ಇಂಡೊನೇಷ್ಯಾ ನೂತನ ಅಧ್ಯಕ್ಷರಾಗಿ “ಜೋಕೊ ವಿಡೊಡೊ” ಪುನರಾಯ್ಕೆ

0
23

ವಿಶ್ವದ ಮೂರನೇ ದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಇಂಡೊನೇಷ್ಯಾದ ನೂತನ ಅಧ್ಯಕ್ಷರಾಗಿ ಜೋಕೊ ವಿಡೊಡೊ ಪುನರಾಯ್ಕೆಯಾಗಿದ್ದಾರೆ.

ಜಕಾರ್ತ (ಎಎಫ್‌ಪಿ): ವಿಶ್ವದ ಮೂರನೇ ದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಇಂಡೊನೇಷ್ಯಾದ ನೂತನ ಅಧ್ಯಕ್ಷರಾಗಿ ಜೋಕೊ ವಿಡೊಡೊ ಪುನರಾಯ್ಕೆಯಾಗಿದ್ದಾರೆ.

ಜೋಕೊ ವಿಡೊಡೊ ಅವರು ಅಕ್ಟೋಬರ್ 20, 2014 ರಿಂದ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು. ಅವರ 5 ವರ್ಷದ ಅಧಿಕಾರವಧಿ ಮುಗಿದಿದ್ದರಿಂದ  ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷರಾಗಿ  ಪುನರಾಯ್ಕೆಯಾಗಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಮೇ 21 ರ ಮಂಗಳವಾರ ಬಹಿರಂಗಗೊಂಡಿದೆ. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣವನ್ನು ಚುನಾವಣಾ ಆಯೋಗವು ಮೇ 22 ರ ಬುಧವಾರ ಅಧಿಕೃತವಾಗಿ ಪ್ರಕಟಿಸಲಿದೆ.

ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ವಂಚನೆ ನಡೆದಿದೆ ಎಂದು ವಿಡೊಡೊ ಪ್ರತಿಸ್ಪರ್ಧಿ ಪ್ರಬೊವೊ ಸುಬಿಯಾಂತೊ ಆರೋಪಿಸಿದ್ದು, ಇದರ ವಿರುದ್ಧ ಜನರು ದಂಗೆ ಏಳುವರು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಜಕಾರ್ತದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಜನ ಯೋಧರನ್ನು ನಿಯೋಜನೆ ಮಾಡಲಾಗಿದೆ.

ಚುನಾವಣಾ ಅಕ್ರಮಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂದು ಸುಬಿಯಾಂತೊ ಅವರು ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬಾಂಬ್‌ ದಾಳಿ ನಡೆಸಲು ಇಸ್ಲಾಮಿಕ್‌ ಸ್ಟೇಟ್‌ ಜೊತೆ ಸಂಪರ್ಕ ಹೊಂದಿರುವ
ಉಗ್ರರು ಸಂಚು ನಡೆಸಿದ್ದಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಇದೇ ಸಂಬಂಧ, ಇಸ್ಲಾಮಿಕ್‌ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇಲೆ ಕೆಲವರನ್ನು ಬಂಧಿಸಲಾಗಿತ್ತು.

# ಇಂಡೊನೇಷ್ಯಾದ ರಾಜಧಾನಿ : ಜಕಾರ್ತ್

# ಇಂಡೊನೇಷ್ಯಾದ ಕರೆನ್ಸಿ : ಇಂಡೊನೇಷ್ಯಾ ರುಪಿಯಾ