ಆಕ್ಟೋಬರ್ 18 ರಿಂದ ಏಷ್ಯನ್ ಚಾಂಪಿಯನ್ಸ್ ಹಾಕಿ

0
654

ಏಷ್ಯನ್ ಗೇಮ್ಸ್​ನಲ್ಲಿ ನೀರಸವಾಗಿ ಆಡಿದ್ದ ಭಾರತ ಪುರುಷರ ಹಾಕಿ ತಂಡ ಗುರುವಾರ ಮಸ್ಕತ್​ನಲ್ಲಿ ಆರಂಭಗೊಳ್ಳಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.

ಮಸ್ಕತ್(ಓಮನ್): ಏಷ್ಯನ್ ಗೇಮ್ಸ್​ನಲ್ಲಿ ನೀರಸವಾಗಿ ಆಡಿದ್ದ ಭಾರತ ಪುರುಷರ ಹಾಕಿ ತಂಡ ಆಕ್ಟೋಬರ್ 18  ಗುರುವಾರ ಮಸ್ಕತ್​ನಲ್ಲಿ ಆರಂಭಗೊಳ್ಳಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಗುರುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ಓಮನ್ ತಂಡವನ್ನು ಎದುರಿಸಲಿರುವ ಭಾರತ ಶ್ರೇಷ್ಠ ನಿರ್ವಹಣೆ ತೋರುವ ಗುರಿಯಲ್ಲಿದೆ. ಭುವನೇಶ್ವರದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್ ಟೂರ್ನಿಗೆ ಇದು ಮಹತ್ವದ ಸಿದ್ಧತಾ ವೇದಿಕೆಯಾಗಿದೆ.

ಸುಲ್ತಾನ್ ಕ್ವಾಬೋಸ್ ಕ್ರೀಡಾ ಸಂರ್ಕಿಣದಲ್ಲಿ ಟೂರ್ನಿಯ ಎಲ್ಲ ಪಂದ್ಯಗಳು ನಡೆಯಲಿವೆ. ಏಷ್ಯಾಡ್​ನಲ್ಲಿ ಬಹುತೇಕ ಪಂದ್ಯಗಳಲ್ಲಿ ಗೋಲುಗಳ ಸುರಿಮಳೆಗರೆದರೂ, ಸೆಮಿಫೈನಲ್​ನಲ್ಲಿ ನಿರಾಸೆ ಮೂಡಿಸುವ ನಿರ್ವಹಣೆಯೊಂದಿಗೆ ಮಲೇಷ್ಯಾ ಎದುರು ಸೋತಿತ್ತು. ಆ ಬಳಿಕ ಕಂಚಿನ ಪದಕದೊಂದಿಗೆ ತವರಿಗೆ ಮರಳಿತ್ತು. 2 ಬಾರಿಯ ಮತ್ತು ಹಾಲಿ ಚಾಂಪಿಯನ್ ಕೂಡ ಆಗಿರುವ ಭಾರತ ರೌಂಡ್ ರಾಬಿನ್ ಮಾದರಿಯ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಇರಾದೆಯಲ್ಲಿದೆ. ವಿಶ್ವ ನಂ.5 ಭಾರತದೊಂದಿಗೆ ಮಲೇಷ್ಯಾ, ಪಾಕಿಸ್ತಾನ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಓಮನ್ ತಂಡದೊಂದಿಗೆ ಹೋರಾಟಕ್ಕಿಳಿಯಲಿದೆ.

ಭಾರತ ನಂತರ ಕ್ರಮವಾಗಿ ಪಾಕಿಸ್ತಾನ(ಅ.20), ಜಪಾನ್(ಅ.21), ಮಲೇಷ್ಯಾ(23), ದಕ್ಷಿಣ ಕೊರಿಯಾ(ಅ.24) ತಂಡಗಳನ್ನು ಎದುರಿಸಲಿದೆ. ಲೀಗ್ ಮುಕ್ತಾಯದ ನಂತರ ಗುಂಪಿನಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಉಪಾಂತ್ಯಕ್ಕೆ ಲಗ್ಗೆ ಇಡಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 28ರಂದು ನಡೆಯಲಿದೆ. 2016ರಲ್ಲಿ ನಡೆದ ಕೊನೆಯ ಟೂರ್ನಿಯಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ‘ತವರು ಅಭಿಮಾನಿಗಳ ಬೆಂಬಲದೊಂದಿಗೆ ಆಡಲಿರುವ ಓಮನ್ ನಮ್ಮ ಮೊದಲ ಸವಾಲು. ನಮಗಿದು ಪರೀಕ್ಷಾ ರೀತಿಯ ಪಂದ್ಯ. ಬಲಿಷ್ಠ ಮಲೇಷ್ಯಾ, ಪಾಕಿಸ್ತಾನವನ್ನು ಎದುರಿಸಲು ನೆರವಾಗಲಿದೆ. ಏಷ್ಯಾಡ್​ನಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿ ಮುಂದಿನ ವಿಶ್ವಕಪ್​ಗೆ ಸಜ್ಜಾಗಲು ನಮಗೆ ಸಿಕ್ಕ ಅವಕಾಶ ಇದು’ ಎಂದು ಕೋಚ್ ಹರೇಂದ್ರ ಸಿಂಗ್ ಹೇಳಿದ್ದಾರೆ.-ಏಜೆನ್ಸೀಸ್