ಆಸಿಯಾನ್ ಶೃಂಗದಲ್ಲಿ ಭಾರತ

0
46

ನವೆಂಬರ್ ಎರಡನೇ ವಾರದಲ್ಲಿ ಮನಿಲಾದಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಹತ್ವದ ಮಾತುಕತೆ ನಡೆಯಿತು. ಉಭಯ ದೇಶಗಳ ನಡುವಿನ ಸಂಬಂಧ ಸಕಾರಾತ್ಮಕ ಬೆಳವಣಿಗೆ ಉದ್ದೇಶದಿಂದ ವೃದ್ಧಿಯಾಗುತ್ತಿದೆ. ಏಷ್ಯಾ ಖಂಡದ ಒಳಿತಿಗೆ ನಮ್ಮ ಸಂಬಂಧಗಳು ಕೊಡುಗೆ ನೀಡಲಿವೆ ಎಂದು ಉಭಯ ನಾಯಕರು ಹೇಳುವ ಮೂಲಕ ಗಟ್ಟಿಗೊಂಡ ಸಂಬಂಧವನ್ನು ತೆರೆದಿಟ್ಟರು. ಭದ್ರತೆ, ರಕ್ಷಣೆಗೆ ಸಂಬಂಧಿಸಿದಂತೆ ದೀರ್ಘ ಚರ್ಚೆ ನಡೆಸುವ ಮೂಲಕ ಪರೋಕ್ಷವಾಗಿ ಚೀನಾ, ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ನೆರೆರಾಷ್ಟ್ರಗಳೊಡನೆ ಬಾಂಧವ್ಯ ವೃದ್ಧಿ, ವಿಶ್ವದ ಮಹಾಶಕ್ತಿಗಳೊಡನೆ ಸ್ನೇಹಹಸ್ತ, ಚೀನಾದೊಂದಿಗೆ ಚತುರ ನಡೆ, ಡೋಕ್ಲಾಂ ವಿವಾದಕ್ಕೆ ರಾಜತಾಂತ್ರಿಕವಾಗಿ ದಿಟ್ಟ ಉತ್ತರ-ಹೀಗೆ ಭಾರತದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಮನದಟ್ಟು ಮಾಡಿಸುವ ಮೂಲಕ ವಿದೇಶಾಂಗ ನೀತಿಗೆ ಮತ್ತಷ್ಟು ಬಲ ಬಂದಿರುವುದು ಈ ವರ್ಷದ ಮಹತ್ವದ ಬೆಳವಣಿಗೆ. ನಮ್ಮ ಅಭಿಪ್ರಾಯ, ನಿಲುವುಗಳಿಗೆ ಮನ್ನಣೆ ದೊರೆಯುತ್ತ ವಿವಾದಗಳು ಒಂದೊಂದಾಗಿ ಪರಿಹಾರವಾಗುತ್ತಿರುವುದು ಸಮಾಧಾನಕರ ಬೆಳವಣಿಗೆ. ಪಾಕಿಸ್ತಾನ ಹೊಸ ಕಿತಾಪತಿ ನಡೆಸದಂತೆ ಅಂತಾರಾಷ್ಟ್ರೀಯ ಒತ್ತಡ ತಂದಿರುವುದು, ಭಯೋತ್ಪಾದನೆ ವಿರುದ್ಧ ಸಮರಕ್ಕೆ ಶಕ್ತಿ ತುಂಬಿರುವುದು ಪ್ಲಸ್ ಪಾಯಿಂಟ್.

ಸ್ನೇಹ, ಸಹಕಾರದ ಹಾದಿ ವಿಸ್ತರಣೆ

ವಿದೇಶಾಂಗ ವ್ಯವಹಾರಗಳ ಜ್ಞಾನ ಇಲ್ಲದ ನರೇಂದ್ರ ಮೋದಿ ಇದನ್ನೆಲ್ಲ ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಎತ್ತಲಾಗುತ್ತಿತ್ತು. ಆದರೆ, ಪ್ರಮಾಣವಚನ ಸ್ವೀಕಾರ ಸಮಾರಂಭದಿಂದಲೇ ಭಿನ್ನ ಹಾಗೂ ವಿಶಿಷ್ಟ ನಡೆ ಅನುಸರಿಸಿದ ಮೋದಿ ಕಳೆದ ಮೂರು ವರ್ಷಗಳಲ್ಲಿ ವಿದೇಶಾಂಗ ನೀತಿಯ ದಿಕ್ಕನ್ನು ಸ್ಪಷ್ಟವಾಗಿ ಮಂಡಿಸುತ್ತ ಭಾರತದ ಶಕ್ತಿಯನ್ನು ಅರ್ಥಮಾಡಿಕೊಂಡು ಸಹಕರಿಸಿದವರೊಂದಿಗೆ ನಮ್ಮ ಸ್ನೇಹವೆಂಬ ಸಂದೇಶ ನೀಡುವಲ್ಲಿ ಯಶಸ್ಸು ಕಂಡಿದ್ದಾರೆನ್ನಬೇಕು. ಭಾರತದ ನೆರೆಯ ರಾಷ್ಟ್ರಗಳಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದ ಚೀನಾದ ತಂತ್ರಕ್ಕೆ ತಿರುಗೇಟು ನೀಡುತ್ತ ನೆರೆರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತ ಸ್ನೇಹಹಸ್ತ ವಿಸ್ತರಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ಈ ವರ್ಷ ಅಮೆರಿಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಆಪ್ತಮಿತ್ರವೆಂದು ಕರೆದರೆ, ಜಪಾನಿನ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡಿ ಬಾಂಧವ್ಯ ಗಟ್ಟಿಗೊಳಿಸಿದ್ದಾರೆ.

ಬ್ರಿಕ್ಸ್ ಹವಾ

ಸೆ.3ರಿಂದ 5ರವರೆಗೆ ಚೀನಾದ ಕ್ಸಿಯಾಮೆನ್​ನಲ್ಲಿ ನಡೆದ ಬ್ರಿಕ್ಸ್​ನ 9ನೇ ಶೃಂಗಸಭೆಯಲ್ಲೂ ತನ್ನ ನಿಲುವುಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಭಾರತ ಅವುಗಳಿಗೆ ಮನ್ನಣೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಡೋಕ್ಲಾಂ ವಿವಾದ ಬಗೆಹರಿದ ಬೆನ್ನಲ್ಲೇ ಈ ಶೃಂಗದಲ್ಲಿ ಪಾಲ್ಗೊಳ್ಳಲು ಚೀನಾಗೆ ತೆರಳಿದ ಪ್ರಧಾನಿ ಮೋದಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಭವಿಷ್ಯದಲ್ಲಿ ಡೋಕ್ಲಾಂನಂತಹ ಮತ್ತೊಂದು ಬಿಕ್ಕಟ್ಟು ಎದುರಾಗದಂತೆ ತಡೆಯುವುದಕ್ಕಾಗಿ ಪಂಚಶೀಲ ತತ್ವಕ್ಕೆ ಮರಳುವ ಮಹತ್ವದ ಸಂಧಾನ ಸೂತ್ರವೊಂದಕ್ಕೆ ಭಾರತ-ಚೀನಾ ಸಹಮತದ ಮುದ್ರೆ ಒತ್ತಿದವು.

1. ದಕ್ಷಿಣ ಏಷ್ಯಾದ ಪುಟ್ಟ ನೆರೆನಾಡುಗಳಲ್ಲಿ ಭಾರತದ ಬಗ್ಗೆ ಸದ್ಭಾವನೆ ಮೂಡಿಸುತ್ತಲೇ ಪಾಕಿಸ್ತಾನಕ್ಕೆ ತನ್ನ ಮಿತಿಗಳ ಅರಿವು ಮಾಡಿಕೊಡುವುದು.

2. ಚೀನಾದ ಜತೆ ಬಾಂಧವ್ಯ ಸುಧಾರಿಸಿ ಕೊಳ್ಳುವುದು, ಆದರೆ ಈ ಬಾಂಧವ್ಯ ಅ ಕುಟಿಲ ದೇಶಕ್ಕೆ ಮೇಲುಗೈ ಒದಗಿಸದಂತೆ ನೋಡಿಕೊಳ್ಳುವುದು.

3. ಅಮೆರಿಕಾ, ಜಪಾನ್​ನಂತಹ ಮಹತ್ವದ ದೇಶಗಳ ಸ್ನೇಹ ಮತ್ತು ಬೆಂಬಲವನ್ನು ಯಾವ ಹಿಂಜರಿಕೆಯೂ ಇಲ್ಲದೇ ಭಾರತದ ಹಿತಾಸಕ್ತಿಗೆ ಅನುಕೂಲವಾಗಿ ಬಳಸಿಕೊಳ್ಳುವುದು ಮತ್ತು ಆ ಮೂಲಕ ಅಂತರರಾಷ್ಟ್ರೀಯ ರಂಗದಲ್ಲಿ ಭಾರತಕ್ಕೆ ಸಿಗಬೇಕಾದ ಮಹತ್ವವನ್ನು ದೊರಕಿಸಿಕೊಡುವುದು.

ಆಪ್ತಮಿತ್ರರು

ಬರಾಕ್ ಒಬಾಮ ಅಧ್ಯಕ್ಷಾವಧಿ ಮುಗಿಯುತ್ತಿದ್ದಂತೆ ಅಮೆರಿಕ ಭಾರತದೊಂದಿಗೆ ಮುಂಚೆಯ ಬಾಂಧವ್ಯ ಉಳಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ. ಆದರೆ, ಜಾಗತಿಕ ಶಕ್ತಿಯಾಗಿ ಮುನ್ನುಗ್ಗುತ್ತಿರುವ ಭಾರತದ ಸಹಕಾರದ ಹೊರತು ಪ್ರಮುಖ ರಾಜತಾಂತ್ರಿಕ ಸಮೀಕರಣಗಳು ಸಾಕಾರಗೊಳ್ಳಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಬಹುಬೇಗ ಕಂಡುಕೊಂಡ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ(ಜ.20) ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಭಾರತವನ್ನು ಆಪ್ತಮಿತ್ರನನ್ನಾಗಿಸಿಕೊಂಡರು. ಬರೀ ಬಾಯಿಮಾತಿನಲ್ಲಿ ಇದನ್ನು ಹೇಳದೆ ಭಾರತದ ನಿಲುವುಗಳಿಗೆ ಬೆಂಬಲವಾಗಿ ನಿಂತರು. ಅಮೆರಿಕ ಭಯೋತ್ಪಾದನೆ ನಿಗ್ರಹದ ದೃಷ್ಟಿಯಿಂದ ನೀಡುತ್ತಿರುವ ಆರ್ಥಿಕ ನೆರವನ್ನು ಪಾಕಿಸ್ತಾನ ಭಾರತವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿದೆ ಎಂಬ ಭಾರತದ ಕಳವಳವನ್ನು ಅರ್ಥಮಾಡಿಕೊಂಡು ಪಾಕ್​ಗೆ ನೀಡುತ್ತಿದ್ದ ನೆರವಿನಲ್ಲಿ ಭಾರಿ ಕಡಿತ ಮಾಡಿದೆ. ಅಲ್ಲದೆ, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಪಾಕ್​ಗೆ ಸ್ಪಷ್ಟ ಎಚ್ಚರಿಕೆ ನೀಡಿದೆ ಅಮೆರಿಕ. ‘ಮೋದಿ ನನ್ನ ಒಳ್ಳೆಯ ಸ್ನೇಹಿತ ಹಾಗೂ ಜಂಟಲ್​ವ್ಯಾನ್. ಅವರು ಭಾರತದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪರಸ್ಪರ ಸಹಕಾರದೊಂದಿಗೆ ಕಾರ್ಯ ಮುಂದುವರಿಸುತ್ತೇವೆ’ ಎಂಬ ಟ್ರಂಪ್ ಮಾತುಗಳು ಸ್ನೇಹವಿಸ್ತಾರಕ್ಕೆ ಸಾಕ್ಷಿ.

ಶ್ವೇತಭವನ ಭೇಟಿ: ಜೂನ್ 27ರಂದು ಮೋದಿ ಅಮೆರಿಕ ಭೇಟಿ ವೇಳೆ ಶ್ವೇತಭವನದಲ್ಲಿ ಟ್ರಂಪ್​ರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಯಿತು.

ಇಸ್ರೇಲ್​ನಲ್ಲಿ ಜಲಮಂತ್ರ

ಇಸ್ರೇಲ್ ಅಸ್ತಿತ್ವಕ್ಕೆ ಬಂದು 70 ವರ್ಷಗಳಾದರೂ ಇದುವರೆಗೆ ಯಾವ ಭಾರತೀಯ ಪ್ರಧಾನ ಮಂತ್ರಿಯೂ ಆ ದೇಶಕ್ಕೆ ಭೇಟಿ ನೀಡಿರಲಿಲ್ಲ. ನರೇಂದ್ರ ಮೋದಿ ಇಸ್ರೇಲ್​ಗೆ ಭೇಟಿ ನೀಡಿದ (ಜುಲೈ ಮೊದಲ ವಾರದಲ್ಲಿ) ಮೊದಲ ಭಾರತೀಯ ಪ್ರಧಾನಿ ಎನಿಸಿದರು. ಕೃಷಿ, ಆರೋಗ್ಯ, ರಕ್ಷಣೆ ಸೇರಿದಂತೆ ಹಲವು ರಂಗಗಳ ಮಹತ್ವದ ಒಪ್ಪಂದಗಳಾದವು. ‘ಆಪ್ಕಾ ಸ್ವಾಗತ್ ಹೈ ಮೇರಾ ದೋಸ್ತ್’- ಎಂದು ಮೋದಿಯನ್ನು ಹಿಂದಿಯಲ್ಲಿ ಸ್ವಾಗತಿಸುವ ಮೂಲಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಾಂಧವ್ಯಕ್ಕೆ ಆಕಾಶವೇ ಮಿತಿ ಎಂದರು. ಅಲ್ಲದೆ, ಆಂತರಿಕ ಹಾಗೂ ಬಾಹ್ಯ ಭಯೋತ್ಪಾದಕರ ನಿಗ್ರಹ ಕಾರ್ಯದಲ್ಲಿ ಭಾರತಕ್ಕೆ ಇಸ್ರೇಲ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು. ನೀರಿನ ಮಿತವ್ಯಯ ಬಳಕೆ ಮೂಲಕ ಕೃಷಿ ಕ್ಷೇತ್ರದಲ್ಲಿ ಜಾಗತಿಕ ಸಾಧನೆ ಮಾಡಿರುವ ಇಸ್ರೇಲ್ ಮಾದರಿಯನ್ನು ಭಾರತದಲ್ಲಿ ಅನುಸರಿಸಲಾಗುವುದು ಎಂದು ಮೋದಿ ಹೇಳಿದ್ದು, ಪರಸ್ಪರ ಕೊಡುಕೊಳ್ಳುವಿಕೆಯನ್ನು ಪ್ರತಿಪಾದಿಸಿತು.

ನದಿತೀರದಲ್ಲಿ ಡಿಪ್ಲೋಮಸಿ…

ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತ ಭೇಟಿಯನ್ನು (ಸೆ.13, 14) ಅಹ್ಮದಾಬಾದ್ ಮೂಲಕ ಆರಂಭಿಸಿದರು. ಅಲ್ಲದೆ, ಭಾರತದ ರೈಲ್ವೆ ಸಾರಿಗೆ ವ್ಯವಸ್ಥೆಯ ದಿಕ್ಕನ್ನೇ ಬದಲಿಸುವ ನಿರೀಕ್ಷೆ ಹುಟ್ಟಿಸಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆಯೂ ನೆರವೇರಿತು. ಚೀನಾದ ಒನ್ ಬೆಲ್ಟ್ ಒನ್ ರೋಡ್​ಗೆ

(ಒಬಿಒಆರ್) ಪರ್ಯಾಯವಾಗಿ ಫ್ರೀಡಮ್ ಕಾರಿಡಾರ್ ಅನುಷ್ಠಾನ ಹಾಗೂ ಭಾರತ ಹಾಗೂ ಜಪಾನ್ ಮಧ್ಯೆ ವಿಪತ್ತು ನಿರ್ವಹಣೆ, ಕೌಶಲ ಅಭಿವೃದ್ಧಿ, ಸಂಪರ್ಕ, ವಾಣಿಜ್ಯೋದ್ಯಮ, ಹೂಡಿಕೆ, ಶಿಕ್ಷಣ ಮತ್ತು ಕ್ರೀಡಾ ವಲಯಗಳಿಗೆ ಸಂಬಂಧಿಸಿದಂತೆ 15 ಒಪ್ಪಂದಗಳು ಏರ್ಪಟ್ಟವು.

ಡೋಕ್ಲಾಂ ಕಿರಿಕಿರಿಗೆ ಉತ್ತರ

ಸಿಕ್ಕಿಂ ಗಡಿಯ ಡೋಕ್ಲಾಂ ಬಿಕ್ಕಟ್ಟಿನ ವಿಷಯದಲ್ಲಿ ಯುದ್ಧ ನಡೆದರೂ ಸರಿಯೇ ಗಡಿಯಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಭಾರತದ ಹಠಕ್ಕೆ ಶರಣಾದ ಚೀನಾ, ಭಾರತದಾದ್ಯಂತ ನಡೆಯುತ್ತಿರುವ ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಮತ್ತು ಚಳಿಗಾಲಕ್ಕೆ ಬೆದರಿ ವಿವಾದಿತ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ ಮೊದಲು ತಾನೇ ಹಿಂದೆ ಸರಿಯುವುದಾಗಿ ಆಗಸ್ಟ್ 28ರಂದು ಘೋಷಿಸಿತು. ರಾಜತಾಂತ್ರಿಕ ಮಾತುಕತೆಯ ಮೂಲಕ ಡೋಕ್ಲಾಂನಲ್ಲಿ ಜೂನ್ 16ಕ್ಕೂ ಮುನ್ನ ಇದ್ದ ಸ್ಥಾನಕ್ಕೆ ಸೇನಾಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಉಭಯ ರಾಷ್ಟ್ರಗಳು ಸಮ್ಮತಿಸುವ ಮೂಲಕ ಉದ್ವಿಗ್ನ ಪರಿಸ್ಥಿತಿ ತಿಳಿಯಾಯಿತು. ಡೊಕ್ಲಾಂನಲ್ಲಿ ಚೀನಾ ರಸ್ತೆ ನಿರ್ವಣಕ್ಕೆ ಮುಂದಾಗಿದ್ದಕ್ಕೆ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಡೋಕ್ಲಾಂಗೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿದ್ದ ಭಾರತೀಯ ಸೇನಾ ಶಿಬಿರಗಳನ್ನು ಚೀನಾ ಯೋಧರು ಧ್ವಂಸಗೊಳಿಸಿದ ಬಳಿಕ ಬಿಕ್ಕಟ್ಟು ಉಲ್ಬಣಿಸಿತ್ತು.

ಹೈದರಾಬಾದ್​ನಲ್ಲಿ ಇವಾಂಕಾ ಮೋಡಿ

ನವೆಂಬರ್ ಕೊನೆವಾರದಲ್ಲಿ ಹೈದರಾಬಾದ್​ನಲ್ಲಿ ಮೂರು ದಿನಗಳ ಕಾಲ ನಡೆದ ನಡೆದ ಜಾಗತಿಕ ಉದ್ಯಮಶೀಲತಾ ಸಮಾವೇಶದಲ್ಲಿ ಪಾಲ್ಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಪುತ್ರಿ ಇವಾಂಕಾ, ‘ವಿಶ್ವಕ್ಕೆ ಭಾರತೀಯರೇ ಸ್ಪೂರ್ತಿ ’ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಮೂಲದ ಸಂಸ್ಥೆ ತಯಾರಿಸಿರುವ ಮಿತ್ರಾ ರೊಬೋಟ್ ಉದ್ಘಾಟಿಸಿದರು. ಇವಾಂಕಾ ನೇತೃತ್ವದ ಅಮೆರಿಕ ನಿಯೋಗದಲ್ಲಿ 38 ರಾಜ್ಯಗಳ 350 ಪ್ರತಿನಿಧಿಗಳು ಭಾಗಿಯಾಗಿದ್ದರು.

 

ವಿದೇಶಾಂಗ ನೀತಿಯ ಮೈಲಿಗಲ್ಲುಗಳು

# ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ರಂಗದಲ್ಲಿ ಏಕಾಂಗಿಯಾಗಿಸುವುದು ಹಾಗೂ ಆ ಮೂಲಕ ಆ ಭಯೋತ್ಪಾದಕ ದೇಶದ ಮೇಲೆ ಒತ್ತಡ ಹೇರಿ ಅದು ತನ್ನ ದುರುಳತನವನ್ನು ತೊರೆಯುವಂತೆ ಮಾಡುವುದು.

# ಮಹತ್ವಾಕಾಂಕ್ಷಿ ಚೀನಾ ವಿರುದ್ಧ ಭಾರತದ ರಾಜತಾಂತ್ರಿಕ ಹಾಗೂ ಆರ್ಥಿಕ ಸ್ಥಾನಮಾನಗಳನ್ನು ಸದೃಢಗೊಳಿಸಿಕೊಳ್ಳುವುದು.

# ಭಾರತದ ಆರ್ಥಿಕತೆಯ ತ್ವರಿತ ಅಭಿವೃದ್ಧಿಗೆ ಅತ್ಯಗತ್ಯವಾದ ವಿದ್ಯುತ್ ಉತ್ಪಾದನೆ ಹಾಗೂ ವಿದೇಶಿ ಬಂಡವಾಳ ಹೂಡಿಕೆಯ ಹೊಸ ಸಾಧ್ಯತೆಗಳನ್ನು ಶೋಧಿಸುವುದು.

# ಭಾರತದ ರಕ್ಷಣಾ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸದಾ ಅಗತ್ಯ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವುದು.