ಆಗಸ್ಟ್ 7 ರ “ವಾಣಿಜ್ಯ ವಿಭಾಗ”ದ ಪ್ರಚಲಿತ ಘಟನೆಗಳು

0
38

ಈ ಕೆಳಗೆ ವಾಣಿಜ್ಯ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಎಲ್‌ಐಸಿ: ‘ಜೀವನ್‌ ಅಮರ್’ ಯೋಜನೆ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮೆ ಸಂಸ್ಥೆಯು (ಎಲ್‌ಐಸಿ) ಹೊಸ ಟರ್ಮ್‌ ಇನ್ಶುರೆನ್ಸ್‌ ಪಾಲಿಸಿ, ‘ಜೀವನ್‌ ಅಮರ್‌’ ಪರಿಚಯಿಸಿದೆ.

18 ರಿಂದ 65 ವಯಸ್ಸಿನವರು ಈ ಯೋಜನೆ ಖರೀದಿಸಬಹುದು. ಪಾಲಿಸಿ ಅವಧಿಯು 10 ವರ್ಷದಿಂದ ಗರಿಷ್ಠ 40 ವರ್ಷದವರೆಗೆ ಇರಲಿದೆ. ಕನಿಷ್ಠ ಪರಿಹಾರ ಮೊತ್ತವು  25 ಲಕ್ಷ ಇರಲಿದೆ. ಮರಣ ಪರಿಹಾರ ಪಾವತಿಯು ಒಂದೇ ಗಂಟಿನಲ್ಲಿ ಅಥವಾ ಕಂತಿನಲ್ಲಿ ಪಡೆಯುವ ಅವಕಾಶ ಇದರಲ್ಲಿ ಇದೆ. ಈ ಯೋಜನೆಯಡಿ ಅಪಘಾತ ವಿಮೆ ಪರಿಹಾರವನ್ನೂ ಹೆಚ್ಚುವರಿಯಾಗಿ  ಸೇರ್ಪಡೆ ಮಾಡಬಹುದು. ತಂಬಾಕು ಸೇವನೆ ಮಾಡುವವರು ಮತ್ತು ಮಾಡದವರಿಗೆ ಪ್ರತ್ಯೇಕ ವಿಮೆ ಕಂತು ನಿಗದಿಪಡಿಸಲಾಗಿದೆ. ಮಹಿಳೆಯರಿಗೆ ಕಡಿಮೆ ಕಂತು ಪಾವತಿ ಸೌಲಭ್ಯ ಇದೆ. ಈ ಯೋಜನೆಯಲ್ಲಿನ ಹೂಡಿಕೆಗೆ ತೆರಿಗೆ ವಿನಾಯ್ತಿಯೂ ಲಭ್ಯ ಇದೆ.

 

ರಸಗೊಬ್ಬರಗಳ ಸಬ್ಸಿಡಿ ಹೆಚ್ಚಳ

ನವದೆಹಲಿ: ರೈತರಿಗೆ ಕಡಿಮೆ ದರದಲ್ಲಿ ಪೋಷಕಾಂಶಯುಕ್ತ ರಸಗೊಬ್ಬರಗಳು ಲಭ್ಯವಾಗಿಸುವ ನಿಟ್ಟಿನಲ್ಲಿ ಯೂರಿಯಾ ಹೊರತಾದ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಲು ಕೇಂದ್ರ ಸಂಪುಟ ಸಭೆ ನಿರ್ಧರಿಸಿದೆ.

ನೈಟ್ರೋಜನ್‌ ಕಿಲೋಗೆ ರೂ. 18.90, ಪಾಸ್ಫರಸ್‌ ಕಿಲೋಗೆ ರೂ. 15.11, ಪೊಟ್ಯಾಷ್‌ ಕಿಲೋಗೆ ರೂ. 11.12, ಸಲ್ಫರ್‌ ಕಿಲೋಗೆ ರೂ. 3.56 ನಿಗದಿ ಪಡಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ 2019-20ರ ವಿತ್ತ ವರ್ಷದಲ್ಲಿ ಒಟ್ಟು 22,875 ಕೋಟಿ ರೂ. ಹೊರೆಯಾಗಲಿದೆ. ರೈತರು ರಸಗೊಬ್ಬರಗಳನ್ನು ಹಿತಮಿತವಾಗಿ ಬಳಸಬೇಕು ಎಂಬ ಉದ್ದೇಶಕ್ಕೆ ಪೋಷಕಾಂಶಯುಕ್ತ ರಸಗೊಬ್ಬರಗಳ ಮೇಲೆ ವಾರ್ಷಿಕ ಆಧಾರದಲ್ಲಿ ಸಬ್ಸಿಡಿ ನೀಡಲು 2010ರಿಂದ ಆರಂಭಿಸಿತ್ತು. ಇದರಲ್ಲಿ ಯೂರಿಯಾ ಹೊರತಾಗಿ ಇತರ ಅಗತ್ಯ ಪೋಷಕಾಂಶಗಳ ಮೇಲೆ ಸಬ್ಸಿಡಿ ಒದಗಿಸಲಾಗುತ್ತದೆ.

 

ಗೇಲ್‌ ಗ್ಯಾಸ್‌ ಅಧ್ಯಕ್ಷರಾಗಿ ಆಶುತೋಷ್‌ ಅಧಿಕಾರ ಸ್ವೀಕಾರ

ಹೊಸದಿಲ್ಲಿ: ಮಹಾರತ್ನ ಗೇಲ್‌(ಇಂಡಿಯಾ) ಲಿಮಿಡೆಡ್‌ ಅಂಗಸಂಸ್ಥೆಯಾದ ಗೇಲ್‌ ಗ್ಯಾಸ್‌ ಲಿಮಿಟೆಡ್‌ನ ಅಧ್ಯಕ್ಷರಾಗಿ ಡಾ.ಆಶುತೋಷ್‌ ಕರ್ನಾಟಕ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ. 

ಗೇಲ್‌ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿಯಾಗಿಯೂ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೈಡ್ರೊಕಾರ್ಬನ್‌ ವಲಯದಲ್ಲಿ 37 ವರ್ಷಗಳ ಅನುಭವವನ್ನು ಹೊಂದಿದ್ದು ಗೇಲ್‌ ಗ್ಯಾಸ್‌ ಮಂಡಳಿಯ ನಿರ್ದೇಶಕರಾಗಿ 2010ರಿಂದ ಕಾರ್ಯ ನಿರ್ವಹಿಸಿದ್ದರು. ಭುವನೇಶ್ವರದಲ್ಲಿ ಮೊದಲ ಎಲ್‌-ಸಿಎನ್‌ಜಿ ಸ್ಟೇಷನ್‌ ಆರಂಭಿಸುವಲ್ಲಿಯೂ ಅವರ ಪಾತ್ರ ದೊಡ್ಡದು. ಬಹುಮುಖ ಪ್ರತಿಭೆಯ ಆಶುತೋಷ್‌ ಅವರು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌, ಆಯಿಲ್‌ ಆ್ಯಂಡ್‌ ಗ್ಯಾಸ್‌, ಸೆಲ್ಫ್‌-ಡೆವಲಪ್‌ಮೆಂಟ್‌ ಮತ್ತಿತರ ವಿಷಯಗಳಲ್ಲಿ ಪುಸ್ತಕಗಳನ್ನೂ ಬರೆದಿದ್ದಾರೆ.