ಆರ್‌ಬಿಐ ಮಾಜಿ ಡೆಪ್ಯುಟಿ ಗವರ್ನರ್‌ “ಸುಬೀರ್‌ ಗೋಕರ್ಣ” ನಿಧನ

0
23

ಖ್ಯಾತ ಆರ್ಥಿಕ ತಜ್ಞ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಡೆಪ್ಯುಟಿ ಗವರ್ನರ್‌ ಆಗಿದ್ದ ಸುಬೀರ್‌ ಗೋಕರ್ಣ (60) ಅವರು ನಿಧನರಾಗಿದ್ದಾರೆ.

ನವದೆಹಲಿ (ಪಿಟಿಐ): ಖ್ಯಾತ ಆರ್ಥಿಕ ತಜ್ಞ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಡೆಪ್ಯುಟಿ ಗವರ್ನರ್‌ ಆಗಿದ್ದ ಸುಬೀರ್‌ ಗೋಕರ್ಣ (60) ಅವರು ನಿಧನರಾಗಿದ್ದಾರೆ.

ಕ್ಯಾನ್ಸರ್‌ಪೀಡಿತರಾಗಿದ್ದ ಅವರು ಅಮೆರಿಕದಲ್ಲಿ ಜುಲೈ 30 ರ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಜೋತ್ಸ್ನಾ ಬಾಪಟ್‌ ಮತ್ತು ಮಗಳು ಕನಕ ಗೋಕರ್ಣ ಇದ್ದಾರೆ.

2009ರಲ್ಲಿ ಇವರು ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಆಗಿ ನೇಮಕಗೊಂಡು 2012ರ ಡಿಸೆಂಬರ್‌ವರೆಗೆ ಅಧಿಕಾರದಲ್ಲಿ ಇದ್ದರು.

ಆ ಸಮಯ ದಲ್ಲಿನ ಅತಿ ಕಿರಿಯ ಡೆಪ್ಯುಟಿ ಗವರ್ನರ್‌ ಇವರಾಗಿದ್ದರು. 2015ರಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಅದಕ್ಕೂ ಮುಂಚೆ ಅವರು ದೆಹಲಿಯಲ್ಲಿನ ಬ್ರೂಕಿಂಗ್ಸ್‌ ಇಂಡಿಯಾದಲ್ಲಿ ಸಂಶೋಧನಾ ನಿರ್ದೇಶಕರಾಗಿದ್ದರು.

1959ರಲ್ಲಿ ಜನಿಸಿದ ಸುಬೀರ್‌ ಗೋಕರ್ಣ ಅವರು ಮುಂಬಯಿನ ಸೈಂಟ್‌ ಕ್ಸೇವಿಯರ್‌ ಕಾಲೇಜಿನಲ್ಲಿ ಎಕನಾಮಿಕ್ಸ್‌ನಲ್ಲಿ ಪದವಿ, ದಿಲ್ಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಗಳಿಸಿದ್ದಾರೆ. ಒಹಿಯೊದ ಕೇಸ್‌ ವೆಸ್ಟರ್ನ್‌ ರಿಸರ್ವ್‌ ಯೂನಿವರ್ಸಿಟಿಯಿಂದ ಪಿಎಚ್‌ಡಿ ಪಡೆದಿದ್ದಾರೆ. ಅಮೆರಿಕದ ಯಾಲೆ ವಿಶ್ವ ವಿದ್ಯಾಲಯದಲ್ಲಿ ವರ್ಷದ ತನಕ ಶೈಕ್ಷಣಿಕ ಉಪನ್ಯಾಸ ನೀಡಿದ್ದಾರೆ. ಕ್ರಿಸಿಲ್‌ನ ಸಂಶೋಧನೆ ಮತ್ತು ಮಾಹಿತಿ ಬಿಸಿನೆಸ್‌ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.