ಆ್ಯಪ್‌ ಸ್ಟೋರ್‌ನಿಂದ ಟಿಕ್‌ ಟಾಕ್‌ ತೆಗೆದುಹಾಕಿದ ಗೂಗಲ್‌, ಆ್ಯಪಲ್‌

0
347

ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಗೂಗಲ್‌ ಮತ್ತು ಆ್ಯಪಲ್‌ ತಮ್ಮ ಆ್ಯಪ್‌ ಸ್ಟೋರ್‌ನಿಂದ ಟಿಕ್‌ ಟಾಕ್‌ ಆ್ಯಪ್‌ ಅನ್ನು ತೆಗೆದು ಹಾಕಿವೆ.

ನವದೆಹಲಿ(ಪಿಟಿಐ): ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಗೂಗಲ್‌ ಮತ್ತು ಆ್ಯಪಲ್‌ ತಮ್ಮ ಆ್ಯಪ್‌ ಸ್ಟೋರ್‌ನಿಂದ ಟಿಕ್‌ ಟಾಕ್‌ ಆ್ಯಪ್‌ ಅನ್ನು ತೆಗೆದು ಹಾಕಿವೆ.

ಚೀನಾ ಮೂಲದ ಟಿಕ್‌ ಟಾಕ್‌ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡುವುದನ್ನು ನಿಷೇಧಿಸಬೇಕೆಂದು ಮದ್ರಾಸ್‌ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ನ್ಯಾಯಾಲಯದ ಈ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಕಾರಣ ಗೂಗಲ್‌ ಮತ್ತು ಆ್ಯಪಲ್‌ ಸಂಸ್ಥೆಗಳು ಈ ಕ್ರಮ ಕೈಗೊಂಡಿವೆ.

ಆದರೆ ಆ್ಯಪ್‌ನ ಬಗ್ಗೆ ಪ್ರತಿಕ್ರಿಯೆ ನೀಡಲು ಈ ಎರಡು ಸಂಸ್ಥೆಗಳು ನಿರಾಕರಿಸಿವೆ.

ಹೈಕೋರ್ಟ್ ಆದೇಶ ನೀಡಿದ ಬಳಿಕ ಕೇಂದ್ರ ಸರ್ಕಾರ ಗೂಗಲ್‌ ಮತ್ತು ಆ್ಯಪಲ್‌ ಸಂಸ್ಥೆಗಳಿಗೆ ಪತ್ರ ಬರೆದು ಆ್ಯಪ್‌ ಅನ್ನು ನಿಷೇಧಿಸುವಂತೆ ಕೋರಿತ್ತು.

ಈ ಆ್ಯಪ್‌ ಅನ್ನು ಇನ್ನು ಮುಂದೆ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಈಗಾಗಲೇ ಮೊಬೈಲ್‌ ಫೋನ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡವರು ಇದರ ಬಳಕೆ ಮುಂದುವರಿಸಬಹುದಾಗಿದೆ.

’ಮೊಬೈಲ್‌ ಫೋನ್‌ಗಳಲ್ಲಿ ಟಿಕ್‌ ಟಾಕ್‌ ಆ್ಯಪ್‌  ಹೊಂದಿರುವವರು ಅದನ್ನು ಶೇರ್‌ಇಟ್‌ ಮೊದಲಾದ ಆ್ಯಪ್‌ಗಳ ಮೂಲಕ ಇನ್ನೊಬ್ಬರಿಗೆ ಹಂಚಿಕೊಳ್ಳಬಹುದು. ಮತ್ತು ಅವರು ಅದನ್ನು ತಮ್ಮ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡು 
ಬಳಸಬಹುದಾಗಿದೆ‘ ಎಂದು ಟೆಕ್‌ ಎಆರ್‌ಸಿ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಫೈಸಲ್‌ ಕವೂಸಾ ಹೇಳಿದ್ದಾರೆ.

ಅಲ್ಲದೇ, ‘ಥರ್ಡ್‌ ಪಾರ್ಟಿ ಆ್ಯಪ್‌ ಸ್ಟೋರ್‌’ಗಳಾದ ಎಪಿಕೆ ಮಿರರ್‌ ಹಾಗೂ ಎಪಿಕೆಪ್ಯೂರ್‌ ಮೂಲಕ ಟಿಕ್‌ಟಾಕ್‌ ಆ್ಯಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಆ್ಯಪ್‌ ಅನ್ನು ನಿಷೇಧಿಸಿವಂತೆ ಏಪ್ರಿಲ್‌ 3ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ಮದ್ರಾಸ್‌ ಹೈಕೋರ್ಟ್‌, ‘ಇಂತಹ ಆ್ಯಪ್‌ಗಳಲ್ಲಿ ಅಶ್ಲೀಲ ವಿಡಿಯೊಗಳು ಲಭ್ಯವಿರುವ ಕುರಿತು ಮಾಧ್ಯಮ ವರದಿಗಳಲ್ಲಿ ಸ್ಪಷ್ಟವಾಗಿದೆ‘ ಎಂದೂ ಹೇಳಿತ್ತು.

ಟಿಕ್‌ ಟಾಕ್‌ ಮೂಲಕ ದಾಖಲಿಸಿರುವ ವಿಡಿಯೊಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು ಎಂದೂ ನ್ಯಾಯಾಲಯ ಹೇಳಿತ್ತು. ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಈ ಆ್ಯಪ್‌ ಭಾರಿ ಜನಪ್ರಿಯವಾಗಿತ್ತು.