ಈ ಕೆಳಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.
ಎವರೆಸ್ಟ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ
ಕಠ್ಮಂಡು(ಎಎಫ್ಪಿ): ಎವರೆಸ್ಟ್ ಪರ್ವತ ಪ್ರದೇಶದಲ್ಲಿ ಒಂದು ಬಾರಿ ಬಳಸಿ ಎಸೆಯು ವಂತಹ(ಸಿಂಗಲ್ ಯೂಸ್)ಪ್ಲಾಸ್ಟಿಕ್ ಬಳಕೆಯನ್ನು ನೇಪಾಳ ಸರ್ಕಾರ ನಿಷೇಧಿಸಿದೆ.
ಪರ್ವತ ಪ್ರದೇಶದಲ್ಲಿ ಅಂದಾಜು 10 ಟನ್ ಕಸ ಸಂಗ್ರಹವಾಗುತ್ತಿದೆ. ಎವರೆಸ್ಟ್ ಪರ್ವತವಿರುವ ಖುಂಬು ಪಸಂಗ್ ಲ್ಹಾಮು ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ, 30 ಮೈಕ್ರಾನ್ಗಿಂತ ಕಡಿಮೆಯ ಪ್ಲಾಸ್ಟಿಕ್ ಚೀಲ, ನೀರಿನ ಬಾಟಲ್ ಮುಂಬರುವ ಜನವರಿಯಿಂದ ನಿಷೇಧಿಸಲಾಗಿದೆ.
ಈ ಪ್ರದೇಶಕ್ಕೆ ಪ್ರತಿ ವರ್ಷ 50 ಸಾವಿರ ಚಾರಣಿಗರು, ಪರ್ವತಾರೋಹಿಗಳು ಭೇಟಿ ನೀಡುತ್ತಾರೆ.
ಸಲಿಂಗ ಮದುವೆ ಕಾನೂನು ಬದ್ಧ ಅಲ್ಲ: ಚೀನಾ
ಬೀಜಿಂಗ್ (ರಾಯಿಟರ್ಸ್): ಚೀನಾ ಕಾನೂನು, ಮದುವೆಯ ಸಂಬಂಧವನ್ನು ಹೆಣ್ಣು– ಗಂಡಿನ ಬಂಧಕ್ಕೇ ಮಿತಿಗೊಳಿಸುತ್ತದೆ ಎಂದು ಸಂಸತ್ತಿನ ವಕ್ತಾರ ಆಗಸ್ಟ್ 21 ರ ಬುಧವಾರ ಸ್ಪಷ್ಟಪಡಿಸಿದರು.
ಚೀನಾ ಕೂಡ ಸಲಿಂಗ ಮದುವೆಯನ್ನು ಕಾನೂನುಬದ್ಧಗೊಳಿಸುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಂಸತ್ತಿನ ವಕ್ತಾರ ಜಾಂಗ್ ಪ್ರತಿಕ್ರಿಯಿಸಿ, ‘ಸಲಿಂಗ ಮದುವೆ ಪರಿಕಲ್ಪನೆ ನಮ್ಮ ದೇಶದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಕ್ಕೆ ಒಪ್ಪುವುದಿಲ್ಲ. ಜಗತ್ತಿನ ಹಲವು ದೇಶಗಳು ಸಲಿಂಗ ಮದುವೆಯನ್ನು ಕಾನೂನುಬದ್ಧಗೊಳಿಸಿಲ್ಲ’ ಎಂದರು.
ನೆರೆಯ ತೈವಾನ್ನಲ್ಲಿ ಇರುವಂತೆ ಸಲಿಂಗಿ ಮದುವೆಗೆ ಚೀನಾದಲ್ಲೂ ಅವಕಾಶ ನೀಡಬೇಕು ಎನ್ನುವ ಹೋರಾಟಗಾರರ ಒತ್ತಡದ ನಡುವೆಯೂ ಈ ನಿರ್ಧಾರ ಕೈಗೊಳ್ಳಲಾಗಿದೆ.