ಆರ್‌ಬಿಐ ಡೆಪ್ಯುಟಿ ಗವರ್ನರ್ “ವಿರಲ್ ಆಚಾರ್ಯ” ರಾಜೀನಾಮೆ

0
51

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಪ ಗವರ್ನರ್ ವಿರಲ್ ಆಚಾರ್ಯ ಅವಧಿಗೆ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮುಂಬಯಿ:  ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಪ ಗವರ್ನರ್ ವಿರಲ್ ಆಚಾರ್ಯ ಅವಧಿಗೆ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ನ್ಯೂಯಾರ್ಕ್‌ ಯುನಿವರ್ಸಿಟಿಯ ಸ್ಟರ್ನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಆರ್‌ಬಿಐಗೆ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. 2020ರ ಜನವರ 20ಕ್ಕೆ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿತ್ತು. 

ಆರ್‌ಬಿಐನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಆಪ್ತರಾಗಿದ್ದ ವಿರಲ್ ಆಚಾರ್ಯ, ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿದ್ದಾರೆ.

ವಿರಳ್​ ಆಚಾರ್ಯ ಅವರು 2017ರ ಜನವರಿ 23ರಂದು ಆರ್​ಬಿಐ ಡೆಪ್ಯುಟಿ ಗೌರ್ನರ್​ ಆಗಿ ಮೂರು ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದರು. ಆರ್​​ಬಿಐ ನಲ್ಲಿ ನಡೆದಿದೆ ಎನ್ನಲಾದ ಸರ್ಕಾರದ ಹಸ್ತಕ್ಷೇಪ ವಿರೋಧಿಸುತ್ತಿದ್ದ ಇವರು ಬ್ಯಾಂಕ್​ನ ಸ್ವಯಂ ಆಡಳಿತದ ಪ್ರಾಮುಖ್ಯತೆಯ ಬಗ್ಗೆ 2018ರ ಅಕ್ಟೋಬರ್​ನಲ್ಲಿ ಧ್ವನಿ ಎತ್ತಿದ್ದರು. ಆ ಸಮಯದಲ್ಲಿ ಆರ್​ಬಿಐ ಮತ್ತು ಕೇಂದ್ರ ಸರ್ಕಾರದ ಮಧ್ಯ ಹಲವು ವಿಚಾರಗಳ ಕಾರಣಕ್ಕೆ ಶೀತಲ ಸಮರ ನಡೆಯುತ್ತಿತ್ತು. ಅದರಲ್ಲೂ ಆರ್​ಬಿಐನಿಂದ ಹೆಚ್ಚುವರಿ ನಿಧಿ ಬಿಡುಗಡೆ ಸಂಬಂಧ ವಿರೋಧವಿತ್ತು.

ಆರ್​ಬಿಐನ ಹೆಚ್ಚುವರಿ ಸಾಲ ನೀಡುವ ವಿಚಾರ ಸೇರಿ ಹಲವು ವಿಷಯಗಳಲ್ಲಿ ಊರ್ಜಿತ್​ ಪಟೇಲ್​ ಮತ್ತು ಕೇಂದ್ರ ಸರ್ಕಾರದ ನಡುವೆ ಬಿರುಕು ಮೂಡಿತ್ತು. ಆಗ ವಿರಳ್​ ಆಚಾರ್ಯ ಕೂಡ ಊರ್ಜಿತ್ ಪಟೇಲ್​ ಪರವೇ ನಿಂತಿದ್ದರು. ಆರ್​ಬಿಐ ಪ್ರಮುಖ ನಿರ್ಧಾರಗಳಲ್ಲಿ ಕೇಂದ್ರದ ಹಸ್ತಕ್ಷೇಪವನ್ನು ಇವರಿಬ್ಬರೂ ಇಷ್ಟಪಡುತ್ತಿರಲಿಲ್ಲ.
ವಿರಳ್ ಆಚಾರ್ಯ ಸಾರ್ವಜನಿಕವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕೇಂದ್ರ ಬ್ಯಾಂಕ್​ನ ನೀತಿಗಳನ್ನು ದುರ್ಬಲಗೊಳಿಸಲು ಸರ್ಕಾರ ಬಯಸುತ್ತಿದೆ ಎಂದಿದ್ದರು. ಊರ್ಜಿತ್​ ಪಟೇಲ್​ ನಿರ್ಗಮದ ನಂತರ ಅಧಿಕಾರ ವಹಿಸಿಕೊಂಡಿರುವ ಶಕ್ತಿಕಾಂತ್​ ದಾಸ್​ ಅವರ ವಿರುದ್ಧವೂ ಆಚಾರ್ಯ ಧ್ವನಿ ಎತ್ತಿದ್ದರು. ನಿಧಾನ ಗತಿಯ ಬೆಳವಣಿಗೆ ಮತ್ತು ಹಣದುಬ್ಬರ ಸಹಿಸಲು ಕಷ್ಟವಾಗುತ್ತಿದೆ ಎಂದಿದ್ದರು.

ಕಳೆದ ವರ್ಷ ಆರ್‌ಬಿಐ ಸಭೆಗಳಲ್ಲಿ ಸರಕಾರದ ವಿರುದ್ಧ ತೀವ್ರವಾಗಿ ಹರಿಹಾಯುತ್ತಿದ್ದ ವಿರಲ್ ಆಚಾರ್ಯ, ಅಂದೇ ಪದತ್ಯಾಗ ಮಾಡುವರೆಂದು ನಿರೀಕ್ಷಿಸಲಾಗಿತ್ತು. ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬಳಿಕ ಆಚಾರ್ಯ ಕೂಡ ರಾಜೀನಾಮೆ ನೀಡುವರೆಂದು ನಿರೀಕ್ಷಿಸಲಾಗಿತ್ತು. 

ಆದರೆ ಪಟೇಲ್ ನಿರ್ಗಮನದ ನಂತರ ಆರ್‌ಬಿಐನ ಮೂರು ಹಣಕಾಸು ನೀತಿ ಮರುಪರಿಶೀಲನಾ ಸಭೆಗಳಲ್ಲಿ ವಿರಲ್ ಆಚಾರ್ಯ ಭಾಗವಹಿಸಿದ್ದರು. ಅದರೊಂದಿಗೆ ಎಲ್ಲ ಬಿಕ್ಕಟ್ಟು ಅಂತ್ಯವಾಗಿತ್ತೆಂದು ಭಾವಿಸಲಾಗಿತ್ತು. 

ಆಚಾರ್ಯ ಅವರು ತಮ್ಮ ಮುಂದಿನ ಯೋಜನೆಗಳನ್ನು ಬಹಿರಂಗಪಡಿಸಿಲ್ಲವಾದರೂ ಶಿಕ್ಷಣ ಕ್ಷೇತ್ರಕ್ಕೆ ಮರಳುವರೆಂದು ನಿರೀಕ್ಷಿಸಲಾಗಿದೆ. ಅಮೆರಿಕ ಶೈಕ್ಷಣಿಕ ವರ್ಷಾರಂಭದ ಹೊತ್ತಿಗೇ ವಿರಲ್ ಆಚಾರ್ಯ ಆರ್‌ಬಿಐಗೆ ರಾಜೀನಾಮೆ ನೀಡಿರುವುದು ಕಾಕತಾಳೀಯವಾಗಿದೆ. ಅವರ ಕುಟುಂಬ ಈಗಲೂ ಅಮೆರಿಕದಲ್ಲೇ ಇದೆ. 

ವಿರಲ್ ಆಚಾರ್ಯ ಹುದ್ದೆಗೆ ರಾಜೀನಾಮೆ ನೀಡುವ ಇಂಗಿತವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ತಿಳಿಸಿದ್ದರು. ದಾಸ್ ಈ ವಿಚಾರವನ್ನು ವಿತ್ತ ಸಚಿವಾಲಯಕ್ಕೆ ತಿಳಿಸಿದ್ದರು. 

ಆರ್‌ಬಿಐ ಗವರ್ನರ್ ಮತ್ತು ಉಪ ಗವರ್ನರ್ ನೇಮಿಸುವವರು

ಆರ್‌ಬಿಐ ಗವರ್ನರ್ ಮತ್ತು ಉಪ ಗವರ್ನರ್ ಅವರನ್ನು ಸರಕಾರವೇ ನೇರವಾಗಿ ನೇಮಿಸುತ್ತದೆ. ಉಪ ಗವರ್ನರ್‌ಗಳ ನೇಮಕಾತಿಯಲ್ಲಿ ಗವರ್ನರ್ ಸಲಹೆಯನ್ನೂ ಪರಿಗಣಿಸಲಾಗುತ್ತದೆ. ನಾಲ್ವರು ಉಪ ಗವರ್ನರ್‌ಗಳ ಪೈಕಿ ಇಬ್ಬರನ್ನು ಆರ್‌ಬಿಐ ಒಳಗಿನಿಂದಲೇ ಆಯ್ಕೆ ಮಾಡಲಾಗುತ್ತದೆ. ಮತ್ತೊಬ್ಬರನ್ನು ವಾಣಿಜ್ಯ ಬ್ಯಾಂಕುಗಳಿಂದ ಮತ್ತು ನಾಲ್ಕನೆಯವರಾಗಿ ಅರ್ಥಶಾಸ್ತ್ರಜ್ಞರೊಬ್ಬರನ್ನು ನೇಮಿಸಲಾಗುತ್ತದೆ.