ಇಂಡೋನೇಷ್ಯಾ ಸುನಾಮಿಗೆ ಬಲಿಯಾದವರ ಸಂಖ್ಯೆ 832ಕ್ಕೆ ಏರಿಕೆ

0
541

ಇಂಡೋನೇಷ್ಯಾದಲ್ಲಿ ಕಳೆದ ಸೆಪ್ಟೆಂಬರ್ 28 ರ ಶುಕ್ರವಾರ ಸಂಭವಿಸಿದ 7.5 ತೀವ್ರತೆಯ ಭೂಕಂಪದ ಬೆನ್ನಲ್ಲೆ ಅಪ್ಪಳಿಸಿದ್ದ ಭೀಕರ ಸುನಾಮಿಗೆ ಬಲಿಯಾದವರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ.

ಜಕಾರ್ತ: ಇಂಡೋನೇಷ್ಯಾದಲ್ಲಿ ಕಳೆದ ಸೆಪ್ಟೆಂಬರ್ 28 ರ  ಶುಕ್ರವಾರ ಸಂಭವಿಸಿದ 7.5 ತೀವ್ರತೆಯ ಭೂಕಂಪದ ಬೆನ್ನಲ್ಲೆ ಅಪ್ಪಳಿಸಿದ್ದ ಭೀಕರ ಸುನಾಮಿಗೆ ಬಲಿಯಾದವರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ. 

ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದರಿಂದ ಅದರೆಡೆಯಲ್ಲಿ ಸಿಲುಕಿರುವವರನ್ನು ರಕ್ಷಣಾ ಪಡೆಗಳು ಹೊರತೆಗೆಯುತ್ತಿದ್ದಾರೆ. ಆದರೆ ಹಲವರು ಗಂಭೀರ ಗಾಯಗೊಂಡಿದ್ದರಿಂದ ಅವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಗಿದೆ. ಜತೆಗೆ ಭೂಕಂಪದಿಂದಾಗಿ ಸಂಪರ್ಕ ವ್ಯವಸ್ಥೆ ಕೂಡ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದೆ. 

ಪಲು ನಗರದಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದ್ದು, ಗಾಯಗೊಂಡು ಆಸ್ಪತ್ರೆ ಸೇರಿದ್ದ ಹಲವರ ಸ್ಥಿತಿ ಕೂಡ ಚಿಂತಾಜನಕವಾಗಿದ್ದರಿಂದ ಸಾವಿನ ಸಂಖ್ಯೆ ಏರಿಕೆಯಾಗಿದೆ. ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಮೊದಲ ಆದ್ಯತೆ ನೀಡಿ, ನಂತರ ಅವಶೇಷ ತೆರವುಗೊಳಿಸಲು ಅಲ್ಲಿನ ಆಡಳಿತ ಸೂಚನೆ ನೀಡಿದೆ. 

ದೈತ್ಯ ಸುನಾಮಿಗೆ ಬಲಿಯಾದವರ ಮೃತದೇಹಗಳನ್ನು ಸಾಮೂಹಿಕವಾಗಿ ದಹಿಸಲಾಗುತ್ತಿದೆ. ಆಂಬ್ಯುಲೆನ್ಸ್‌ಗಳಿಗೆ ಶವ ಸಾಗಿಸುವುದೇ ದೊಡ್ಡ ಸವಾಲಾಗಿದೆ. ಆಹಾರ ಮತ್ತು ನೀರಿಗಾಗಿ ಸ್ಥಳೀಯ ನಿವಾಸಿಗಳು ಅಂಗಡಿಗಳು, ಮಿನಿ ಮಾರ್ಕೆಟ್‌ಗಳನ್ನು ದೋಚುತ್ತಿದ್ದಾರೆ. ಅವಘಡದಲ್ಲಿ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುನಾಮಿ ಪೀಡಿತ ಡೊಂಗ್ಗಲಾ ಪ್ರದೇಶಕ್ಕೆ ತೆರಳಲು ಸ್ಥಳೀಯ ಅಧಿಕಾರಿಗಳು, ರೆಡ್‌ಕ್ರಾಸ್‌ ಸೇರಿದಂತೆ ಸಹಾಯ ಸಂಸ್ಥೆಗಳು ಹರಸಾಹಸ ಪಡುತ್ತಿವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿರಬಹುದಾದ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಭೂಕಂಪದ ಭೀತಿಯಿಂದ ಅನೇಕ ನಿವಾಸಿಗಳು ಬಯಲಲ್ಲಿ ಮಲಗಿದರೆ, ಕೆಲವರು ಬಿದಿರಿನ ಗುಡಿಸಲು ಮಾಡಿಕೊಂಡು ಅದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಸುನಾಮಿಯಿಂದ ಪ್ರಮುಖ ಬಂದರುಗಳು, ಹಡಗುಗಳು, ಸೇತುವೆಗಳು ಮತ್ತು ರಸ್ತೆಗಳಿಗೆ ಹಾನಿಯಾಗಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ. ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ನಗರಕ್ಕೆ ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.