ಇಂಗ್ಲೆಂಡ್‌: ಸಿಖ್ಖರು ಕಿರ್ಪಾನ್‌(ಸಣ್ಣ ಚೂರಿ) ಇಟ್ಟುಕೊಳ್ಳಲು ಅನುಮತಿ

0
18

ಇಂಗ್ಲೆಂಡ್‌ನಲ್ಲಿ ಚೂರಿ ಇರಿತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅಪಾಯಕಾರಿ ಆಯುಧಗಳ ನೂತನ ಮಸೂದೆ ರೂಪಿಸಲಾಗಿದೆ. ಸಿಖ್ಖರು ‘ಕಿರ್ಪಾನ್‌’ (ಸಣ್ಣ ಚೂರಿ) ಇಟ್ಟುಕೊಳ್ಳುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂಬ ಅಂಶ ಈ ಮಸೂದೆಯಲ್ಲಿದೆ.

ಲಂಡನ್‌ (ಪಿಟಿಐ): ಇಂಗ್ಲೆಂಡ್‌ನಲ್ಲಿ ಚೂರಿ ಇರಿತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅಪಾಯಕಾರಿ ಆಯುಧಗಳ ನೂತನ ಮಸೂದೆ ರೂಪಿಸಲಾಗಿದೆ. ಸಿಖ್ಖರು ‘ಕಿರ್ಪಾನ್‌’ (ಸಣ್ಣ ಚೂರಿ) ಇಟ್ಟುಕೊಳ್ಳುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂಬ ಅಂಶ ಈ ಮಸೂದೆಯಲ್ಲಿದೆ. 

ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿದ್ದು, ರಾಣಿ ಎರಡನೇ ಎಲಿಜಬೆತ್‌ ಅವರ ಅನುಮೋದನೆ ನಂತರ, ಇದು ಕಾನೂನಾಗಿ ಜಾರಿಗೆ ಬರಲಿದೆ. 

ಈ ಮೊದಲಿದ್ದ ಕಾನೂನಿಗೆ ತಿದ್ದುಪಡಿ ತಂದು, ಈ ಹೊಸ ಮಸೂದೆ ರೂಪಿಸಲಾಗಿದೆ. ‘ಕಿರ್ಪಾನ್‌’ ಅಥವಾ ಧಾರ್ಮಿಕ ಶಸ್ತ್ರಗಳನ್ನು ಹೊಂದುವ ಸಿಖ್ಖರ ಹಕ್ಕಿಗೆ ಹೊಸ ಕಾನೂನಿನಿಂದ ಯಾವುದೇ ತಡೆ ಇರುವುದಿಲ್ಲ ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ. 

 ಹೊಸ ಕಾನೂನು ಜಾರಿಯಾಗುವ ಸಂದರ್ಭದಲ್ಲಿ, ‘ಕಿರ್ಪಾನ್‌’ ಇಟ್ಟುಕೊಳ್ಳುವುದಕ್ಕೆ ಯಾವುದೇ ತಡೆ ವಿಧಿಸಬಾರದು ಎಂದು ಬ್ರಿಟಿಷ್‌ ಸಿಖ್‌ ಸಮುದಾಯದ ಸರ್ವಪಕ್ಷಗಳ ಸಂಸದೀಯ ಕೂಟವು ಇಂಗ್ಲೆಂಡ್‌ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. 

‘ಮಸೂದೆಗೆ ಮಾಡಿರುವ ತಿದ್ದುಪಡಿ ಕಂಡು ಖುಷಿಯಾಗಿದೆ. ‘ಕಿರ್ಪಾನ್‌’ ಹೊಂದುವುದು ಅಥವಾ ಮಾರಾಟ ಮಾಡುವುದು ಅಪರಾಧವಲ್ಲ ಎಂಬುದು ಸಮಾಧಾನಕರ ಅಂಶ’ ಎಂದು ಲೇಬರ್‌ ಪಕ್ಷದ ಸಂಸದೆ ಪ್ರೀತ್‌ ಕೌರ್‌ ಗಿಲ್‌ ಹೇಳಿದ್ದಾರೆ. 

ಗುರುದ್ವಾರದಲ್ಲಿ ನಡೆಯುವ ಸಿಖ್‌ ಸಮಾರಂಭಗಳಲ್ಲಿ ಸಮುದಾಯವು 50 ಸೆಂ.ಮೀ. ಅಗಲದ ಬ್ಲೇಡ್‌ಗಳಿರುವ ದೊಡ್ಡ ‘ಕಿರ್ಪಾನ್‌’ಗಳನ್ನು ಇಟ್ಟುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತದೆ. ಮೆರವಣಿಗೆ ವೇಳೆಯೂ, ಇಂತಹ ‘ಕಿರ್ಪಾನ್‌’ಗಳನ್ನು ಇಟ್ಟುಕೊಳ್ಳಲು ಯಾವುದೇ ತಡೆ ನೀಡಿಲ್ಲ.