ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ; ಆನಂದಿಬೇನ್​ ಪಟೇಲ್​ ಉತ್ತರ ಪ್ರದೇಶಕ್ಕೆ

0
95

ಕೇಂದ್ರ ಸರ್ಕಾರ ಜುಲೈ 20 ರ ಶನಿವಾರ ಇಬ್ಬರು ರಾಜ್ಯಪಾಲರನ್ನು ವರ್ಗಾವಣೆ ಮಾಡಿದ್ದು, ನೂತನವಾಗಿ ನಾಲ್ವರನ್ನು ಕೆಲ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ನವದೆಹಲಿ: ಕೇಂದ್ರ ಸರ್ಕಾರ ಜುಲೈ 20 ರ  ಶನಿವಾರ ಇಬ್ಬರು ರಾಜ್ಯಪಾಲರನ್ನು ವರ್ಗಾವಣೆ ಮಾಡಿದ್ದು, ನೂತನವಾಗಿ ನಾಲ್ವರನ್ನು ಕೆಲ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ನಾಗಾಲ್ಯಾಂಡ್​ ಹಾಗೂ ತ್ರಿಪುರ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು, ನಾಗಾ ಶಾಂತಿ ಮಾತುಕತೆಯ ಮಾಜಿ ಸಂವಾದಕ ಆರ್‌ ಎನ್‌ ರವಿ ಅವರನ್ನು ನಾಗಾಲ್ಯಾಂಡ್‌ ಗವರ್ನರ್‌ ಆಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆಯಲ್ಲಿ ತಿಳಿಸಿದೆ.

ಇದರೊಂದಿಗೆ ಜನತಾ ದಳದ ಮಾಜಿ ಸಂಸದ ಜಗದೀಪ್ ಧನಕರ್ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ, ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ ಆನಂದಿ ಬೆನ್‌ ಪಟೇಲ್‌ ಅವರನ್ನು ಉತ್ತರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ.

ಆನಂದಿಬೆನ್‌ ಪಟೇಲ್‌ ಅವರ ಸ್ಥಾನಕ್ಕೆ ಬಿಹಾರ ರಾಜ್ಯಪಾಲರಾಗಿರುವ ಲಾಲ್​ ಜಿ ಟಂಡನ್​​ ಅವರನ್ನು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇನ್ನು ಬಿಹಾರಕ್ಕೆ ಫಗು ಚೌಹಾಣ್‌ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ತ್ರಿಪುರ ರಾಜ್ಯಪಾಲರಾಗಿ ರಮೇಶ್ ಬಯಾಸ್‌ ಅವರು ನೇಮಕಗೊಂಡಿದ್ದಾರೆ. 

ತ್ರಿಪುರಾ ರಾಜ್ಯದ ನೂತನ ರಾಜ್ಯಪಾಲರು  ರಮೇಶ್ ಬಯಾಸ್‌

ತ್ರಿಪುರಾದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ರಮೇಶ್ ಬಯಾಸ್ ಅವರು ಈಗಿನ ಛತ್ತೀಸಗಡದ (ಆಗಿನ ಮಧ್ಯಪ್ರದೇಶ) ರಾಯ್ಪುರದಲ್ಲಿ 1947ರ ಆಗಸ್ಟ್‌ 2ರಂದು ಜನಿಸಿದರು. ರಾಯ್ಪುರ ಪಾಲಿಕೆಗೆ ಆಯ್ಕೆಯಾಗುವ ಮೂಲಕ 1978ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, 1980ರಲ್ಲಿ ಮಧ್ಯಪ್ರದೇಶದ ಶಾಸಕರಾಗಿದ್ದರು. 1989ರಲ್ಲಿ ಮೊದಲ ಬಾರಿಗೆ ರಾಯ್ಪುರದಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಅಲ್ಲಿಂದ ಸತತವಾಗಿ ಏಳು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

 

ಪಶ್ಚಿಮ ಬಂಗಾಳ ರಾಜ್ಯದ ನೂತನ ರಾಜ್ಯಪಾಲರು  ಜಗದೀಪ್ ಧನಕರ್

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕವಾಗಿರುವ ಜಗದೀಪ್ ಧನಕರ್ ಅವರು 1951ರಲ್ಲಿ ರಾಜಸ್ಥಾನದ ಜುಂಝುನು ಜಿಲ್ಲೆಯ ಕಿತನಾ ಎಂಬ ಗ್ರಾಮದಲ್ಲಿ ಜನಿಸಿದ್ದರು. ಅವರು ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ಜೈಪುರದಲ್ಲಿ ಎಲ್‌ಎಲ್‌ಬಿ ಪದವಿ ಪಡೆದ ಅವರು, ರಾಜಸ್ಥಾನ್ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ, ರಾಜಸ್ಥಾನ ಬಾರ್ ಕೌನ್ಸಿಲ್ ಸದಸ್ಯರಾಗಿ ಮತ್ತು ಐಸಿಸಿ ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್‌ನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. 1989-91ರ ಅವಧಿಯಲ್ಲಿ ಅವರು ಜುಂಝುನು ಲೋಕಸಭೆ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿದ್ದರು. ಅಲ್ಲದೆ, ಶಾಸಕರಾಗಿಯೂ ಚುನಾಯಿತರಾಗಿದ್ದರು.

 

ಬಿಹಾರ್ ರಾಜ್ಯದ ನೂತನ ರಾಜ್ಯಪಾಲರು  ಫಗು ಚೌಹಾಣ್

ಬಿಹಾರದ ರಾಜ್ಯಪಾಲರಾಗಿ ನೇಮಕವಾಗಿರುವ ಫಗು ಚೌಹಾಣ್ ಅವರು ಉತ್ತರ ಪ್ರದೇಶದ ಬಿಜೆಪಿ ಶಾಸಕರಾಗಿದ್ದಾರೆ. ಘೋಸಿ ಕ್ಷೇತ್ರದಲ್ಲಿ ಆರು ಬಾರಿ ಜಯಗಳಿಸಿರುವ ಅವರು, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಸಲ ಗೆದ್ದಿರುವ ಶಾಸಕ ಎನಿಸಿಕೊಂಡಿದ್ದಾರೆ. 1985ರಲ್ಲಿ ದಲಿತ್ ಮಜ್ದೂರ್ ಕಿಶಾನ್ ಪಾರ್ಟಿಯಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಅವರು, ಬಳಿಕ ಜಯಪ್ರಕಾಶ್ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದರು. ನಂತರ 1996 ಮತ್ತು 2002ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. 2007ರಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಚೌಹಾಣ್, 2017ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.

ನಾಗಾಲ್ಯಾಂಡ್‌ ರಾಜ್ಯದ ನೂತನ ರಾಜ್ಯಪಾಲರು  ಆರ್‌ ಎನ್ ರವಿ 

ನಾಗಾಲ್ಯಾಂಡ್‌ನ ರಾಜ್ಯಪಾಲರಾಗಿ ನೇಮಕವಾಗಿರುವ ಆರ್‌ ಎನ್ ರವಿ ಅವರು 1976ರ ಕೇರಳ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರು ನಾಗಾಲ್ಯಾಂಡ್‌ನಲ್ಲಿ ನಾಗಾ ಬಂಡುಕೋರರ ಹಿಂಸಾಚಾರವನ್ನು ತಡೆದು ಶಾಂತಿ ಮೂಡಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. 2012ರಲ್ಲಿ ಗುಪ್ತಚರ ಬ್ಯೂರೋದ ವಿಶೇಷ ನಿರ್ದೇಶಕರಾಗಿ ಅವರು ನಿವೃತ್ತರಾಗಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಗುಪ್ತಚರ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿದ್ದರು. ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು.

ಮಧ್ಯಪ್ರದೇಶ ರಾಜ್ಯದ ನೂತನ ರಾಜ್ಯಪಾಲರು  ಲಾಲ್‌ಜಿ ಟಂಡನ್

ಲಾಲ್‌ಜಿ ಟಂಡನ್ ಅವರು (ಜನನ: ಏಪ್ರಿಲ್ 12, 1935) ಬಿಜೆಪಿಯ ಸದಸ್ಯರಾಗಿದ್ದು, ಮಧ್ಯಪ್ರದೇಶದ 22ನೇ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಲಾಲ್‌ಜಿ, ಎರಡು ಬಾರಿ ಅಲ್ಲಿನ ವಿಧಾನಪರಿಷತ್ ಸದಸ್ಯರಾಗಿದ್ದರು. ಮೂರು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು. ಬಿಎಸ್‌ಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಯಾವತಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತರಲ್ಲಿ ಒಬ್ಬರಾದ ಅವರು, ವಾಜಪೇಯಿ ಅವರು ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದ ಬಳಿಕ ಅವರು ಪ್ರತಿನಿಧಿಸುತ್ತಿದ್ದ ಲಕ್ನೋ ಲೋಕಸಭೆ ಕ್ಷೇತ್ರದಿಂದ 2009ರಲ್ಲಿ ಸ್ಪರ್ಧಿಸಿ ಗೆದ್ದಿದ್ದರು.