ಇಂದಿನಿಂದ(ಜುಲೈ 30) ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್

0
14

ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಒಲಿಂಪಿಕ್ಸ್​ಗೆ ಸರಿಸಮಾನವಾದ ರ‍್ಯಾಂಕಿಂಗ್ ಅಂಕಗಳನ್ನು ನೀಡುವ ಪ್ರತಿಷ್ಠಿತ ಟೂರ್ನಿಯಾದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನ 24ನೇ ಆವೃತ್ತಿ ಜುಲೈ 30 ರ ಸೋಮವಾರ ಆರಂಭವಾಗಲಿದೆ.

ನಾನ್​ಜಿಂಗ್ (ಚೀನಾ): ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಒಲಿಂಪಿಕ್ಸ್​ಗೆ ಸರಿಸಮಾನವಾದ ರ‍್ಯಾಂಕಿಂಗ್ ಅಂಕಗಳನ್ನು ನೀಡುವ ಪ್ರತಿಷ್ಠಿತ ಟೂರ್ನಿಯಾದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನ 24ನೇ ಆವೃತ್ತಿ ಸೋಮವಾರ ಆರಂಭವಾಗಲಿದೆ. ಏಳು ದಿನಗಳ ಕಾಲ ನಡೆಯಲಿರುವ ವಿಶ್ವ ಚಾಂಪಿಯನ್​ಷಿಪ್​ಗೆ ಈ ಬಾರಿ ಬ್ಯಾಡ್ಮಿಂಟನ್ ಶಕ್ತಿಕೇಂದ್ರ ಚೀನಾ ಆತಿಥ್ಯ ವಹಿಸಿಕೊಂಡಿದೆ.

ಭಾರತ ತಂಡ ಈವರೆಗೂ ಟೂರ್ನಿಯ ಯಾವ ವಿಭಾಗದಲ್ಲೂ ವಿಶ್ವ ಚಾಂಪಿಯನ್ ಆಗಿಲ್ಲ. 7 ಬಾರಿ ಪದಕ ಗೆದ್ದಿರುವ ಭಾರತ ಎರಡು ಬಾರಿ ಬೆಳ್ಳಿ ಜಯಿಸಿರುವುದೇ ಈವರೆಗಿನ ಶ್ರೇಷ್ಠ ಸಾಧನೆ. ಸೈನಾ ಹಾಗೂ ಸಿಂಧು ಈ ಬೆಳ್ಳಿಯನ್ನು ಗೆದ್ದಿದ್ದರು. ಈ ಬಾರಿ ವಿಶ್ವ ಚಾಂಪಿಯನ್ ಆಗುವ ಗುರಿಯಲ್ಲಿ ಇವರಿಬ್ಬರು ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದಿರುವ ಸಿಂಧು, ಹಾಲಿ ವರ್ಷದಲ್ಲಿ ಆಡಿದ ಮೂರೂ ಫೈನಲ್​ಗಳಲ್ಲಿ ಸೋತಿದ್ದಾರೆ. ಸತತ ಫೈನಲ್ ಸೋಲಿನ ಸರಪಳಿಯನ್ನು ತುಂಡರಿಸುವ ಇರಾದೆಯೊಂದಿಗೆ ಸಿಂಧು ಕಣಕ್ಕಿಳಿಯಲಿದ್ದಾರೆ. 2013 ಹಾಗೂ 2014ರಲ್ಲಿ ಕಂಚಿನ ಪದಕವನ್ನೂ ಈ ಟೂರ್ನಿಯಲ್ಲಿ ಜಯಿಸಿದ್ದಾರೆ.

ಕಣದಲ್ಲಿರುವ ಭಾರತೀಯರು

  • ಪುರುಷರ ಸಿಂಗಲ್ಸ್: ಕೆ.ಶ್ರೀಕಾಂತ್, ಸೌರಭ್ ವರ್ಮ, ಎಚ್​ಎಸ್ ಪ್ರಣಯ್, ಬಿಎಸ್ ಪ್ರಣೀತ್.
  • ಮಹಿಳಾ ಸಿಂಗಲ್ಸ್: ಸೈನಾ ನೆಹ್ವಾಲ್, ಪಿವಿ ಸಿಂಧು.
  • ಪುರುಷರ ಡಬಲ್ಸ್: ಮನು ಅತ್ರಿ-ಸುಮಿತ್ ರೆಡ್ಡಿ, ಸಾತ್ವಿಕ್​ರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ, ಅರ್ಜುನ್ ಎಂಆರ್-ರಾಮಚಂದ್ರನ್ ಶ್ಲೋಕ್, ತರುಣ್ ಕೋನ-ಸೌರಭ್ ಶರ್ಮ.
  • ಮಹಿಳಾ ಡಬಲ್ಸ್: ಸನ್ಯೋಂಗಿತಾ ಘೋರ್ಪಡೆ-ಪ್ರಜಕ್ತಾ ಸಾವಂತ್, ಮೇಘನಾ ಜಕ್ಕಂಪುಡಿ-ಪೂರ್ವಿಶಾ ಎಸ್ ರಾಮ್ ಕುಹೂ ಗಾರ್ಗ್-ನಿನ್​ಗಿಶಿ ಹಜಾರಿಕಾ, ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ.
  • ಮಿಶ್ರ ಡಬಲ್ಸ್: ಪ್ರಣವ್ ಚೋಪ್ರಾ-ಸಿಕ್ಕಿ ರೆಡ್ಡಿ, ಸಾತ್ವಿಕ್​ರಾಜ್ ರಂಕಿರೆಡ್ಡಿ-ಅಶ್ವಿನಿ ಪೊನ್ನಪ್ಪ, ಸೌರಭ್ ಶರ್ಮ-ಅನುಶ್ಕಾ ಪಾರಿಖ್, ರೋಹನ್ ಕಪೂರ್-ಕುಹೂ ಗಾರ್ಗ್.

ಆರಂಭ: ಬೆಳಗ್ಗೆ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಸವಾಲು ಮುನ್ನಡೆಸಲಿರುವ ಸಿಂಧು, ಸೈನಾ

ವಿಶ್ವಚಾಂಪಿಯನ್​ಷಿಪ್​ನ ಬೆನ್ನಲ್ಲಿಯೇ ಏಷ್ಯನ್ ಗೇಮ್ಸ್ ಕೂಡ ನಡೆಯಲಿರುವುದರಿಂದ ಭಾರತಕ್ಕೆ ಈ ಟೂರ್ನಿ ಬಹಳ ಮಹತ್ವ ಪಡೆದಿದೆ. ಹಾಲಿ ಋತುವಿನಲ್ಲಿ ಸಿಂಧು ಇಂಡಿಯಾ ಓಪನ್, ಕಾಮನ್ವೆಲ್ತ್ ಗೇಮ್್ಸ ಹಾಗೂ ಥಾಯ್ಲೆಂಡ್ ಓಪನ್​ನ ಫೈನಲ್ ಆಡಿದ್ದು, ನಿರಾಸೆ ಎದುರಿಸಿದ್ದಾರೆ. ಕಠಿಣ ಡ್ರಾ ಪಡೆದುಕೊಂಡಿರುವ ಹೈದಾರಾಬಾದ್ ಆಟಗಾರ್ತಿ 3ನೇ ಸುತ್ತಿನಲ್ಲಿ ಕೊರಿಯಾದ ಸುಂಗ್ ಜಿ ಹ್ಯುನ್​ರನ್ನು ಎದುರಿಸುವ ಸಾಧ್ಯತೆ ಇದ್ದು, ಜಯ ಕಂಡಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ಹಾಲಿ ಚಾಂಪಿಯನ್ ಒಕುಹರಾರರನ್ನು ಎದುರಿಸುವ ಸಾಧ್ಯತೆ ಇದೆ. ಇನ್ನು ಸೈನಾಗೆ ಅಸ್ಥಿರ ನಿರ್ವಹಣೆಯ ನಡುವೆಯೂ ಪದಕ ಗೆಲ್ಲುವ ನಿರೀಕ್ಷೆ ಇದೆ.

ಶ್ರೀಕಾಂತ್ ಮೇಲೆಯೂ ನಿರೀಕ್ಷೆ

ಕಳೆದ ಋತುವಿನಲ್ಲಿ ನಾಲ್ಕು ಪ್ರಶಸ್ತಿ ಗೆದ್ದಿದ್ದ ಕಿಡಂಬಿ ಶ್ರೀಕಾಂತ್, ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆಲ್ಲುವ ಸುದೀರ್ಘ ಆಸೆಯನ್ನು ಈಡೇರಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಐರ್ಲೆಂಡ್ ಎನ್​ಹಾಟ್ ಎನ್​ಗ್ಯುಯೆನ್ ವಿರುದ್ಧ ಮೊದಲ ಪಂದ್ಯ ಆಡಲಿರುವ ಶ್ರೀಕಾಂತ್, 3ನೇ ಸುತ್ತಿನಲ್ಲಿ 13ನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ ಸವಾಲನ್ನು ಎದುರಿಸುವ ಡ್ರಾ ಪಡೆದಿದ್ದಾರೆ.