ಆರೋಗ್ಯ ಕ್ಷೇತ್ರದಲ್ಲಿ ಕೇರಳ ಮುಂದು : ನೀತಿ ಆಯೋಗದ ವರದಿಯಲ್ಲಿ ಬಹಿರಂಗ

0
23

ನೀತಿ ಆಯೋಗ ಬಿಡುಗಡೆ ಮಾಡಿರುವ ‘ಆರೋಗ್ಯ ಪೂರ್ಣ ರಾಜ್ಯಗಳು, ಅಭಿವೃದ್ಧಿ ಹೊಂದುತ್ತಿರುವ ಭಾರತ’ ವರದಿಯಲ್ಲಿ ಕೇರಳ ಸತತ ಎರಡನೇ ಬಾರಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಬಿಹಾರ ಮತ್ತು ಉತ್ತರಪ್ರದೇಶ ಕಡೆಯ ಸ್ಥಾನಗಳಲ್ಲಿವೆ. ಕರ್ನಾಟಕ 8ನೇ ಸ್ಥಾನದಲ್ಲಿದೆ.

ನವದೆಹಲಿ: ನೀತಿ ಆಯೋಗ ಬಿಡುಗಡೆ ಮಾಡಿರುವ ‘ಆರೋಗ್ಯ ಪೂರ್ಣ ರಾಜ್ಯಗಳು, ಅಭಿವೃದ್ಧಿ ಹೊಂದುತ್ತಿರುವ ಭಾರತ’ ವರದಿಯಲ್ಲಿ ಕೇರಳ ಸತತ ಎರಡನೇ ಬಾರಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಬಿಹಾರ ಮತ್ತು ಉತ್ತರಪ್ರದೇಶ ಕಡೆಯ ಸ್ಥಾನಗಳಲ್ಲಿವೆ. ಕರ್ನಾಟಕ 8ನೇ ಸ್ಥಾನದಲ್ಲಿದೆ.

ಹರಿಯಾಣ, ಜಾರ್ಖಂಡ ಮತ್ತು ಅಸ್ಸಾಂ ಆರೋಗ್ಯ ಕ್ಷೇತ್ರದಲ್ಲಿ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳಾಗಿ ಗುರುತಿಸಿಕೊಂಡಿದ್ದರೆ, ಛತ್ತೀಸ್​ಗಢ ತೀರ ನಿಧಾನಗತಿಯ ಬೆಳವಣಿಗೆ ಕಾಣುತ್ತಿರುವ ರಾಜ್ಯವಾಗಿದೆ.

2016-17 ಮತ್ತು 2017-18ರಲ್ಲಿ ರಾಜ್ಯಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಾಗಿರುವ ಒಟ್ಟಾರೆ ಬೆಳವಣಿಗೆಗಳನ್ನು ಆಧರಿಸಿ ವರದಿ ಬಿಡುಗಡೆ ಮಾಡಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಭಾಗಿತ್ವದೊಂದಿಗೆ ವರದಿ ಸಿದ್ಧಪಡಿಸಲಾಗಿದೆ. ವಿಶ್ವಬ್ಯಾಂಕ್ ಇದಕ್ಕೆ ತಾಂತ್ರಿಕ ಸಹಭಾಗಿತ್ವ ನೀಡಿದೆ.

ಮೂರು ವಿಭಾಗಗಳು: ದೊಡ್ಡ ಮತ್ತು ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದು ವಿಂಗಡಣೆ ಮಾಡಲಾಗಿದೆ. ದೊಡ್ಡ ರಾಜ್ಯಗಳ ಪೈಕಿ ಹರಿಯಾಣ, ರಾಜಸ್ಥಾನ ಮತ್ತು ಜಾರ್ಖಂಡ ಮೊದಲ ಮೂರು ಸ್ಥಾನಗಳಲ್ಲಿದ್ದರೆ, ಸಣ್ಣ ರಾಜ್ಯಗಳ ಪೈಕಿ ಮಿಜೋರಾಂ, ತ್ರಿಪುರಾ ಮತ್ತು ಮಣಿಪುರ ಕ್ರಮವಾಗಿ ಟಾಪ್ 3 ಸ್ಥಾನಗಳನ್ನು ಪಡೆದುಕೊಂಡಿವೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ ಮೊದಲ ಸ್ಥಾನದಲ್ಲಿದೆ.

2018ರಲ್ಲಿ ಮೊದಲ ವರದಿ: 2014-15 ಮತ್ತು 2015-16ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಆಧರಿಸಿ 2018ರ ಫೆಬ್ರವರಿಯಲ್ಲಿ ಮೊದಲ ವರದಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಕೇರಳ, ಪಂಜಾಬ್, ತಮಿಳುನಾಡು ಮೊದಲು 3 ಸ್ಥಾನ ಪಡೆದುಕೊಂಡಿದ್ದವು. ಜಾರ್ಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುತ್ತಿರುವ ರಾಜ್ಯಗಳ ಪೈಕಿ ಮುಂಚೂಣಿಯಲ್ಲಿದ್ದವು. ಈ 3 ರಾಜ್ಯಗಳು, ನವಜಾತ ಶಿಶು ಮರಣ ಪ್ರಮಾಣ (ಎನ್​ಎಂಆರ್), ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣ ಪ್ರಮಾಣ (ಯು5ಎಂಆರ್), ಪೂರ್ಣ ರೋಗಪ್ರತಿರೋಧಕ ವಿತರಣೆ, ಸಾಂಸ್ಥಿಕ ವಿತರಣೆಗಳು, ಎಚ್​ಐವಿ ಸೋಂಕು ಪೀಡಿತರು (ಪಿಎಲ್​ಎಚ್​ಐವಿ) ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದ್ದವು. ಸಣ್ಣ ರಾಜ್ಯಗಳ ಕಾರ್ಯಕ್ಷಮತೆಯಲ್ಲಿ ಮಿಜೋರಾಂ ಮೊದಲ ಸ್ಥಾನದಲ್ಲಿತ್ತು. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮಣಿಪುರ ಮತ್ತು ಗೋವಾ ಇತ್ತು. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಕ್ಷದ್ವೀಪ ಮೊದಲ ಸ್ಥಾನದಲ್ಲಿತ್ತು.