ಇಂಗ್ಲೆಂಡ್​ಗೆ ಚೊಚ್ಚಲ ವಿಶ್ವಕಪ್ ಕಿರೀಟ

0
39

ಕ್ರಿಕೆಟ್​ನ ಬಲಿಷ್ಠ ಶಕ್ತಿಯಾಗಿದ್ದರೂ, ವಿಶ್ವಕಪ್ ಟ್ರೋಫಿಯ ಅಧಿಕಾರದಿಂದ ದೂರವೇ ಉಳಿದಿದ್ದ ಇಂಗ್ಲೆಂಡ್ ತಂಡ, ಕೊನೆಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟವೇರಿದೆ.

ಲಾರ್ಡ್ಸ್: ಕ್ರಿಕೆಟ್​ನ ಬಲಿಷ್ಠ ಶಕ್ತಿಯಾಗಿದ್ದರೂ, ವಿಶ್ವಕಪ್ ಟ್ರೋಫಿಯ ಅಧಿಕಾರದಿಂದ ದೂರವೇ ಉಳಿದಿದ್ದ ಇಂಗ್ಲೆಂಡ್ ತಂಡ, ಕೊನೆಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟವೇರಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹಾಲಿ ರನ್ನರ್​ಅಪ್ ನ್ಯೂಜಿಲೆಂಡ್ ತಂಡವನ್ನು ಸೂಪರ್ ಓವರ್ ಸಾಹಸದಲ್ಲಿ ಮಣಿಸಿದ ಆತಿಥೇಯ ತಂಡ ಏಕದಿನ ಮಾದರಿಯ ವಿಶ್ವ ಸಾಮ್ರಾಟನಾಗಿ ಹೊರಹೊಮ್ಮಿತು.

ಈ ಹಿಂದೆ ವಿಶ್ವಕಪ್ ಫೈನಲ್​ಗೇರಿದ್ದ ಮೂರು ಬಾರಿ ಸೋಲಿನ ಅವಮಾನ ಎದುರಿಸಿದ್ದ ಇಂಗ್ಲೆಂಡ್, 27 ವರ್ಷಗಳ ಬಳಿಕ ವಿಶ್ವಕಪ್​ನಲ್ಲಿ ಫೈನಲ್​ಗೇರುವಲ್ಲಿ ಯಶ ಕಂಡಿತ್ತು. 241 ರನ್​ನ ಚೇಸಿಂಗ್​ನ ವೇಳೆ 86 ರನ್​ಗೆ 4 ವಿಕೆಟ್ ಕಳೆದುಕೊಂಡಾಗ ಮತ್ತೊಮ್ಮೆ ಇಂಗ್ಲೆಂಡ್ ಸೋಲಿನ ಆಘಾತ ಎದುರಿಸುವ ನಿರೀಕ್ಷೆ ಇತ್ತು. ಆದರೆ, ಬೆನ್ ಸ್ಟೋಕ್ಸ್ (84*ರನ್, 98 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಜೋಸ್ ಬಟ್ಲರ್ (69ರನ್, 60 ಎಸೆತ, 6 ಬೌಂಡರಿ) ಆಡಿದ ಜೀವನಶ್ರೇಷ್ಠ ಇನಿಂಗ್ಸ್​ನ ನೆರವಿನಿಂದ ಇಂಗ್ಲೆಂಡ್, ಲಾರ್ಡ್ಸ್ ನೆಲದಲ್ಲಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ಅದರೊಂದಿಗೆ ಸತತ 3ನೇ ಆವೃತ್ತಿಯಲ್ಲೂ ಆತಿಥೇಯ ತಂಡವೇ ವಿಶ್ವಕಪ್ ಟ್ರೋಫಿ ಜಯಿಸಿತು.

ಭಾನುವಾರ ಸಾಗಿದ ರೋಚಕ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಗೊಂದಲದಲ್ಲಿಯೇ ಬ್ಯಾಟಿಂಗ್ ಆಯ್ದುಕೊಂಡರು. ತೀರಾ ಪ್ರಮುಖ ಪಂದ್ಯದಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾದ ನ್ಯೂಜಿಲೆಂಡ್ 8 ವಿಕೆಟ್​ಗೆ 241 ರನ್ ಬಾರಿಸಿದರೆ, ಪ್ರತಿಯಾಗಿ ಇಂಗ್ಲೆಂಡ್ 50 ಓವರ್​ಗಳಲ್ಲಿ 241 ರನ್​ಗೆ ಆಲೌಟ್ ಆಗಿತ್ತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್, ಬಟ್ಲರ್, ಸ್ಟೋಕ್ಸ್ ನಿರ್ವಹಣೆಯಿಂದ 15 ರನ್ ಪೇರಿಸಿತು. ನಂತರ ಕಿವೀಸ್ ಪರವಾಗಿ ಬ್ಯಾಟಿಂಗ್​ಗೆ ಇಳಿದ ಜಿಮ್ಮಿ ನೀಶಾಮ್ ಹಾಗೂ ಮಾರ್ಟಿನ್ ಗುಪ್ಟಿಲ್, ಜೋಫ್ರಾ ಆರ್ಚರ್​ರ 6 ಎಸೆತಗಳಲ್ಲಿ 15 ಬಾರಿಸಿತು. ಸೂಪರ್ ಓವರ್​ನಲ್ಲಿ ಪಂದ್ಯ ಟೈ ಆದರೂ, ಹೆಚ್ಚಿನ 8 ಬೌಂಡರಿ (24-16) ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು.

ಟೈ ಸಾಧಿಸಿದ ಸ್ಟೋಕ್ಸ್

ಕೊನೇ ಓವರ್​ನಲ್ಲಿ 15 ರನ್ ಬೇಕಿದ್ದಾಗ, ಬೌಲ್ಟ್​ರ ಮೊದಲ ಎರಡು ಎಸೆತಗಳಲ್ಲಿ ಸ್ಟೋಕ್ಸ್ ರನ್ ಬಾರಿಸಲು ವಿಫಲರಾದರೆ, 3ನೇ ಎಸೆತವನ್ನು ಮಿಡ್​ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು. ಆದರೆ, 4ನೇ ಎಸೆತದ ಓವರ್​ಥ್ರೋನಲ್ಲಿ ಆದ ಪ್ರಮಾದ ಕಿವೀಸ್​ನ ವಿಶ್ವಕಪ್ ಆಸೆಯನ್ನು ಕಸಿದುಕೊಂಡಿತು. 2ನೇ ರನ್ ಓಡುವ ಯತ್ನದಲ್ಲಿ ಸ್ಟೋಕ್ಸ್ ಡೈವ್ ಮಾಡಿದರೆ, ಥ್ರೋ ಆದ ಚೆಂಡು ಅವರ ಬ್ಯಾಟ್​ಗೆ

ಬಡಿದು ಬೌಂಡರಿ ಲೈನ್ ಸೇರಿದಾಗ ಗೆಲುವಿಗೆ 2 ಎಸೆತಗಳಲ್ಲಿ 3 ರನ್ ಅನಿವಾರ್ಯತೆಗೆ ಸಿಲುಕಿತ್ತು. ಕೊನೇ 2 ಎಸೆತದಲ್ಲಿ ಆದಿಲ್ ರಶೀದ್ ಹಾಗೂ ಮಾರ್ಕ್ ವುಡ್ ವಿಕೆಟ್ ರನೌಟ್ ರೂಪದಲ್ಲಿ ಉರುಳಿದರೂ, ಒಂದೊಂದು ರನ್ ಗಳಿಸಿದ್ದರಿಂದ ಪಂದ್ಯ ಟೈ ಕಂಡಿತು.

ವಲಸೆ ಆಟಗಾರರ ತಂಡ ಇಂಗ್ಲೆಂಡ್!

ಇಂಗ್ಲೆಂಡ್ ತಂಡ ವಿಶ್ವಕಪ್ ಫೈನಲ್​ಗೇರಿದ ಬೆನ್ನಲ್ಲಿಯೇ ಇಂಗ್ಲೆಂಡ್​ನ ಮಾಜಿ ಆಟಗಾರರು ‘ಇಟ್ಸ್ ಕಮಿಂಗ್ ಹೋಮ್ ಎಂದು ಟ್ವೀಟ್ ಮಾಡಿ ಸಂಭ್ರಮಿಸಲು ಆರಂಭಿಸಿದರು. ಆದರೆ, ಇದಕ್ಕೆ ಟ್ವೀಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯಾವ ಹೋಮ್ ಎಂದು ನೀವು ಹೇಳುತ್ತಿದ್ದೀರಿ. ಜೋಫ್ರಾ ಆರ್ಚರ್ (ವೆಸ್ಟ್ ಇಂಡೀಸ್), ಜೇಸನ್ ರಾಯ್ (ದಕ್ಷಿಣ ಆಫ್ರಿಕಾ), ಬೆನ್ ಸ್ಟೋಕ್ಸ್ (ನ್ಯೂಜಿಲೆಂಡ್), ನಾಯಕ ಇವೋಯಿನ್ ಮಾರ್ಗನ್ (ಐರ್ಲೆಂಡ್), ಮೊಯಿನ್ ಅಲಿ, ಆದಿಲ್ ರಶೀದ್ (ಪಾಕಿಸ್ತಾನ) ಇವರೆಲ್ಲರೂ ವಲಸಿಗ ಆಟಗಾರರು ಎಂದು ವಿವರಣೆ ನೀಡಿದ್ದಾರೆ. ಇನ್ನೊಂದೆಡೆ ನ್ಯೂಜಿಲೆಂಡ್ ತಂಡ ಕೂಡ ಭಾರತೀಯ ಮೂಲದ ಆಟಗಾರ ಇಶ್ ಸೋಧಿಯನ್ನು ತಂಡದಲ್ಲಿ ಹೊಂದಿತ್ತು.

07 ಹಾಲಿ ವಿಶ್ವಕಪ್​ನಲ್ಲಿ ಒಟ್ಟಾರೆ ಏಳು ಬ್ಯಾಟ್ಸ್​ಮನ್​ಗಳು 500ಕ್ಕೂ ಅಧಿಕ ರನ್ ಪೇರಿಸಿದರು. ವಿಶೇಷವೆಂದರೆ, 1975ರಿಂದ 2015ರವರೆಗೆ 11 ವಿಶ್ವಕಪ್ ಆವೃತ್ತಿಗಳಿಂದ ಈವರೆಗೂ 8 ಮಂದಿ ಮಾತ್ರವೇ 500ಕ್ಕೂ ಅಧಿಕ ರನ್ ಸಿಡಿಸಿದ್ದರು. ಹಾಲಿ ಆವೃತ್ತಿಯಲ್ಲಿ ರೋಹಿತ್ ಶರ್ಮ (648 ರನ್), ಡೇವಿಡ್ ವಾರ್ನರ್ (647), ಶಕೀಬ್ ಅಲ್ ಹಸನ್ (606), ಕೇನ್ ವಿಲಿಯಮ್ಸನ್ (578), ಜೋ ರೂಟ್ (556), ಜಾನಿ ಬೇರ್ ಸ್ಟೋ (532) ಹಾಗೂ ಆರನ್ ಫಿಂಚ್ (507) 500ಕ್ಕೂ ಅಧಿಕ ರನ್ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿದ್ದಾರೆ.

ಸ್ಟೋಕ್ಸ್-ಬಟ್ಲರ್ ಹೋರಾಟ

ಸೋಲಿನ ಆತಂಕದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಜೋಡಿ 5ನೇ ವಿಕೆಟ್​ಗೆ 110 ರನ್ ಜತೆಯಾಟವಾಡಿ ಗೆಲುವಿನ ವಿಶ್ವಾಸ ನೀಡಿತು. ಗ್ರಾಂಡ್​ಹೋಮ್ ಫರ್ಗ್ಯುಸನ್​ರ ಎಸೆತಗಳನ್ನು ಆಡುವಲ್ಲಿ ಜಾಣ್ಮೆ ತೋರಿದ ಜೋಡಿ, 40ನೇ ಓವರ್ ಬಳಿಕ ವೇಗವಾಗಿ ಆಡಲು ಆರಂಭಿಸಿತು. ಅದರಲ್ಲೂ ಬಟ್ಲರ್, ಆಟದಲ್ಲಿ ಸಿಕ್ಸರ್-ಬೌಂಡರಿಗಳ ಅಬ್ಬರ ಕಡಿಮೆ ಇದ್ದರೂ, ಎಸೆತಕ್ಕೆ ಒಂದರಂತೆ ರನ್ ಬಾರಿಸಿ ಸ್ಕೋರ್​ಕಾರ್ಡ್​ಅನ್ನು ಚಾಲ್ತಿಯಲ್ಲಿಟ್ಟಿದ್ದರು. 46ನೇ ಓವರ್​ನಲ್ಲಿ ಜೋಸ್ ಬಟ್ಲರ್ ಹಾಗೂ ಅದರ ಮರು ಓವರ್​ನಲ್ಲಿ ಕ್ರಿಸ್ ವೋಕ್ಸ್ ಔಟಾದಾಗ ಇಂಗ್ಲೆಂಡ್ ಆತಂಕ ಎದುರಿಸಿತ್ತು.

ಆಘಾತ ಕಂಡಿದ್ದ ಇಂಗ್ಲೆಂಡ್

ಇಂಗ್ಲೆಂಡ್​ನ ವಿಶ್ವಕಪ್ ಅಭಿಯಾನದ ಈವರೆಗಿನ ಗೆಲುವಿನ ರೂವಾರಿಗಳಾಗಿದ್ದ ಜೇಸನ್ ರಾಯ್, ಜಾನಿ ಬೇರ್​ಸ್ಟೋ, ಇವೋಯಿನ್ ಮಾರ್ಗನ್ ಹಾಗೂ ಜೋ ರೂಟ್​ರನ್ನು 86 ರನ್​ಗಳ ಒಳಗಾಗಿ ಪೆವಿಲಿಯನ್​ಗಟ್ಟಿದ್ದ ನ್ಯೂಜಿಲೆಂಡ್ ಪಂದ್ಯ ಗೆದ್ದಂತೆ ಬೀಗಿತ್ತು. 20 ಎಸೆತಗಳಲ್ಲಿ 17 ರನ್ ಸಿಡಿಸಿ ಜೇಸನ್ ರಾಯ್ ನಿರ್ಗಮಿಸಿದರೆ, ಜೋ ರೂಟ್​ರ ಆಮೆಗತಿಯ ಇನಿಂಗ್ಸ್ ಇಂಗ್ಲೆಂಡ್​ನ ಮೇಲೆ ಇನ್ನಷ್ಟು ಒತ್ತಡ ಹೇರಿತು. 30 ಎಸೆತ ಆಡಿದ ರೂಟ್ 7 ರನ್ ಬಾರಿಸಿ ಗ್ರಾಂಡ್​ಹೊಮ್ೆ ಔಟ್ ಆದರು. 55 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 36 ರನ್ ಬಾರಿಸಿ ಉತ್ತಮ ಲಯದಲ್ಲಿದ್ದ ಬೇರ್​ಸ್ಟೋ, ಫರ್ಗ್ಯುಸನ್ ಎಸೆತದಲ್ಲಿ ಬೌಲ್ಡ್ ಆದರು. ನಾಯಕ ಇವೋಯಿನ್ ಮಾರ್ಗನ್, ಫರ್ಗ್ಯುಸನ್ ಹಿಡಿದ ಅದ್ಭುತ ಕ್ಯಾಚ್​ಗೆ ಪೆವಲಿಯನ್ ಸೇರಿದರು.

ಕೇನ್-ನಿಕೋಲ್ಸ್ ಎಚ್ಚರಿಕೆಯ ಆಟ

ಆರಂಭದಲ್ಲಿ ಇಂಗ್ಲೆಂಡ್ ಮೇಲೆ ಒತ್ತಡ ಹೇರುವಲ್ಲಿ ಗುಪ್ಟಿಲ್ ಯಶ ಕಂಡಿದ್ದರು. ಮೊದಲ ಕೆಲ ಬೌಂಡರಿಗಳ ಬಳಿಕ, 3ನೇ ಓವರ್​ನಲ್ಲಿ ಹೆನ್ರಿ ನಿಕೋಲ್ಸ್​ಗೆ ಎಲ್​ಬಿ ಔಟ್ ತೀರ್ಪು ನೀಡಲಾಗಿತ್ತು. ಡಿಆರ್​ಎಸ್ ಮೂಲಕ ನಿಕೋಲ್ಸ್ ಉಳಿದುಕೊಂಡ ನಂತರ, ಗುಪ್ಟಿಲ್ ಅಬ್ಬರದ ಆಟವಾಡಲು ಆರಂಭಿಸಿದರು. ಆರ್ಚರ್ ಎಸೆತದಲ್ಲಿ ಅಪ್ಪರ್ ಕಟ್ ಸಿಕ್ಸರ್ ಹಾಗೂ ಮರು ಎಸೆತದಲ್ಲಿ ಸ್ಟ್ರೈಟ್ ಡ್ರೖೆವ್ ಬೌಂಡರಿ ಸಿಡಿಸಿ ಇಂಗ್ಲೆಂಡ್​ಗೆ ಬೆದರಿಸಿದ್ದರು. ಗುಪ್ಟಿಲ್ ಮೈಚಳಿ ಬಿಟ್ಟು ಆಡಲು ಆರಂಭಿಸುತ್ತಿದ್ದಂತೆ ಕ್ರಿಸ್ ವೋಕ್ಸ್ 7ನೇ ಓವರ್​ನಲ್ಲಿ ಮೊದಲ ಬಲಿ ಪಡೆದರು. ನಿಖರ ಎಲ್​ಬಿಯನ್ನು ಡಿಆರ್​ಎಸ್ ಮೂಲಕ ಪರಿಶೀಲನೆ ಮಾಡಲು ಹೋಗಿ ಗುಪ್ಟಿಲ್ ಕೈಸುಟ್ಟುಕೊಂಡರು. ಆ ನಂತರ ಕ್ರೀಸ್​ಗೆ ಇಳಿದ ಕೇನ್ ವಿಲಿಯಮ್ಸನ್ ಮಂದಗತಿಯ ಆಟವಾಡಿದರು. ಮೊದಲ ಐದು ರನ್​ಗಳಿಗಾಗಿ 28 ಎಸೆತ ಆಡಿದ ವಿಲಿಯಮ್ಸನ್ ನಂತರ 22 ಎಸೆತಗಳಿಂದ 25 ರನ್ ಸಿಡಿಸುವ ಮೂಲಕ ನಿಕೋಲ್ಸ್ ಜತೆ ಸೇರಿ ಮೊತ್ತವನ್ನು 100ರ ಗಡಿ ದಾಟಿಸಿದರು. ಭಾರತ ವಿರುದ್ಧ ಸೆಮಿಫೈನಲ್​ನಲ್ಲಿ ಆಡಿದ ರೀತಿಯಲ್ಲಿಯೇ ಇನಿಂಗ್ಸ್ ಕಟ್ಟಿದ ನ್ಯೂಜಿಲೆಂಡ್ ನಿಧಾನವಾಗಿ ಒತ್ತಡವನ್ನು ಇಂಗ್ಲೆಂಡ್ ಮೇಲೆ ಹೇರಿತು. 2ನೇ ವಿಕೆಟ್​ಗೆ ಈ ಜೋಡಿ 74 ರನ್ ಜತೆಯಾಟವಾಡಿತು.

578 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಗರಿಷ್ಠ ರನ್ ಪೇರಿಸಿದ ದಾಖಲೆಯನ್ನು ಕೇನ್ ವಿಲಿಯಮ್ಸನ್ ಮಾಡಿದರು. ಕೇನ್ ವಿಲಿಯಮ್ಸನ್ ಒಟ್ಟು 578 ರನ್ ಬಾರಿಸುವ ಮೂಲಕ, 2007ರಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನೆ (548) ಹೆಸರಲ್ಲಿದ್ದ ದಾಖಲೆಯನ್ನು ಮುರಿದರು.

ಭಾರತದಲ್ಲಿ ಮುಂದಿನ ವಿಶ್ವಕಪ್

ಮುಂದಿನ 13ನೇ ಆವೃತ್ತಿಯ ಏಕದಿನ ವಿಶ್ವಕಪ್ 2023ರ ಫೆಬ್ರವರಿ 9ರಿಂದ ಮಾರ್ಚ್ 26ರವರೆಗೆ ಭಾರತದಲ್ಲಿ ನಡೆಯಲಿದೆ. ಇದು ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮೊದಲ ವಿಶ್ವಕಪ್ ಆಗಿರಲಿದೆ. ಈ ಹಿಂದೆ 1987, 1996, 2011ರಲ್ಲಿ ಭಾರತ ಜಂಟಿ ಆತಿಥ್ಯ ವಹಿಸಿತ್ತು. 10 ತಂಡಗಳ ಟೂರ್ನಿಗೆ ಆತಿಥೇಯ ತಂಡವಾಗಿ ಭಾರತ ಈಗಾಗಲೆ ಅರ್ಹತೆ ಪಡೆದಿದೆ. 2022ರ ಮಾರ್ಚ್​ವರೆಗೆ ನಡೆಯಲಿರುವ ಐಸಿಸಿ ಸೂಪರ್ ಲೀಗ್​ನಲ್ಲಿ ಆಡಲಿರುವ 13 ತಂಡಗಳ ಪೈಕಿ ಅಗ್ರ 7 ತಂಡಗಳು (ಭಾರತ ಹೊರತಾಗಿ) ವಿಶ್ವಕಪ್​ಗೆ ಅರ್ಹತೆ ಪಡೆಯಲಿವೆ. ನಂತರ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯ ಮೂಲಕ ಮತ್ತೆರಡು ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿವೆ.

ವಿಶ್ವಕಪ್ ವಿಜೇತರು

ಆಸ್ಟ್ರೇಲಿಯಾ: 5 (1987, 1999, 2003, 2007, 2015)

ಭಾರತ: 2 (1983, 2011

ವೆಸ್ಟ್ ಇಂಡೀಸ್: 2 (1975, 1979)

ಪಾಕಿಸ್ತಾನ: 1 (1992)

ಶ್ರೀಲಂಕಾ: 1 (1996)

ಇಂಗ್ಲೆಂಡ್: 1 (2019)