ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ

0
21

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕ ಪ್ರೊ.ಜಿ. ಮುಗೇಶ್‌ ಸಹಿತ 6 ಮಂದಿ ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರು: ತಮಿಳುನಾಡಿನಲ್ಲಿ 12ನೇ ತರಗತಿವರೆಗೆ ಸರ್ಕಾರಿ ಶಿಕ್ಷಣ ಪಡೆದರೂ, ಜೀವವೈದ್ಯಕೀಯ ಉಪಕರಣಗಳಿಗೆ ನ್ಯಾನೋ ಉತ್ಪನ್ನಗಳು ಮತ್ತು ಸಣ್ಣ ಅಣುಗಳ ರಾಸಾಯನಿಕ ಸಂಶ್ಲೇಷಣೆಯಲ್ಲಿ ಮಹತ್ವದ ಸಾಧನೆ ಮಾಡಿದ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕ ಪ್ರೊ.ಜಿ. ಮುಗೇಶ್‌ ಸಹಿತ 6 ಮಂದಿ ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮುಗೇಶ್‌ ಅವರಿಗೆ ಭೌತಿಕ ವಿಜ್ಞಾನ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದ್ದರೆ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಮುಂಬೈಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊ. ಸುನೀತಾ ಸುರವಗಿ, ಜೀವವಿಜ್ಞಾನ ಕ್ಷೇತ್ರದಲ್ಲಿ ಹೈದರಾಬಾದ್‌ನ ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯೋಲಜಿಯ (ಸಿಸಿಎಂಬಿ) ವಿಜ್ಞಾನಿ ಡಾ. ಮಂಜುಳಾ ರೆಡ್ಡಿ, ಮಾನವೀಯ ವಿಭಾಗದಲ್ಲಿ ಮಂಡಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊಫೆಸರ್‌ ಮನು ವಿ. ದೇವದೇವನ್‌, ಗಣಿತ ವಿಜ್ಞಾನದಲ್ಲಿ ಜ್ಯೂರಿಚ್‌ನ ಇಟಿಎಚ್‌ ಸಂಸ್ಥೆಯ ಪ್ರೊಫೆಸರ್‌ ಸಿದ್ಧಾರ್ಥ ಮಿಶ್ರಾ, ಸಾಮಾಜಿಕವಿಜ್ಞಾನ ಕ್ಷೇತ್ರದಲ್ಲಿ ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ವಿ.ವಿಯ ಪ್ರೊ. ಆನಂದ ಪಾಂಡ್ಯನ್‌ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ತಲಾ 1 ಲಕ್ಷ ಡಾಲರ್‌ ನಗದು ( 70 ಲಕ್ಷ), ಚಿನ್ನದ ಪದಕ ಒಳಗೊಂಡಿದೆ. ಜನೇವರಿ. 7ರಂದು ನಗರದಲ್ಲಿ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಒಟ್ಟು 196 ನಾಮನಿರ್ದೇಶಿತರ ಪೈಕಿ ಈ 6 ಮಂದಿಯನ್ನು ತಜ್ಞರ ಸಮಿತಿ ಆಯ್ಕೆ ಮಾಡಿದೆ ಎಂದು ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಎಸ್. ಡಿ. ಶಿಬುಲಾಲ್‌ ನವೆಂಬರ್ 7 ರ ಗುರುವಾರ ತಿಳಿಸಿದರು.

ವಿಷವಾಗದ ಕಬ್ಬಿಣ: ದೇಹಕ್ಕೆ ಕಬ್ಬಿಣದ ಅಂಶ ಬಹಳ ಮುಖ್ಯ. ಆದರೆ ಪ್ರೊಟೀನ್‌ನಿಂದ ಕಬ್ಬಿಣದ ಅಂಶ ಹೊರಬಂದಾಗ ಅದು ಮೆದುಳಿಗೆ ವಿಷಕಾರಿಯಾಗುತ್ತದೆ. ಹೀಗಾಗಿ ಪಕ್ಷವಾತ, ಅತಿ ಮರೆವು ಮೊದಲಾದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ರಾಸಾಯನಿಕ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಪ್ರಶಸ್ತಿ ವಿಜೇತರ ಪೈಕಿ ಜಿ.ಮುಗೇಶ್‌ ತಿಳಿಸಿದರು.

ಇನ್ಫೊಸಿಸ್‌ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣ ಮಾತನಾಡಿ, ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಡುವ ಹಣದ ಪ್ರಮಾಣ ಹೆಚ್ಚಿಸಲೇಬೇಕಾಗಿದೆ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ನಡುವೆ ದೊಡ್ಡ ಅಂತರ ಇದ್ದು, ಇದನ್ನು ಭರ್ತಿ ಮಾಡುವ ಕೆಲಸ ಚುರುಕಿನಿಂದ ಆಗಬೇಕಿದೆ ಎಂದರು.

ಟ್ರಸ್ಟಿಗಳಾದ ಕೆ. ದಿನೇಶ್‌, ಶ್ರೀನಾಥ್‌ ಬಟ್ನಿ, ನಂದನ್‌ ನಿಲೇಕಣಿ ಇದ್ದರು.