ಆಗಸ್ಟ್ 13 ರ ರಾಷ್ಟ್ರೀಯ ಪ್ರಚಲಿತ ಘಟನೆಗಳು

0
27

ಈ ಕೆಳಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

‘ಒಂದು ರಾಷ್ಟ್ರ ಒಂದು ಕಾರ್ಡ್‌’ ಜಾರಿಗೆ ಸಿದ್ಧತೆ

ನವದೆಹಲಿ: ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ ಒಂದು ರೇಷನ್‌ ಕಾರ್ಡ್‌’ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಮೂರು ತಿಂಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯವನ್ನು ಸಂಗ್ರಹಿಸಿಡುವಂತೆ ರಾಜ್ಯಗಳಿಗೆ ಆಗಸ್ಟ್ 12 ರ ಸೋಮವಾರ ಸೂಚನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರು, ‘ಒಂದು ದೇಶ ಒಂದು ರೇಷನ್‌ ಕಾರ್ಡ್‌’ ಯೋಜನೆ ಜಾರಿಯಾದರೆ ಫಲಾನುಭವಿಯು ದೇಶದ ಯಾವ ರಾಜ್ಯದಲ್ಲಿದ್ದರೂ, ತಮ್ಮ ಪಾಲಿನ ಪಡಿತರವನ್ನು ಪಡೆಯಲು ಸಾಧ್ಯವಾಗಲಿದೆ. ಅವರ ಕುಟುಂಬದ ಇತರ ಸದಸ್ಯರು ತಮ್ಮ ಪಾಲಿನ ಪಡಿತರವನ್ನು ತಮ್ಮ ಊರಿನಲ್ಲಿಯೇ ಪಡೆಯಬಹುದು. ವಲಸೆ ಹೋಗುವ ಕಾರ್ಮಿಕರಿಗೆ ಈ ಯೋಜನೆಯಿಂದ ತುಂಬ ಅನುಕೂಲವಾಗಲಿದೆ’ ಎಂದರು.

 

ಅ.2ರಿಂದ ತ್ವರಿತ ಕೋರ್ಟ್‌ ಆರಂಭ

ನವದೆಹಲಿ (ಪಿಟಿಐ): ಬಾಕಿ ಇರುವ ಅತ್ಯಾಚಾರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ 1,023 ತ್ವರಿತ ವಿಶೇಷ ನ್ಯಾಯಾಲಯಗಳು ಅಕ್ಟೋಬರ್ 2ರಿಂದ ಕಾರ್ಯಾರಂಭವಾಗುವ ಸಾಧ್ಯತೆ ಇದೆ.

ಉದ್ದೇಶಿತ ಈ ಯೋಜನೆಗೆ 767.25 ಕೋಟಿ ಅಗತ್ಯವಿದ್ದು ನಿರ್ಭಯಾ ನಿಧಿಯಡಿ ಒಂದು ವರ್ಷಕ್ಕೆ ಕೇಂದ್ರ ಸರ್ಕಾರ 474 ಕೋಟಿ ಭರಿಸಲಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.

ಸಂಬಂಧಿತ ಹಣಕಾಸು ಸಮಿತಿಯ ಶಿಫಾರಸು ಮತ್ತು ಕಾನೂನು ಸಚಿವರ ಅನುಮೋದನೆಯ ನಂತರ  ಪ್ರಸ್ತಾವವನ್ನು ಹಣಕಾಸು ಸಚಿವರ ಅನುಮೋದನೆಗೆ ಕಳುಹಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆಯು ಆಗಸ್ಟ್‌ 8ರಂದು ಸಂಪುಟ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. 

‘ಎಎಫ್‌ಟಿಎಸ್‌ಸಿ ಯೋಜನೆಯನ್ನು ಅಕ್ಟೋಬರ್‌ 2ರಿಂದ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.  ಮೊದಲ ಹಂತದಲ್ಲಿ ಒಂಬತ್ತು ರಾಜ್ಯಗಳಲ್ಲಿ 777 ಹಾಗೂ ಎರಡನೇ ಹಂತದಲ್ಲಿ 246 ತ್ವರಿತ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ಹಿಂದೆ ತಿಳಿಸಿತ್ತು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಗೆ (ಪೊಕ್ಸೊ) ತಿದ್ದುಪಡಿ ತರಲು ಸಂಸತ್ತು ಇತ್ತೀಚೆಗೆ ಅನುಮೋದನೆ ನೀಡಿದೆ.