ಆಧಾರ್‌ಗೆ ‘ಪರ್ಯಾಯ ಗುರುತಿನ ಚೀಟಿ’

0
16

ಆಧಾರ್‌ನಲ್ಲಿರುವ ವೈಯಕ್ತಿಕ ವಿವರಗಳನ್ನು ಕಾಪಾಡುವ ಉದ್ದೇಶದಿಂದ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ‘ಪರ್ಯಾಯ ಗುರುತಿನ ಚೀಟಿ’ (ವರ್ಚ್ಯುವಲ್‌ ಐಡಿ) ಪರಿಕಲ್ಪನೆಯನ್ನು ಬುಧವಾರ ಪರಿಚಯಿಸಿದೆ.

ಆಧಾರ್‌ ಕಾರ್ಡ್‌ದಾರರು ಯುಐಡಿಎಐ ಅಧಿಕೃತ ವೆಬ್‌ಸೈಟ್‌ನಿಂದ 16 ಸಂಖ್ಯೆಗಳ ಪರ್ಯಾಯ ಗುರುತಿನ ಚೀಟಿ ಪಡೆಯಬಹುದಾಗಿದೆ. ಮೊಬೈಲ್‌ ಸಿಮ್‌ ಸಂಸ್ಥೆಗಳಿಗೆ ದೃಢೀಕರಣಕ್ಕೆ ಹಾಗೂ ವಿವಿಧ ಸೇವೆಗಳನ್ನು ಪಡೆಯಲು ಅದನ್ನು ಬಳಸಬಹುದು.

ಈ ವರ್ಚ್ಯುವಲ್‌ ಐಡಿ ಹೆಸರು, ವಿಳಾಸ, ಫೋಟೋದಂತಹ ಸೀಮಿತ ಮಾಹಿತಿ ಹೊಂದಿರಲಿದ್ದು, ಸಿಮ್‌ ಪರಿಶೀಲನೆಗೂ ಇದೇ ಬಳಕೆ ಮಾಡಬಹುದು. ಹಾಗಾಗಿ ವಿವಿಧ ಸೇವೆಗಳನ್ನು ಪಡೆಯಲು ಜನರು ತಮ್ಮ ಆಧಾರ್‌ ಸಂಖ್ಯೆಯನ್ನೇ ನೀಡಬೇಕಾಗಿಲ್ಲ.

ಈ ಹೊಸ ವ್ಯವಸ್ಥೆ ಅಡಿ ಬಳಕೆದಾರ ಎಷ್ಟು ಬೇಕಾದರೂ ಪರ್ಯಾಯ ಗುರುತಿನ ಚೀಟಿಗಳನ್ನು ಪಡೆಯಬಹುದು. ಆದರೆ, ಹೊಸ ವರ್ಚ್ಯುವಲ್‌ ಐಡಿ ಪಡೆದ  ಕೂಡಲೇ ಹಳೆಯದ್ದು ತನ್ನಿಂತಾನೇ ರದ್ದಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಳಕೆದಾರರಿಗೆ ವಿವಿಧ ಸೇವೆಗಳನ್ನು ನೀಡುವ ಎಲ್ಲ ಸಂಸ್ಥೆಗಳು ಜೂನ್‌ 1ರಿಂದ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಪರ್ಯಾಯ ಗುರುತಿನ ಚೀಟಿ ಜೊತೆಗೆ ‘ಸೀಮಿತ– ವೈಯಕ್ತಿಕ ವಿವರ’ (ಲಿಮಿಟೆಡ್‌ ಕೆವೈಸಿ) ಎಂಬ ಮತ್ತೊಂದು ವ್ಯವಸ್ಥೆಯನ್ನು ಯುಐಡಿಎಐ ರೂಪಿಸಿದೆ. ಈ ವ್ಯವಸ್ಥೆಯಲ್ಲಿ ಪ್ರಾಧಿಕಾರವು ನಿರ್ದಿಷ್ಟ ಸೇವೆ ಒದಗಿಸುವ ಸಂಸ್ಥೆಗಳಿಗೆ ಬಳಕೆದಾರರ ಸೀಮಿತ ಅಥವಾ ಅಗತ್ಯಕ್ಕೆ ಬೇಕಾದಷ್ಟೇ ವಿವರ ನೀಡಲಿದೆ.