ಆಗಸ್ಟ್ 31 ರ “ವಾಣಿಜ್ಯ ವಿಭಾಗ”ದ ಪ್ರಚಲಿತ ಘಟನೆಗಳು

0
34

ಈ ಕೆಳಗೆ ವಾಣಿಜ್ಯ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಭವಿಷ್ಯನಿಧಿಗೆ ಶೇ 8.65ರ ಬಡ್ಡಿ: ಕಾರ್ಮಿಕ ಸಚಿವಾಲಯದಿಂದ ಶೀಘ್ರ ಅಧಿಸೂಚನೆ

ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ನಿಗದಿಪಡಿಸಿರುವ ಶೇ 8.65 ಬಡ್ಡಿ ದರ ಕುರಿತು ಕಾರ್ಮಿಕ ಸಚಿವಾಲಯವು ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಿದೆ.

ಭವಿಷ್ಯ ನಿಧಿ ಸಂಘಟನೆಯ 6 ಕೋಟಿಗೂ ಹೆಚ್ಚು ಸದಸ್ಯರ ಖಾತೆಗೆ ಹೊಸ ಬಡ್ಡಿ ಸೇರ್ಪಡೆ ಮಾಡಲು ಕಾರ್ಮಿಕ ಸಚಿವಾಲಯವು ಅಧಿಸೂಚನೆ ಹೊರಡಿಸಬೇಕಾಗುತ್ತದೆ.

‘ಈ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ವಿರೋಧಿಸಿಲ್ಲ. ಈಗಾಗಲೇ ಅದು ಸಮ್ಮತಿ ನೀಡಿದೆ. ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಅವರು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.

2018–19ನೆ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಭವಿಷ್ಯ ನಿಧಿಯಿಂದ ಹಣ ಹಿಂದೆ ಪಡೆಯುವ ಪ್ರಕರಣಗಳಲ್ಲಿ ಸದ್ಯಕ್ಕೆ ಶೇ 8.55ರ ಬಡ್ಡಿ ದರವನ್ನೇ ಪರಿಗಣಿಸಲಾಗುತ್ತಿದೆ. ಈ ಬಡ್ಡಿ ದರವನ್ನು 2017–18ನೆ ಹಣಕಾಸು ವರ್ಷದಲ್ಲಿ ನಿಗದಿಪಡಿಸಲಾಗಿತ್ತು.

2018–19ನೆ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಬಡ್ಡಿ ದರ ಪರಿಷ್ಕರಿಸಲಾಗಿತ್ತು.  2017–18ರಲ್ಲಿದ್ದ ಶೇ 8.55 ಬಡ್ಡಿ ದರವನ್ನು ಶೇ 0.10ರಷ್ಟು ಹೆಚ್ಚಿಸಿ ಶೇ 8.65ಕ್ಕೆ ಏರಿಕೆ ಮಾಡಲಾಗಿತ್ತು. ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹಣಕಾಸು ಸಚಿವಾಲಯದಲ್ಲಿನ ಹಣಕಾಸು ಸೇವೆಗಳ ಇಲಾಖೆಯು ಏಪ್ರಿಲ್‌ನಲ್ಲಿ ಇದಕ್ಕೆ ತನ್ನ ಅನುಮೋದನೆ ನೀಡಿತ್ತು.

ಭವಿಷ್ಯ ನಿಧಿ ಸಂಘಟನೆಯು, ಇದಕ್ಕೂ ಮೊದಲು 2015–16ರಲ್ಲಿದ್ದ ಶೇ 8.8ರಷ್ಟು ಬಡ್ಡಿ ದರವನ್ನು 2016–17ರಲ್ಲಿ ಶೇ 8.65ಕ್ಕೆ ಇಳಿಸಿತ್ತು. 2017–18ರಲ್ಲಿನ ಶೇ 8.55ರಷ್ಟು ಬಡ್ಡಿ ದರವು ಐದು ವರ್ಷಗಳಲ್ಲಿನ ಕನಿಷ್ಠ ಮಟ್ಟವಾಗಿತ್ತು.

ಬ್ಯಾಂಕ್‌ ವಂಚನೆ 71,543 ಕೋಟಿ

ಮುಂಬೈ (ಪಿಟಿಐ): ಬ್ಯಾಂಕಿಂಗ್‌ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ 15ರಷ್ಟು ಏರಿಕೆ ಕಂಡು ಬಂದಿದೆ.

ಬ್ಯಾಂಕ್‌ಗಳಲ್ಲಿ 2018–19ರಲ್ಲಿ ನಡೆದ ವಂಚನೆ ಪ್ರಕರಣಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇ 15ರಷ್ಟು ಹೆಚ್ಚಳಗೊಂಡಿದೆ. ಒಟ್ಟಾರೆ ಮೊತ್ತವೂ ಶೇ 73.8ರಷ್ಟು ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್‌ ವಲಯದಲ್ಲಿ 6,801 ಪ್ರಕರಣಗಳು ವರದಿಯಾಗಿವೆ. ವಂಚನೆ ಮೊತ್ತವು  71,543 ಕೋಟಿಗಳಷ್ಟಿದೆ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿಯೇ ವಂಚನೆ ಪ್ರಕರಣಗಳು ಹೆಚ್ಚಾಗಿ ನಡೆದಿವೆ. ನಂತರದ ಸ್ಥಾನದಲ್ಲಿ ಖಾಸಗಿ ಮತ್ತು ವಿದೇಶಿ ಬ್ಯಾಂಕ್‌ಗಳಿವೆ.