ಇಂಟರ್‌ಪೋಲ್ ಮುಖ್ಯಸ್ಥ “ಮೆಂಗ್ ಹೊಂಗ್‌ವೀ” ಚೀನಾದ ಪೊಲೀಸರ ವಶಕ್ಕೆ

0
737

ಇಂಟರ್‌ಪೋಲ್ ಮುಖ್ಯಸ್ಥ ಮೆಂಗ್ ಹೊಂಗ್‌ವೀ (64) ಅವರನ್ನು ವಿಚಾರಣೆಗಾಗಿ ಚೀನಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೀಜಿಂಗ್ (ಪಿಟಿಐ/ಎಪಿ): ಇಂಟರ್‌ಪೋಲ್ ಮುಖ್ಯಸ್ಥ ಮೆಂಗ್ ಹೊಂಗ್‌ವೀ (64) ಅವರನ್ನು ವಿಚಾರಣೆಗಾಗಿ ಚೀನಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫ್ರಾನ್ಸ್‌ನ ಲಿಯೋನ್‌ನಿಂದ ಹೊರಟಿದ್ದ ಅವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾದ ಒಂದು ದಿನದ ಬಳಿಕ ತಮ್ಮ ದೇಶ ಚೀನಾದಲ್ಲಿ ಪೊಲೀಸರ ವಶದಲ್ಲಿ ಇದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ.

ತಮ್ಮ ಪತಿ ನಾಪತ್ತೆಯಾಗಿದ್ದಾರೆ ಎಂದು ಮೆಂಗ್ ಅವರ ಪತ್ನಿ ಫ್ರಾನ್ಸ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಅಕ್ಟೋಬರ್ 5 ರ ಶುಕ್ರವಾರ ತನಿಖೆ ಆರಂಭಿಸಿದ್ದರು. ಇವರು ಸೆಪ್ಟೆಂಬರ್ 29ರಂದು ಫ್ರಾನ್ಸ್‌ನಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದರು. 

ಚೀನಾಗೆ ಬಂದಿಳಿದ ಕೂಡಲೇ ಪ್ರಕರಣವೊಂದರ ವಿಚಾರಣೆಗಾಗಿ ಕಳೆದವಾರ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಮೆಂಗ್ ಅವರನ್ನು ಗುರಿಯಾಗಿಸಿರಬಹುದು ಎಂದು ಪತ್ರಿಕೆ ಸುಳಿವು ನೀಡಿದೆ. 

ಅವರು ಎಲ್ಲಿದ್ದಾರೆ, ಯಾವ ಕಾರಣಕ್ಕೆ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಮೆಂಗ್ ಅವರು ಚೀನಾದ ಸಾರ್ವಜನಿಕ ಭದ್ರತೆ ಇಲಾಖೆಯ ಉಪಸಚಿವರು ಕೂಡಾ. ಈ ಬಗ್ಗೆ ಭದ್ರತಾ ಸಚಿವಾಲಯ ಅಥವಾ ವಿದೇಶಾಂಗ ಸಚಿವಾಲಯಗಳು ಪ್ರತಿಕ್ರಿಯೆ ನೀಡಿಲ್ಲ. 

ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದ 24 ಗಂಟೆಯೊಳಗೆ ಅವರ ಸಂಬಂಧಿಕರಿಗೆ ಮಾಹಿತಿ ನೀಡುವ ಕಾನೂನು ಚೀನಾದಲ್ಲಿದೆ. ಆದರೆ ಮೆಂಗ್ ಅವರ ಪತ್ನಿಗೆ ಮಾಹಿತಿ ನೀಡಲಾಗಿಲ್ಲ. ಇವರು ಸಚಿವರಾಗಿರುವಾಗಲೇ ಚೀನಾದ ಕಮ್ಯುನಿಸ್ಟ್ ಪಕ್ಷವು, ಸಮಿತಿ ಸದಸ್ಯತ್ವದಿಂದ ಇವರನ್ನು ಏಪ್ರಿಲ್‌ನಲ್ಲಿ ಕೈಬಿಟ್ಟಿತ್ತು.

ಇವರು ಆಗಸ್ಟ್ 23ರಂದು ಸಿಂಗಪುರದ ಪ್ರತಿನಿಧಿಯೊಬ್ಬರನ್ನು ಭೇಟಿಯಾಗಿದ್ದು ಅಧಿಕೃತವಾದ ಕೊನೆಯ ಕಾರ್ಯಕ್ರಮವಾಗಿತ್ತು. 

2016ರಲ್ಲಿ ಮೆಂಗ್ ಅವರು ಇಂಟರ್‌ನ್ಯಾಷನಲ್ ಪೊಲೀಸ್ ಆರ್ಗನೈಸೇಷನ್ (ಇಂಟರ್‌ಪೋಲ್) ಮುಖ್ಯಸ್ಥರಾಗಿ ನಿಯುಕ್ತಿಗೊಂಡಿದ್ದರು. 2020ರವರೆಗೆ ಇವರ ಅಧಿಕಾರಾವಧಿ ಇದೆ. ಇವರ ಆಯ್ಕೆಯು ಒಂದಿಷ್ಟು ವಿವಾದಕ್ಕೂ ಕಾರಣ ವಾಗಿತ್ತು. ವಿದೇಶಗಳಲ್ಲಿ ನೆಲೆಸಿರುವ ಭಿನ್ನಮತೀಯರನ್ನು ಹಣಿಯಲು ಚೀನಾ ಇವರನ್ನು ಬಳಸಿಕೊಳ್ಳಬಹುದು ಎಂಬ ಕಳವಳ ವ್ಯಕ್ತವಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಸಹಕಾರ ನೀಡುವ ಅತಿದೊಡ್ಡ ಏಜೆನ್ಸಿಯಾಗಿರುವ ಇಂಟರ್‌ಪೋಲ್, 192 ದೇಶಗಳ ಸರ್ಕಾರಗಳ ಜೊತೆ ಕೆಲಸ ಮಾಡುತ್ತಿದೆ.