ಆಗಸ್ಟ್ 02 ರ “ವಾಣಿಜ್ಯ ವಿಭಾಗ”ದ ಪ್ರಚಲಿತ ಘಟನೆಗಳು

0
57

ಈ ಕೆಳಗೆ ವಾಣಿಜ್ಯ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಐಟಿಆರ್‌ ಫೈಲಿಂಗ್‌ಗೆ ಲೈಟ್‌ ಆಯ್ಕೆ

ನವದೆಹಲಿ (ಪಿಟಿಐ): ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್) ಸಲ್ಲಿಕೆಯನ್ನು ಇನ್ನಷ್ಟು ಸರಳಗೊಳಿಸಲು ಜಾಲತಾಣದಲ್ಲಿ ‘e-Filing Lite’ ಆಯ್ಕೆ ನೀಡಲಾಗಿದೆ.

www.incomet axindiaefiling.gov.inಗೆ ಭೇಟಿ ನೀಡಿದಾಗ ಮುಖಪುಟದ ಬಲಭಾಗದಲ್ಲಿ ಲಾಗಿನ್‌ ಆಯ್ಕೆಯ ಮೇಲ್ಭಾಗದಲ್ಲಿ ಇದನ್ನು ಸೇರಿಸಲಾಗಿದೆ. ಅತ್ಯಂತ ತ್ವರಿತ ಮತ್ತು ಸುಲಭವಾಗಿ ರಿಟರ್ನ್ಸ್‌ ಸಲ್ಲಿಸಲು ಈ ಆಯ್ಕೆ ನೀಡಲಾಗಿದೆ.

ಇದರಲ್ಲಿ ಐಟಿಆರ್‌ನ ಆನ್‌ಲೈನ್‌ ಸಲ್ಲಿಕೆ ಮತ್ತು ಫಾರಂ 26ಎಎಸ್‌ (ಮೂಲದಲ್ಲಿ ತೆರಿಗೆ ಕಡಿತಕ್ಕೆ) ಮಾತ್ರವೇ ಲಭ್ಯವಾಗಲಿದೆ. ಇದರಲ್ಲಿ Dashboard, My Account, e-File ಆಯ್ಕೆಗಳು ಮಾತ್ರವೇ ಇವೆ.

 

ಜಿಎಸ್‌ಟಿ ಸಂಗ್ರಹ ಅಲ್ಪ ಹೆಚ್ಚಳ

ನವದೆಹಲಿ (ಪಿಟಿಐ): ಜುಲೈ ತಿಂಗಳ ಜಿಎಸ್‌ಟಿ ಸಂಗ್ರಹ 1.02 ಲಕ್ಷ ಕೋಟಿ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

2018ರ ಜುಲೈನಲ್ಲಿ ಸಂಗ್ರಹವಾಗಿದ್ದ  96,483 ಕೋಟಿಗೆ ಹೋಲಿಸಿದರೆ ಶೇ 5.8ರಷ್ಟು ಏರಿಕೆಯಾಗಿದೆ.

ಕೇಂದ್ರ ಜಿಎಸ್‌ಟಿ  17,912 ಕೋಟಿ, ರಾಜ್ಯ ಜಿಎಸ್‌ಟಿ  25,008 ಕೋಟಿ ಮತ್ತು ಸಮಗ್ರ ಜಿಎಸ್‌ಟಿ 50,612   ಕೋಟಿ ಸಂಗ್ರವಾಗಿದೆ.

ಜಿಎಸ್‌ಟಿ ಸಂಗ್ರಹವು 2019ರಲ್ಲಿ ಮೊದಲ ಬಾರಿಗೆ ಜೂನ್‌ನಲ್ಲಿ 1 ಲಕ್ಷ ಕೋಟಿಗಿಂತಲೂ ಕೆಳಗೆ ಇಳಿದಿತ್ತು. 99,939 ಕೋಟಿ ಸಂಗ್ರಹವಾಗಿತ್ತು.

 

ಏರ್‌ಟೆಲ್‌ ನಷ್ಟ  2,866 ಕೋಟಿ

ನವದೆಹಲಿ (ಪಿಟಿಐ): ದೂರಸಂಪರ್ಕ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್‌, ಜೂನ್‌ ತ್ರೈಮಾಸಿಕದಲ್ಲಿ  2,866 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿದೆ.
 
14 ವರ್ಷಗಳಲ್ಲಿನ ಮೊದಲ ನಷ್ಟ ಇದಾಗಿದೆ. ಪ್ರತಿಸ್ಪರ್ಧಿ ಸಂಸ್ಥೆ ರಿಲಯನ್ಸ್ ಜಿಯೊಗೆ ತನ್ನ ಗ್ರಾಹಕರು ಮತ್ತು ವಹಿವಾಟನ್ನು ಕಳೆದುಕೊಂಡಿರುವುದು ಮತ್ತು ತ್ರಿಜಿ ಸಂಪರ್ಕ ಸಾಧನಗಳ ಸವಕಳಿ ವೆಚ್ಚ ಹೆಚ್ಚಿರುವುದರಿಂದ ನಷ್ಟ ಉಂಟಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಂಸ್ಥೆಯು  97 ಕೋಟಿಗಳ ನಿವ್ವಳ ಲಾಭ ಗಳಿಸಿತ್ತು.
 
ಸುನೀಲ್‌ ಮಿತ್ತಲ್‌ ಒಡೆತನದ ಕಂಪನಿಯ ವರಮಾನವು ಮೊದಲ ತ್ರೈಮಾಸಿಕದಲ್ಲಿ ಶೇ 4.7ರಷ್ಟು ಹೆಚ್ಚಾಗಿ  20,738 ಕೋಟಿಗೆ ತಲುಪಿದೆ.

ದೇಶದಲ್ಲಿನ ಮೊಬೈಲ್‌ ಸೇವೆಯ ವರಮಾನವು ಶೇ 4ರಷ್ಟು ಏರಿಕೆ ಕಂಡು 10,724 ಕೋಟಿಗೆ ತಲುಪಿದೆ.

 

ಬಡ್ಡಿದರ ತಗ್ಗಿಸಿದ ಫೆಡರಲ್‌ ರಿಸರ್ವ್‌

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆಗಿರುವ ಫೆಡರಲ್‌ ರಿಸರ್ವ್‌, 10 ವರ್ಷಗಳ ಬಳಿಕ ಬಡ್ಡಿದರದಲ್ಲಿ ಕಡಿತ ಮಾಡಿದೆ. ಶೇ 2.25 ರಷ್ಟಿದ್ದ ಬಡ್ಡಿದರವನ್ನು ಶೇ 2ಕ್ಕೆ ಅಂದರೆ ಶೇ 0.25ರಷ್ಟು ಕಡಿತ ಮಾಡಿದೆ.

ಬಡ್ಡಿದರ ತಗ್ಗಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಒಂದು ವರ್ಷದಿಂದ ಒತ್ತಡ ಹೇರುತ್ತಿದ್ದರು. ಆದರೆ, ‘ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿಲ್ಲ’ ಎಂದು ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೊಮ್‌ ಪಾವೆಲ್ ತಿಳಿಸಿದ್ದಾರೆ.

‘ಕೇಂದ್ರೀಯ ಬ್ಯಾಂಕ್‌ ನಿರಾಸೆಗೊಳಿಸಿದೆ. ಆರ್ಥಿಕತೆಗೆ ಇದೊಂದು ಸೀಮಿತ ಉತ್ತೇಜನ ಕೊಡುಗೆಯಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.