ಆನ್‌ಲೈನ್‌ನಲ್ಲೇ ಸ್ಥಿರಾಸ್ತಿ ನೋಂದಣಿ(ಏಪ್ರಿಲ್‌ನಿಂದ ರಾಜ್ಯದಾದ್ಯಂತ ವಿಸ್ತರಿಸಲು ಮುದ್ರಾಂಕ ಇಲಾಖೆ ಸಿದ್ಧತೆ)

0
618

ಆನ್‌ಲೈನ್‌ನಲ್ಲೇ ಸ್ಥಿರಾಸ್ತಿ ನೋಂದಣಿ ‍ಪ್ರಕ್ರಿಯೆಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದನ್ನು 2019 ರ ಏ‍ಪ್ರಿಲ್‌ನಿಂದ ರಾಜ್ಯದಾದ್ಯಂತ ವಿಸ್ತರಿಸಲು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಸಿದ್ಧತೆ ನಡೆಸಿದೆ.

ಬೆಂಗಳೂರು: ಆನ್‌ಲೈನ್‌ನಲ್ಲೇ ಸ್ಥಿರಾಸ್ತಿ ನೋಂದಣಿ ‍ಪ್ರಕ್ರಿಯೆಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದನ್ನು 2019 ರ ಏ‍ಪ್ರಿಲ್‌ನಿಂದ ರಾಜ್ಯದಾದ್ಯಂತ ವಿಸ್ತರಿಸಲು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಸಿದ್ಧತೆ ನಡೆಸಿದೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಫೋನ್ ಇನ್‌ ಕಾರ್ಯಕ್ರಮ’ದಲ್ಲಿ ಮಾತನಾಡಿದ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಈ ವಿಷಯ ತಿಳಿಸಿದರು.

‘ಬೆಂಗಳೂರಿನ 45 ಸಬ್‌ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಕ್ಟೋಬರ್‌ನಿಂದ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಒಂದೂವರೆ ತಿಂಗಳಲ್ಲಿ ಒಂದು ಲಕ್ಷ ಜನರು ಕಾವೇರಿ ಆನ್‌ಲೈನ್‌ಗೆ ಭೇಟಿ ನೀಡಿದ್ದಾರೆ. 4 ಸಾವಿರ ಜನರು ಆನ್‌ಲೈನ್‌ನಲ್ಲೇ ಹಣ ಪಾವತಿ ಮಾಡಿದ್ದಾರೆ’ ಎಂದು ಅವರು ತಿಳಿಸಿದರು.

ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ತಿಳಿಸುವ ‘ಮೌಲ್ಯ’ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಗಿದ್ದು, 10 ಸಾವಿರ ಜನರು ಅದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಜನರು ಆ್ಯಪ್‌ನಲ್ಲಿ ಜಿಲ್ಲೆ, ತಾಲ್ಲೂಕು, ಗ್ರಾಮ, ಸರ್ವೆ ಸಂಖ್ಯೆ ನಮೂದಿಸಿದರೆ ಸಾಕು. ಕೂಡಲೇ ಆ ‍ಪ್ರದೇಶದ ಮಾರುಕಟ್ಟೆ ಮೌಲ್ಯ ಗೊತ್ತಾಗುತ್ತದೆ. ಜನರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅದನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು’ ಎಂದು ಅವರು ಹೇಳಿದರು.

12 ನಿಮಿಷಗಳಲ್ಲೇ ಆಸ್ತಿ ನೋಂದಣಿ: ಆಸ್ತಿ ಖರೀದಿದಾರರು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ, ನೋಂದಣಿ ಪ್ರಕ್ರಿಯೆಗೆ ಸಮಯ ಗೊತ್ತುಪಡಿಸಿಕೊಳ್ಳಬಹುದು. 12 ನಿಮಿಷಗಳಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಆಸ್ತಿ ಮಾರುವವರು ಅಥವಾ ಖರೀದಿ ಮಾಡುವವರು ಮುದ್ರಾಂಕ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ಕಾವೇರಿ ತಂತ್ರಾಂಶವನ್ನು ತೆರೆಯಬೇಕು. ಬಳಿಕ, ಬಳಕೆದಾರರ ಗುರುತು ಮತ್ತು ಪಾಸ್‌ವರ್ಡ್‌ ನಮೂದಿಸಿ ನೋಂದಣಿ ಆಗಬೇಕು. ಬಳಿಕ ಲಾಗಿನ್‌ ಆಗಿ, ನೋಂದಣಿಪೂರ್ವ ದತ್ತಾಂಶಗಳನ್ನು ದಾಖಲಿಸಬೇಕು.

ಆಸ್ತಿ ನೋಂದಣಿಯ ವಿವರ, ಖರೀದಿದಾರರು-ಮಾರಾಟಗಾರರ ಮಾಹಿತಿ, ಸ್ವತ್ತಿನ ವಿಸ್ತೀರ್ಣ ಹಾಗೂ ಅದಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ತರುವಾಯ ಸಂಬಂಧಪಟ್ಟ ಉಪ ನೋಂದಣಾಧಿಕಾರಿ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ. ನಂತರ ದೃಢೀಕರಿಸಿದ ಮಾಹಿತಿಯುಳ್ಳ ಸಂದೇಶವು ಜನರ ಮೊಬೈಲ್‌ಗೆ ತಲುಪುತ್ತದೆ.

ಅಷ್ಟೇ ಅಲ್ಲ; ಆಸ್ತಿಯ ವಿಸ್ತೀರ್ಣ, ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಎಷ್ಟು ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಾವತಿಸಬೇಕು ಎಂಬುದನ್ನು ಸ್ವಯಂಚಾಲಿತವಾಗಿ ಲೆಕ್ಕಾಚಾರ ಹಾಕಿ, ವಿವರವನ್ನು ಮೊಬೈಲ್‌ಗೆ ರವಾನಿಸಲಾಗುತ್ತದೆ. ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಿದ ತರುವಾಯ ನೋಂದಣಿ ಪ್ರಕ್ರಿಯೆಗೆ ನಿಗದಿತ ಸಂಖ್ಯೆ, ಸಮಯ ಮತ್ತು ದಿನಾಂಕ ನೀಡಲಾಗುತ್ತದೆ.

‘ಇದರಿಂದ ಜನರ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಮುದ್ರಾಂಕ, ನೋಂದಣಿ ಶುಲ್ಕ ಭರಿಸಲು ಬ್ಯಾಂಕ್‌ಗಳಿಗೆ ತೆರಳಿ ಡಿಡಿ ಪಡೆಯುವುದು ತಪ್ಪಲಿದೆ’ ಎಂದು ತ್ರಿಲೋಕ್‌ಚಂದ್ರ ಹೇಳಿದರು.

ಜನರು ಮನೆಯಲ್ಲೇ ಕುಳಿತು ಇ–ಸ್ಟ್ಯಾಂಪ್ ಪಡೆಯುವ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಇದನ್ನು ಅಫಿಡವಿಟ್‌ ಹಾಗೂ ಅಗ್ರಿಮೆಂಟ್‌ಗೆ ಬಳಸಬಹುದು

ಡಾ.ಕೆ.ವಿ.ತ್ರಿಲೋಕಚಂದ್ರ, ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಆಯುಕ್ತ