸ ಕ್ರೀಡಾಕೂಟದ ಬ್ಯಾಡ್ಮಿಂಟನ್​ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಮೊದಲ ಸುತ್ತಿನ ಬೈ ಪಡೆದಿರುವ ಸಿಂಧು ಫಾಲ್ಕ್​ಲ್ಯಾಂಡ್ ಐಸ್​ಲ್ಯಾಂಡ್ ಷಟ್ಲರ್ ಜೋಯ್ ಮೊರಿಸ್​ರನ್ನು ಎದುರಿಸಲಿದ್ದಾರೆ. ಜೋಯ್ಗೂ ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಸಿಕ್ಕಿತು. ಭಾರತ ಇನ್ನೋರ್ವ ಅನುಭವಿ ಸೈನಾ ನೆಹ್ವಾಲ್ 2ನೇ ಶ್ರೇಯಾಂಕದ ಮೂಲಕ ಕಣಕ್ಕಿಳಿಯಲಿದ್ದು, ದಕ್ಷಿಣ ಆಫ್ರಿಕಾದ ಎಲ್ಸಿ ಡಿ ವಿಲಿಯರ್ಸ್ ವಿರುದ್ಧ ಅಭಿಯಾನ ಆರಂಭಿಸುವರು.

ಸೈನಾ ತಂದೆಗೆ ಪ್ರವೇಶ ಅವಕಾಶ

ಗೋಲ್ಡ್​ಕೋಸ್ಟ್: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್​ರ ತಂದೆ ಹರ್ವೀರ್ ಸಿಂಗ್​ಗೆ ಭಾರತೀಯ ನಿಯೋಗದ ಅಧಿಕಾರಿ ಮನ್ನಣೆ ನೀಡುವ ಮೂಲಕ ಕ್ರೀಡಾಗ್ರಾಮ ಪ್ರವೇಶಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ ಅವಕಾಶ ನೀಡಿದೆ. ಇದಕ್ಕೂ ಮುನ್ನ ನಿಯೋಗದ ಅಧಿಕಾರಿಗಳ ಪಟ್ಟಿಯಿಂದ ಹರ್ವೀರ್ ಸಿಂಗ್​ರನ್ನು ಕೈಬಿಟ್ಟ ಕಾರಣಕ್ಕೆ ಅವರಿಗೆ ಕ್ರೀಡಾಗ್ರಾಮ ಪ್ರವೇಶ ನಿರಾಕರಿಸಲಾಗಿತ್ತು. ಈ ಕುರಿತಾಗಿ ಸೈನಾ ಟ್ವಿಟರ್​ನಲ್ಲಿ ಅಸಮಾಧಾನ ಹೊರಹಾಕಿದ್ದರು. ಮೂಲಗಳ ಪ್ರಕಾರ ಗೇಮ್್ಸ ನಿಂದ ಹೊರಗುಳಿಯುವ ಬೆದರಿಕೆಯನ್ನೂ ಸೈನಾ ಹಾಕಿದ್ದರಿಂದ ಅವರ ತಂದೆಗೆ ಪ್ರವೇಶ ನೀಡಲಾಗಿದೆ ಎಂದು ವರದಿಯಾಗಿದೆ.

ಒಂದು ಪಂದ್ಯ ಗೆದ್ದರೆ ಮೇರಿ ಕೋಮ್​ಗೆ ಪದಕ ಖಚಿತ!

ಗೋಲ್ಡ್​ಕೋಸ್ಟ್: ಹಾಲಿ ಏಷ್ಯನ್ ಚಾಂಪಿಯನ್ ಭಾರತದ ಮೇರಿ ಕೋಮ್ ಕೇವಲ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪದಾರ್ಪಣಾ ಕಾಮನ್ವೆಲ್ತ್ ಗೇಮ್ಸ್​ನಲ್ಲಿಯೇ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. ಕಾಮನ್ವೆಲ್ತ್ ಗೇಮ್ಸ್​ನ ಬಾಕ್ಸಿಂಗ್ ಡ್ರಾ ಮಂಗಳವಾರ ಪ್ರಕಟಗೊಂಡಿದ್ದು ಭಾರತದ ಪ್ರಮುಖ ಬಾಕ್ಸರ್​ಗಳು ಸುಲಭ ಡ್ರಾ ಪಡೆದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ವಿಕಾಸ ಕೃಷ್ಣನ್ ಪ್ರೀ ಕ್ವಾರ್ಟರ್​ಫೈನಲ್​ಗೆ ಬೈ ಪಡೆದುಕೊಂಡಿದ್ದಾರೆ. ಗೇಮ್ಸ್​ಗೂ ಮುನ್ನ ಸಿರಿಂಜ್ ವಿವಾದದಲ್ಲಿ ಸಿಲುಕಿಕೊಂಡಿದ್ದ ಬಾಕ್ಸಿಂಗ್ ಟೀಮ್ೆ ಸಿಜಿಎಫ್ ಸೋಮವಾರ ಕ್ಲೀನ್​ಚಿಟ್ ನೀಡಿತ್ತು. ಆದರೆ, ಬಾಕ್ಸಿಂಗ್ ಟೀಮ್ ವೈದ್ಯ ಅಮೋಲ್ ಪಾಟೀಲ್​ಗೆ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆಯನ್ನೂ ನೀಡಿದೆ. ಪ್ರಕರಣ ಮುಕ್ತಾಯ ಕಂಡಿದ್ದರಿಂದ ಬಾಕ್ಸಿಂಗ್ ಟೀಮ್ ಗಮನ ಮತ್ತೆ ಪದಕ ಗೆಲ್ಲುವತ್ತ ಮರಳಿದೆ. ಮಹಿಳೆಯರ 48 ಕೆಜಿ ವಿಭಾಗದ ಕ್ವಾರ್ಟರ್​ಫೈನಲ್​ನಲ್ಲಿ ಮೇರಿ ಕೋಮ್ ಸ್ಕಾಟ್ಲೆಂಡ್​ನ ಮೇಗನ್ ಗೋರ್ಡನ್​ನ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯ ಏಪ್ರಿಲ್ 8 ರಂದು ನಡೆಯಲಿದೆ. ತಮ್ಮ ಮೊದಲ ಹಾಗೂ ಕೊನೆಯ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಸ್ಪರ್ಧಿಸುತ್ತಿರುವ 35 ವರ್ಷದ ಮೇರಿ ಕೋಮ್ ಕೇವಲ 8 ಬಾಕ್ಸರ್​ಗಳಿರುವ ಕಣದಲ್ಲಿ ಚಿನ್ನ ಗೆಲ್ಲುವ ಫೇವರಿಟ್ ಆಗಿದ್ದಾರೆ.

ಅಗ್ರ 3ರೊಳಗೆ ಸ್ಥಾನ ಭಾರತದ ಗುರಿ

ಕಳೆದ ಬಾರಿ ಗ್ಲಾಸ್ಗೋದಲ್ಲಿ ನಿರೀಕ್ಷಿತ ಪದಕ ಗೆಲ್ಲಲು ಭಾರತ ವಿಫಲವಾಗಿತ್ತು. ಭಾರತ ಪ್ರಬಲವಾಗಿರುವ ಕೆಲ ಕ್ರೀಡಾಸ್ಪರ್ಧೆಗಳನ್ನೇ ಕೈಬಿಟ್ಟಿದ್ದು ಮತ್ತು ಭಾರತ ದುರ್ಬಲವಾಗಿರುವ ಕ್ರೀಡೆಗಳನ್ನು ಸೇರಿಸಿಕೊಂಡಿದ್ದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಈ ಬಾರಿಯೂ ಅಂಥದ್ದೇ ಸ್ಥಿತಿ ಇದ್ದು ಭಾರತ ತಾನು ಬಲಿಷ್ಠವಾಗಿರುವ ಕೆಲ ಕ್ರೀಡೆಗಳಲ್ಲಿ ಸಾಕಷ್ಟು ಹೆಚ್ಚಿನ ಪದಕ ಗೆಲ್ಲುವ ಮೂಲಕ ಈ ಬಾರಿ ಪದಕಪಟ್ಟಿಯಲ್ಲಿ ಅಗ್ರ 3ರೊಳಗೆ ಸ್ಥಾನ ಪಡೆಯುವ ಹಂಬಲದಲ್ಲಿದೆ.

ಒಲಿಂಪಿಕ್ಸ್ ದಿಕ್ಸೂಚಿಯಲ್ಲ…

ಕಾಮನ್ವೆಲ್ತ್ ಗೇಮ್್ಸ ಮುಂಬರುವ 2020ರ ಟೋಕಿಯೊ ಒಲಿಂಪಿಕ್ಸ್​ಗೆ ಭಾರತೀಯ ಕ್ರೀಡಾಪಟುಗಳಿಗೆ ಸತ್ವಪರೀಕ್ಷೆ ಆಗಲಾರದು. ಯಾಕೆಂದರೆ ಇಲ್ಲಿ ಕ್ರೀಡೆಯಲ್ಲಿ ಬಲಿಷ್ಠವಾಗಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್ ಹೊರತಾಗಿ ಅಥ್ಲೆಟಿಕ್ಸ್​ನಲ್ಲಿ ಬಲಿಷ್ಠವಾಗಿರುವ ಜಮೈಕಾ ಮತ್ತು ಆಫ್ರಿಕಾದ ಕೆಲ ದೇಶಗಳಷ್ಟೇ ಸವಾಲಾಗುತ್ತವೆ. ಹೀಗಾಗಿ ಇಲ್ಲಿ ಪದಕ ಗೆದ್ದವರು ಒಲಿಂಪಿಕ್ಸ್​ಗೆ ಸಜ್ಜಾಗಿದ್ದಾರೆ ಎನ್ನಲಾಗದು. ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಸ್ವರ್ಣ ಪದಕ ಗೆದ್ದವರು ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ವಿಫಲರಾದ ದೃಷ್ಟಾಂತಗಳೂ ಇವೆ. ಅಮೆರಿಕ, ಚೀನಾ, ಜಪಾನ್, ರಷ್ಯಾದಂಥ ಕ್ರೀಡಾರಾಷ್ಟ್ರಗಳು ಇಲ್ಲಿಲ್ಲ.

ಇವರೆಲ್ಲ ಸ್ಪರ್ಧಿಸಲ್ಲ…!

ಉಸೇನ್ ಬೋಲ್ಟ್ ಅಥ್ಲೆಟಿಕ್ಸ್​ಗೆ ನಿವೃತ್ತಿ ಪ್ರಕಟಿಸಿದ್ದರೆ, 2012ರ ಟೂರ್ ಡಿ ಫ್ರಾನ್ಸ್ ಚಾಂಪಿಯನ್ ಸೈಕ್ಲಿಂಗ್ ಸ್ಟಾರ್ ಸರ್ ಬ್ರಾ್ಯಡ್ಲಿ ವಿಗ್ಗಿನ್ಸ್, 800 ಮೀಟರ್ ವಿಶ್ವದಾಖಲೆ ವೀರ ಹಾಗೂ ಹಾಲಿ ಒಲಿಂಪಿಕ್ ಚಾಂಪಿಯನ್ ಕೀನ್ಯಾದ ಡೇವಿಡ್ ರುಡಿಶಾ, ಉಸೇನ್ ಬೋಲ್ಟ್​ನ ಉತ್ತರಾಧಿಕಾರಿ ಎನ್ನುವಂತೆ ಗಮನಸೆಳೆದಿರುವ ಕೆನಡದ ಆಂಡ್ರೆ ಡಿ ಗ್ರಾಸೆ, ದಕ್ಷಿಣ ಆಫ್ರಿಕಾದ 400ಮೀ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ವೀರ ವೈಡ್ ವಾನ್ ನೈಕರ್ಕ್ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಸ್ಪರ್ಧಿಸುತ್ತಿಲ್ಲ.

ಗೇಮ್ಸ್ ಇತಿಹಾಸ

ಪ್ರತಿ 4 ವರ್ಷಕ್ಕೊಮ್ಮೆ ಆಯೋಜನೆಯಾಗುವ ಕಾಮನ್ವೆಲ್ತ್ ಗೇಮ್್ಸ ಮೊದಲು ಆರಂಭವಾಗಿದ್ದು 1930ರಲ್ಲಿ. ಬ್ರಿಟಿಷ್ ವಸಾಹತುಗಳಾಗಿದ್ದ ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತವೆ. ಸದ್ಯ 52 ಸದಸ್ಯ ರಾಷ್ಟ್ರಗಳಿದ್ದು ಕೂಟದಲ್ಲಿ 71 ದೇಶಗಳು ಭಾಗವಹಿಸುತ್ತಿವೆ. ಕೆನಡದ ಹ್ಯಾಮಿಲ್ಟನ್​ನಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆದಿತ್ತು. ಇದಕ್ಕೂ ಮುನ್ನ 1911ರಲ್ಲಿ ಇಂಟರ್ ಎಂಪೈರ್ ಚಾಂಪಿಯನ್​ಷಿಪ್ ಎನ್ನುವ ಹೆಸರಲ್ಲಿ ಲಂಡನ್​ನಲ್ಲಿ ಕೂಟ ಆಯೋಜನೆಗೊಂಡಿತ್ತು (ಇದು ಕಾಮನ್ವೆಲ್ತ್ ಕ್ರೀಡಾಕೂಟವಾಗಿರಲಿಲ್ಲ). 1930 ರಿಂದ 1950ರವರೆಗೆ ಕೂಟವನ್ನು ಬ್ರಿಟಿಷ್ ಎಂಪೈರ್ ಗೇಮ್್ಸ, 1954ರಿಂದ 66ರವರೆಗೆ ಬ್ರಿಟಿಷ್ ಎಂಪೈರ್ ಮತ್ತು ಕಾಮನ್ವೆಲ್ತ್ ಗೇಮ್್ಸ, 1970ರಿಂದ 74ರವರೆಗೆ ಬ್ರಿಟಿಷ್ ಕಾಮನ್ವೆಲ್ತ್ ಗೇಮ್ಸ್ ಎಂದು ಕರೆಯಲಾಗುತ್ತಿತ್ತು. 1978ರಿಂದ ಕಾಮನ್ವೆಲ್ತ್ ಗೇಮ್ಸ್ ಎನ್ನುವ ಹೆಸರಿನಿಂದ ಕೂಟ ಗುರುತಿಸಿಕೊಂಡಿದೆ.

ಬಂಗಾರಕ್ಕೆ ಕಣ್ಣಿಟ್ಟ ಭಾರತೀಯರು…

·ಶೂಟಿಂಗ್: ಗಗನ್ ನಾರಂಗ್, ಜಿತು ರೈ, ಹೀನಾ ಸಿಧು, ಮನು ಭಾಕರ್, ಮೆಹುಲಿ ಘೋಷ್. ·ಕುಸ್ತಿ: ಸುಶೀಲ್ ಕುಮಾರ್, ಬಬಿತಾ ಕುಮಾರಿ, ಸಾಕ್ಷಿ ಮಲಿಕ್, ಭಜರಂಗ್, ವಿನೇಶ್ ಪೋಗಟ್. ·ಅಥ್ಲೆಟಿಕ್ಸ್: ನೀರಜ್ ಚೋಪ್ರಾ ·ಬ್ಯಾಡ್ಮಿಂಟನ್: ಮಿಶ್ರ ತಂಡ; ಕೆ. ಶ್ರೀಕಾಂತ್, ಪಿವಿ ಸಿಂಧು/ಸೈನಾ ನೆಹ್ವಾಲ್. ·ಬಾಕ್ಸಿಂಗ್: ಮೇರಿ ಕೋಮ್ ವಿಕಾಸ್ ಕೃಷ್ಣನ್, ಮನೀಷ್ ಕೌಶಿಕ್. ·ಹಾಕಿ: ಪುರುಷರ ತಂಡ. ·ವೇಟ್​ಲಿಫ್ಟಿಂಗ್: ಮೀರಾಭಾಯಿ ಚಾನು, ಸಂಜಿತಾ, ಸತೀಶ್ ಶಿವಲಿಂಗಂ, ವೆಂಕಟ್.