ಭಾರತೀಯ ರಿಸರ್ವ್ ಬ್ಯಾಂಕ್ನ ಮೀಸಲು ನಿಧಿಯ ಸೂಕ್ತ ಪ್ರಮಾಣ ನಿರ್ಧರಿಸಲು ನಿರ್ದೇಶಕ ಮಂಡಳಿ ರಚಿಸಲು ಉದ್ದೇಶಿಸಿರುವ ಪರಿಣತರ ಸಮಿತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ.
ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ನ ಮೀಸಲು ನಿಧಿಯ ಸೂಕ್ತ ಪ್ರಮಾಣ ನಿರ್ಧರಿಸಲು ನಿರ್ದೇಶಕ ಮಂಡಳಿ ರಚಿಸಲು ಉದ್ದೇಶಿಸಿರುವ ಪರಿಣತರ ಸಮಿತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ.
ನವೆಂಬರ್ 19 ರ ಸೋಮವಾರದ ಸಭೆಯಲ್ಲಿ ಸಮಿತಿ ರಚಿಸುವ ನಿರ್ಧಾರಕ್ಕೆ ಬರಲಾಗಿದೆ. ಸಮಿತಿಯು ಯಾವ ವಿಷಯಗಳ ಬಗ್ಗೆ ವರದಿ ನೀಡಬೇಕು ಮತ್ತು ಸಮಿತಿಗೆ ಯಾರನ್ನು ನೇಮಕ ಮಾಡಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತು ಆರ್ಬಿಐ ಜಂಟಿಯಾಗಿಯೇ ನಿರ್ಧರಿಸಲಿವೆ.
ಸದ್ಯಕ್ಕೆ ಆರ್ಬಿಐ ಬಳಿ 9.69 ಲಕ್ಷ ಕೋಟಿ ಮೀಸಲು ನಿಧಿಯ ಸಂಗ್ರಹ ಇದೆ. ಇದನ್ನು ಜಾಗತಿಕ ಮಟ್ಟಕ್ಕೆ ಇಳಿಸಬೇಕು ಎಂದು ಹಣಕಾಸು ಸಚಿವಾಲಯವು ಆರ್ಬಿಐ ಮೇಲೆ ಒತ್ತಡ ತರುತ್ತಿದೆ. ಆರ್ಬಿಐನ ಸ್ವತಂತ್ರ ನಿರ್ದೇಶಕ ಎಸ್. ಗುರುಮೂರ್ತಿ ಅವರೂ ಈ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಸಿಸಿಬಿ ವಿಸ್ತರಣೆ: ಬ್ಯಾಂಕ್ಗಳು ಹೊಂದಿರಬೇಕಾದ ಕಡ್ಡಾಯ ಬಂಡವಾಳ ಮೀಸಲು (ಸಿಸಿಬಿ) ಜಾರಿ ವಿಸ್ತರಣೆ ಮಾಡುವುದರಿಂದ, ಈ ವರ್ಷ ಬ್ಯಾಂಕ್ಗಳ ಮೇಲೆ 35 ಸಾವಿರ ಕೋಟಿಗಳಷ್ಟು ಹೊರೆ ತಗ್ಗಲಿದೆ. ಬ್ಯಾಂಕ್ಗಳ ಹಣಕಾಸು ಸ್ಥಿತಿಯೂ ಸುಧಾರಿಸಲಿದೆ ಎಂದು ಕ್ರಿಸಿಲ್ ಹೇಳಿದೆ.