ಇಂಗ್ಲಿಷ್‌ ಮಾಧ್ಯಮದಿಂದ ಬಡ ಮಕ್ಕಳಿಗೆ ಲಾಭವಿಲ್ಲ’

0
183

ಭಾರತದಲ್ಲಿನ ಬಡ ಮಕ್ಕಳ ಕಲಿಕೆಗೆ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಂದ ಯಾವುದೇ ಲಾಭವಾಗುತ್ತಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಲಂಡನ್‌ (ಪಿಟಿಐ): ಭಾರತದಲ್ಲಿನ ಬಡ ಮಕ್ಕಳ ಕಲಿಕೆಗೆ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಂದ ಯಾವುದೇ ಲಾಭವಾಗುತ್ತಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಮನೆಯಲ್ಲಿ ಬೇರೆ ಭಾಷೆ ಮಾತನಾಡುವ ಪೋಷಕರ ಮಕ್ಕಳು, ಅದರಲ್ಲೂ ಎಳೆಯ ವಯಸ್ಸಿನ ಹಾಗೂ ಸೌಲಭ್ಯ ವಂಚಿತ ಮಕ್ಕಳಲ್ಲಿ ಪ್ರಾಥಮಿಕ ಶಾಲಾ ಹಂತದ ಕಲಿಕಾ ಕೌಶಲ ತೀರಾ ಕೆಳಮಟ್ಟದಲ್ಲಿದೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡುವ ಪಶ್ಚಿಮದ ದೇಶಗಳ ಮಕ್ಕಳ ಕಲಿಕೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಜ್ಞಾನಗ್ರಹಿಕೆ ಮತ್ತು ಕಲಿಕಾ ಸಂಭ್ರಮ, ಬಹುಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯ ಮಕ್ಕಳಲ್ಲಿ ಏಕೆ ಕಂಡುಬರುತ್ತಿಲ್ಲ ಎನ್ನುವುದನ್ನು ಕಂಡುಕೊಳ್ಳಲು ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ.

ಬ್ರಿಟನ್‌ನ ರೀಡಿಂಗ್‌ ಯೂನಿರ್ವಸಿಟಿಯ ಸಂಶೋಧಕರು, ಕರ್ನಾಟಕ, ಹೈದರಾಬಾದ್‌ ಮತ್ತು ನವದೆಹಲಿಯ ತಜ್ಞರ ಸಹಭಾಗಿತ್ವದಲ್ಲಿ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಿದ್ದಾರೆ.

ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪ್ರೊ. ಇಯಂತಿ ಸಿಂಪ್ಲಿ ಹಾಗೂ ಅವರ ಸಹೋದ್ಯೋಗಿಗಳು ದೆಹಲಿ, ಹೈದರಾಬಾದ್‌ ಮತ್ತು ಬಿಹಾರದಾದ್ಯಂತ ಪ್ರಾಥಮಿಕ ಶಾಲಾ ಹಂತದ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳ ಕಲಿಕಾ ಮಟ್ಟವನ್ನು ಅಧ್ಯಯನ ಮಾಡಿ ಈ ನಿರ್ಧಾರಕ್ಕೆ ಬಂದಿದ್ದಾರೆ.

‘ಬೋಧನಾ ಮಾಧ್ಯಮವು ಮಗುವಿನ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ. ಆದರೆ ಅದು ಉತ್ತಮವಾಗಿ ಕಲಿತಾಗ ಮಾತ್ರ. ಬೋಧನೆಯಲ್ಲಿ ಇಂಗ್ಲಿಷ್ ಅನ್ನೂ ಬಳಸಬಹುದು. ಆದರೆ, ಅದನ್ನು ಪ್ರಾಥಮಿಕ ಶಾಲಾ ಹಂತದಲ್ಲಿ ಬೋಧನೆಯ ಮಾಧ್ಯಮವಾಗಿ ಅಲ್ಲ’ ಎಂದು ಅವರು ಹೇಳಿದ್ದಾರೆ.