ಆಕಾಶದಲ್ಲೇ ಇಂಧನ ಭರ್ತಿ: ತೇಜಸ್ ಯುದ್ದ ವಿಮಾನದ ತಾಲೀಮು ಯಶಸ್ವಿ

0
733

ಯುದ್ಧವಿಮಾನಗಳ ಕಾರ್ಯಾಚರಣೆಗೆ ಪೂರಕವಾದ ಆಕಾಶ ಮಾರ್ಗದಲ್ಲೇ ಇಂಧನ ತುಂಬಿಸುವ ತಾಲೀಮನ್ನು ದೇಶೀ ನಿರ್ಮಿತ ತೇಜಸ್ ಯುದ್ಧವಿಮಾನ ಯಶಸ್ವಿಯಾಗಿ ಪೂರ್ತಿಗೊಳಿಸಿದೆ.

ಬೆಂಗಳೂರು: ಯುದ್ಧವಿಮಾನಗಳ ಕಾರ್ಯಾಚರಣೆಗೆ ಪೂರಕವಾದ ಆಕಾಶ ಮಾರ್ಗದಲ್ಲೇ ಇಂಧನ ತುಂಬಿಸುವ ತಾಲೀಮನ್ನು ದೇಶೀ ನಿರ್ಮಿತ ತೇಜಸ್ ಯುದ್ಧವಿಮಾನ ಯಶಸ್ವಿಯಾಗಿ ಪೂರ್ತಿಗೊಳಿಸಿದೆ.

ಸೋಮವಾರ ಲಘು ಯುದ್ಧವಿಮಾನ ತೇಜಸ್‌ಗೆ ವಾಯುಪಡೆಯ ಐಎಲ್‌-78 ಮಿಡ್‌ಏರ್ ಟ್ಯಾಂಕರ್ ಏರ್‌ಕ್ರಾಫ್ಟ್‌ ಮೂಲಕ ಇಂಧನ ಭರ್ತಿಗೊಳಿಸಲಾಗಿದೆ. ಪೂರ್ಣ ಪ್ರಮಾಣದ ಕಾರ್ಯಾಚರಣೆಗೂ ಮೊದಲು ತೇಜಸ್ ಹಲವು ಪರೀಕ್ಷೆಗಳನ್ನು ಪೂರ್ತಿಗೊಳಿಸಬೇಕಿದ್ದು, ಅದರನ್ವಯ ಮಾರ್ಗಮಧ್ಯದಲ್ಲಿಯೇ ಇಂಧನ ಭರ್ತಿಯನ್ನು ಯಶಸ್ವಿಯಾಗಿ ಪೂರೈಸಿದೆ. 

ಸೆ. 4 ಮತ್ತು 6ರಂದು ತೇಜಸ್ ಇಂಧನ ಭರ್ತಿಗೆ ಯತ್ನಿಸಿತ್ತು. ಸೆಪ್ಟೆಂಬರ್ 10 ರ ಸೋಮವಾರ ತೇಜಸ್‌ ಎಲ್‌ಎಸ್‌ಪಿ-8 ವಿಮಾನಕ್ಕೆ ಮಾರ್ಗಮಧ್ಯದಲ್ಲೇ 1900 ಕೆಜಿ ಇಂಧನವನ್ನು ಪೂರೈಸಲಾಗಿದೆ. ತೇಜಸ್‌ನ ಎಲ್ಲ ಆಂತರಿಕ ಮತ್ತು ಡ್ರಾಪ್ ಟ್ಯಾಂಕ್‌ಗಳಲ್ಲಿ ಇಂಧನ ಭರ್ತಿಯಾಗಿದೆ. 

ಸೋಮವಾರದ ಕಾರ್ಯಾಚರಣೆಯ ಸಂದರ್ಭ ತೇಜಸ್ ತಯಾರಕ ಸಂಸ್ಥೆ ಎಚ್‌ಎಎಲ್ ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ತಜ್ಞರು ಮತ್ತು ನ್ಯಾಶನಲ್ ಫ್ಲೈಟ್ ಟೆಸ್ಟ್‌ ಸೆಂಟರ್‌ನ ಅಧಿಕಾರಿಗಳು ಉಪಸ್ಥಿತರಿದ್ದರು. 

ತಾಲೀಮು ಯಶಸ್ವಿಯಾಗುವುದರೊಂದಿಗೆ ಮಾರ್ಗಮಧ್ಯದಲ್ಲೇ ಇಂಧನ ತುಂಬಿಸುವ ಏರ್‌ ಟು ಏರ್ ವ್ಯವಸ್ಥೆ ಹೊಂದಿರುವ ಮಿಲಿಟರಿ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ.